ಜೆಡಿಎಸ್‌ನ 10-12 ಶಾಸಕರು ಶೀಘ್ರದಲ್ಲೇ ಕಾಂಗ್ರೆಸ್‌ ಸೇರ್ಪಡೆ

KannadaprabhaNewsNetwork |  
Published : Mar 14, 2024, 02:02 AM IST
13ಕೆಆರ್ ಎಂಎನ್ 1.ಜೆಪಿಜಿಶಾಸಕ ಇಕ್ಬಾಲ್ ಹುಸೇನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಲೋಕಸಭಾ ಚುನಾವಣೆಗು ಮುನ್ನವೇ ಜೆಡಿಎಸ್ ನ 10 -12 ಶಾಸಕರು ಪಕ್ಷದ ತತ್ವ ಸಿದ್ದಾಂತ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಯಕತ್ವ ಒಪ್ಪಿಕೊಂಡು ಕಾಂಗ್ರೆಸ್‌ಗೆ ಸೇರ್ಪಡೆಯಾಗಲು ಸಿದ್ಧರಾಗಿದ್ದಾರೆ ಎಂದು ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಹೊಸ ಬಾಂಬ್ ಸಿಡಿಸಿದರು.

ರಾಮನಗರ: ಲೋಕಸಭಾ ಚುನಾವಣೆಗು ಮುನ್ನವೇ ಜೆಡಿಎಸ್ ನ 10 -12 ಶಾಸಕರು ಪಕ್ಷದ ತತ್ವ ಸಿದ್ದಾಂತ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಯಕತ್ವ ಒಪ್ಪಿಕೊಂಡು ಕಾಂಗ್ರೆಸ್‌ಗೆ ಸೇರ್ಪಡೆಯಾಗಲು ಸಿದ್ಧರಾಗಿದ್ದಾರೆ ಎಂದು ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಹೊಸ ಬಾಂಬ್ ಸಿಡಿಸಿದರು.

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎ.ಬಿ.ಚೇತನ್ ಕುಮಾರ್ ಅವರನ್ನು ಅಭಿನಂದಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಬೇಸರಗೊಂಡಿರುವ 10-12 ಶಾಸಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಇನ್ನುಳಿದ 6-7 ಶಾಸಕರನ್ನು ಇಟ್ಟುಕೊಂಡು ಅವರು ತಾನೆ ಏನು ಮಾಡ್ತಾರೆ ಎಂದು ಪ್ರಶ್ನಿಸಿದರು.

ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ನಾನೇನು ಮಾತನಾಡಿಲ್ಲ. ನಾವು ಯಾರನ್ನೂ ಕರೆದಿಲ್ಲ. ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ಸಿದ್ಧಾಂತ ಇತ್ತು. ಆ ಪಕ್ಷದ ಶಾಸಕರಿಗೆ ಒಂದು ಸಿದ್ಧಾಂತ ಬೇಕಾಗಿದ್ದ ಕಾರಣ ಜೆಡಿಎಸ್‌ನಲ್ಲಿದ್ದರು. ಆದರೀಗ ವರಿಷ್ಠರು ಎಲ್ಲ ಸಿದ್ಧಾಂತಗಳನ್ನು ಗಾಳಿಗೆ ತೂರಿ ಬಿಜೆಪಿ ಜೊತೆ ಹೋದಾಗ ಆ ಶಾಸಕರು ತಾನೇ ಏನು ಮಾಡುತ್ತಾರೆ. ತಮಗೆ ಒಪ್ಪಿಗೆಯಾಗುವ ಸಿದ್ಧಾಂತವಿರುವ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ. ಜೆಡಿಎಸ್ ಶಾಸಕರು ಸಮಾಜದಲ್ಲಿ ಗೌರವ ಉಳಿಸಿಕೊಳ್ಳಬೇಕಿದೆ. ಆ ದೃಷ್ಟಿಯಿಂದ ಯಾವುದೇ ಆಮಿಷ ಇಲ್ಲದೆ ಕಾಂಗ್ರೆಸ್ ಸಿದ್ಧಾಂತ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಯಕತ್ವ ಒಪ್ಪಿ ಕಾಂಗ್ರೆಸ್ ಸೇರಲು ಸಿದ್ಧರಾಗಿದ್ದಾರೆ. ನನ್ನ ನೇತೃತ್ವದಲ್ಲಿ ಯಾರು ಬರಲ್ಲ. ನಾನು ಯಾರನ್ನೂ ಸಂಪರ್ಕಿಸಿಯೂ ಇಲ್ಲ. ಆದರೆ, ಜೆಡಿಎಸ್ ಶಾಸಕರು ನನ್ನನ್ನು ಬಹಳ ಇಷ್ಟ ಪಡುತ್ತಾರೆ. ನಮ್ಮ ಮೇಲೆಯೇ ಗೆದ್ದಿದ್ದಿಯಲ್ಲ ಬಾರಪ್ಪ ಅಂತ ಆತ್ಮೀಯತೆಯಿಂದ ಮಾತನಾಡುತ್ತಾರೆ ಎಂದು ಇಕ್ಬಾಲ್ ತಿಳಿಸಿದರು.

ನಮ್ಮ ನಾಯಕರಲ್ಲ, ನೀವು ಕಿರಾತಕರು :

ನಿಮ್ಮನ್ನು ಕೈ ಎತ್ತಿ ಮುಖ್ಯಮಂತ್ರಿ ಮಾಡಿದಾಗ ಕಿರಾತಕರಲ್ಲ, ನಿಮ್ಮ ಧರ್ಮ ಪತ್ನಿಯವರನ್ನು ಶಾಸಕರನ್ನಾಗಿ ಮಾಡಲು ಓಡಾಡಿದಾಗ ಕಿರಾತಕರಲ್ಲ. ಈಗ ಮುಸ್ಲಿಂ ಶಾಸಕರಾದ ತಕ್ಷಣಕ್ಕೆ ನೀವು ಕಿರಾತಕರು ಅನ್ನುತ್ತಿರುವುದು ಎಷ್ಟು ಸರಿ. ನಮ್ಮ ನಾಯಕರಲ್ಲ, ನೀವು ಕಿರಾತಕರು. ಮೊದಲು ನಿಮ್ಮಲ್ಲಿನ ಲೋಪಗಳನ್ನು ಸರಿಪಡಿಸಿಕೊಳ್ಳಿ. ನೀವು ಸರಿ ಹೋದರೆ ಎಲ್ಲವೂ ಸರಿ ಹೋಗುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ನೀವೀಗ ಬಿಜೆಪಿ ವಕ್ತಾರರಾಗಿ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಪಕ್ಷದ ತತ್ವ ಸಿದ್ಧಾಂತವನ್ನೇ ಮರೆತಿದ್ದೀರಿ. ನಿಮ್ಮ ಪಕ್ಷದ ಶಾಲನ್ನೂ ಮರೆತಿದ್ದೀರಿ. ಇನ್ಯಾವುದೊ ಪಕ್ಷದ ಶಾಲು ಹಾಕಿಕೊಳ್ಳುತ್ತಿದ್ದೀರಿ ಎಂದು ಇಕ್ಬಾಲ್ ಹುಸೇನ್ ಛೇಡಿಸಿದರು.

ನಿಮಗೆ ಮನಸ್ಸಿದ್ದರೆ ಉಡುಗೊರೆ ಕೊಡಿ:

ನಾವು ಹಬ್ಬ ಹುಣ್ಣಿಮೆ ಬಂದಾಗ ಜನರಿಗೆ ಉಡುಗೊರೆ ಕೊಡುತ್ತೇವೆ. ನಿಮಗೆ ಮನಸ್ಸಿದ್ದರೆ ಕೊಡಿ. ಇಲ್ಲದಿದ್ದರೆ ಪ್ರಚಾರ ಮಾಡುವ ಅ‍ವಶ್ಯಕತೆ ಇಲ್ಲ. ಉಡುಗೊರೆ ಕೊಡುವಷ್ಟು ಶಕ್ತಿ, ಮನಸ್ಸು, ಹೃದಯ ವೈಶಾಲತೆ ಭಗವಂತ ನಮಗೆ ಕೊಟ್ಟಿದ್ದಾನೆ. ನಿಮ್ಮ ಮಗನ ಮದುವೆಗೆ ಪಂಚೆ, ಚಡ್ಡಿ ಎಲ್ಲವನ್ನು ಕೊಟ್ಟಿದ್ದು ಮರೆತು ಹೋಯಿತಾ ಎಂದು ಪ್ರಶ್ನಿಸಿದರು.

ನಾವು ಎಲ್ಲ ವರ್ಗದ ಜನರ ಶ್ರೇಯಸ್ಸನ್ನು ಬಯಸುವವರು. ಐದು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಚುನಾವಣೆ ಮಾತ್ರವಲ್ಲ ಎಲ್ಲ ಸಂದರ್ಭದಲ್ಲಿಯೂ ನಾವು ಉಡುಗೊರೆ ಕೊಡುತ್ತೇವೆ. ನಾವೆಲ್ಲರು ಇದೇ ಮಣ್ಣಿನ ಮಕ್ಕಳು. ಗಿಫ್ಟ್ ಕಾರ್ಡ್ ಕೊಟ್ಟು ಗೆದ್ದರೆಂದು ನಮ್ಮ ಮೇಲೆ ಕೇಸು ಹಾಕಿದ್ದಾರೆ. ಹಾಗಾದರೆ ನೀವೂ ಗಿಫ್ಟ್ ಕಾರ್ಡ್ ಕೊಟ್ಟು 130 ಸ್ಥಾನ ಗೆಲ್ಲಬೇಕಿತ್ತು. ನಿಮಗೇನು ಕಡಿಮೆ ಆಗಿತ್ತು ಎಂದು ಇಕ್ಬಾಲ್ ಹುಸೇನ್ ಪ್ರಶ್ನೆ ಮಾಡಿದರು. ಪ್ರಾಧಿಕಾರದ ಸದಸ್ಯರಾದ ಪರ್ವೇಜ್ ಪಾಷಾ, ವಿ.ಕೆ.ಶ್ರೀದೇವಿ, ಪ್ರವೀಣ್ , ಶ್ರೀನಿವಾಸ ಇತರರಿದ್ದರು.

ಬಾಕ್ಸ್‌..............

ಡಾ.ಮಂಜುನಾಥ್‌ರನ್ನು ಹರಕೆ ಕುರಿ ಮಾಡುವ ಹುನ್ನಾರ

ರಾಮನಗರ: ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು, ಜಿಲ್ಲೆಯನ್ನು ಕ್ಲೀನ್ ಮಾಡಿದವರು, ಆಧುನಿಕ ಭಗೀರಥ ಎಂದೆಲ್ಲ ಬಿಂಬಿಸಿಕೊಳ್ಳುವ ನಾಯಕರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ತಾಕತ್ತು, ಗಂಡಸ್ತನ ಇಲ್ಲ. ಒಬ್ಬ ಅಮಾಯಕ ಡಾಕ್ಟರ್ ಅನ್ನು ನಿಲ್ಲಿಸಿ ಹರಕೆಯ ಕುರಿ ಮಾಡಲು ಹೊರಟಿದ್ದಾರೆ ಎಂದು ಜೆಡಿಎಸ್ - ಬಿಜೆಪಿ ನಾಯಕರ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಯದೇವ ಹೃದ್ರೋಗ ಸಂಸ್ಥೆ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಒಳ್ಳೆಯ ವೈದ್ಯರು. ಸಮಾಜದಲ್ಲಿ ತಮ್ಮದೇ ಆದ ಗೌರವ ಹೊಂದಿದ್ದಾರೆ. ರಾಜಕಾರಣದಲ್ಲಿ ಅಮಾಯಕರು. ಯಾರೂ ಸಿಗಲಿಲ್ಲ ಅಂತ ಅವರನ್ನು ಕರೆತಂದು ಹರಕೆ ಕುರಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಎರಡು ಬಾರಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದ ಕುಮಾರಸ್ವಾಮಿ, ಆಧುನಿಕ ಭಗೀರಥ ಎಂದು ಕರೆಸಿಕೊಳ್ಳುವ ಸಿ.ಪಿ.ಯೋಗೇಶ್ವರ್ ಹಾಗೂ ಜಿಲ್ಲೆಯನ್ನು ಕ್ಲೀನ್ ಮಾಡಿದ ಅಶ್ವತ್ಥ ನಾರಾಯಣ ಏಕೆ ಸ್ಪರ್ಧೆ ಮಾಡುತ್ತಿಲ್ಲ. ಇವರು ಮಾತ್ರವಲ್ಲದೆ ಬೇಕಾದಷ್ಟು ರಾಜಕಾರಣಿಗಳು ಇದ್ದಾರಲ್ಲ. ಮಂಜುನಾಥ್ ಅವರನ್ನೇ ನಿಲ್ಲಿಸುತ್ತಿದ್ದಾರೆ ಅಂದರೆ ನಿಮಗೆ ತಾಕತ್ತು, ಗಂಡಸ್ತನ ಇಲ್ಲವೆಂದು ಅರ್ಥ ಎಂದು ಟೀಕಿಸಿದರು.

ಡಿ.ಕೆ.ಸಹೋದರರು ಸೋಲಿಲ್ಲದ ಸರದಾರರು. ಜಾತಿ ಮೇಲೆ ರಾಜಕಾರಣ ಮಾಡಲು ಹೋದವರು ಏನಾದರು ಎಂಬುದು ಜನರಿಗೆ ಗೊತ್ತಾಗಿದೆ. ರಾಮನಗರದಲ್ಲಿ ಜಾತಿ ಮೇಲೆ ಚುನಾವಣೆ ನಡೆಸಲು ಆಗುವುದಿಲ್ಲ. ಪ್ರೀತಿ ನೀತಿ ಮೇಲೆ ಚುನಾವಣೆ ನಡೆಯುತ್ತದೆ. ನಾವು ಪ್ರೀತಿ ನೀತಿ ಮೇಲೆ ಪಕ್ಷ ಕಟ್ಟುತ್ತಿದ್ದೇವೆ. ಕಾಂಗ್ರೆಸ್ ಸಿದ್ಧಾಂತದ ಮೇಲೆಯೇ ನಡೆಯುತ್ತಿದ್ದೇವೆ.

ಸಂಸತ್ ಚುನಾವಣೆಯಲ್ಲಿ ಯಾರೇ ಸ್ಪರ್ಧೆ ಮಾಡಲಿ ಭಯವಿಲ್ಲ. ಜೆಡಿಎಸ್ - ಬಿಜೆಪಿಯಲ್ಲಿ ಡಿ.ಕೆ.ಸುರೇಶ್‌ಗೆ ಸರಿಸಮಾನವಾಗಿ ನಿಲ್ಲುವವರು ಯಾರೂ ಇಲ್ಲ. ಈಗ ಡಾ.ಮಂಜುನಾಥ್ ಅವರನ್ನು ಅಭ್ಯರ್ಥಿ ಮಾಡಲು ಹೊರಟಿರುವುದು ನಿಮ್ಮ ಕುಟುಂಬದವರನ್ನು ಬಿಟ್ಟು ಬೇರೆ ಯಾರೂ ಇಲ್ಲವೇ ಅಥವಾ ನಿಮಗೆ ಶಕ್ತಿ ಇಲ್ಲ ಅಂತ ಅರ್ಥವೇ ಎಂದು ಇಕ್ಬಾಲ್ ಹುಸೇನ್ ಪ್ರಶ್ನೆ ಮಾಡಿದರು.13ಕೆಆರ್ ಎಂಎನ್ 1.ಜೆಪಿಜಿ

ಶಾಸಕ ಇಕ್ಬಾಲ್ ಹುಸೇನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ