ಹುಣಸೂರು ತಾಲೂಕಿನಲ್ಲಿ 10 ಬಾಲ್ಯವಿವಾಹ ಪ್ರಕರಣಗಳನ್ನು ಪತ್ತೆ: ಹರೀಶ್

KannadaprabhaNewsNetwork | Published : Aug 1, 2024 12:33 AM

ಸಾರಾಂಶ

ಹುಣಸೂರು ತಾಲೂಕಿನಲ್ಲಿ ಅಪೌಷ್ಟಿಕತೆಗೆ ಒಳಗಾಗಿರುವ 31 ಮಕ್ಕಳನ್ನು ಗುರುತಿಸಲಾಗಿದ್ದು, ಸೂಕ್ತ ಪೌಷ್ಠಿಕ ಆಹಾರಗಳ ವಿತರಣಗೆ ಕ್ರಮವಹಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಒಟ್ಟು 1,690 ಅರ್ಜಿಗಳು ಬಂದಿದ್ದು, 990 ಪಾಸ್ ಪುಸ್ತಕ ವಿತರಣೆ ಮಾಡಲಾಗಿದ್ದು ಉಳಿಕೆಗೆ ಕ್ರಮವಹಿಸಲಾಗುವುದು ಪೋಷಣ್ ಅಭಿಯಾನ ಯೋಜನೆಇಡಿ 16,890 ಗರ್ಭಿಣಿ ಬಾಣಂತಿಯರನ್ನು ಗುರುತಿಸಿ ಎಲ್ಲರಿಗೂ ಪೌಷ್ಟಿಕ ಆಹಾರವನ್ನು ವಿತರಿಸಲು ಕ್ರಮವಹಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹುಣಸೂರು

2024-25ನೇ ಪ್ರಸ್ತುತ ಸಾಲಿನಲ್ಲಿ ಈವರೆಗೆ ತಾಲೂಕಿನಲ್ಲಿ 10 ಬಾಲ್ಯವಿವಾಹ ಪ್ರಕರಣಗಳನ್ನು ಪತ್ತೆಹಚ್ಚಿದ್ದು, ಈ ಪೈಕಿ 6 ಪ್ರಕರಣಗಳನ್ನು ತಡೆ ಹಿಡಿಯಲಾಗಿದ್ದು, 4 ಪ್ರಕರಣಗಳಿಗೆ ಎಫ್.ಐಆರ್ ದಾಖಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ದಿ ಯೋಜನಾಧಿಕಾರಿ (ಸಿಡಿಪಿಒ) ಹರೀಶ್ ಹೇಳಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಮಾಹಿತಿ ನೀಡಿದ ಅವರು, ತಾಲೂಕಿನಲ್ಲಿ ಅಪೌಷ್ಟಿಕತೆಗೆ ಒಳಗಾಗಿರುವ 31 ಮಕ್ಕಳನ್ನು ಗುರುತಿಸಲಾಗಿದ್ದು, ಸೂಕ್ತ ಪೌಷ್ಠಿಕ ಆಹಾರಗಳ ವಿತರಣಗೆ ಕ್ರಮವಹಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಒಟ್ಟು 1,690 ಅರ್ಜಿಗಳು ಬಂದಿದ್ದು, 990 ಪಾಸ್ ಪುಸ್ತಕ ವಿತರಣೆ ಮಾಡಲಾಗಿದ್ದು ಉಳಿಕೆಗೆ ಕ್ರಮವಹಿಸಲಾಗುವುದು ಪೋಷಣ್ ಅಭಿಯಾನ ಯೋಜನೆಇಡಿ 16,890 ಗರ್ಭಿಣಿ ಬಾಣಂತಿಯರನ್ನು ಗುರುತಿಸಿ ಎಲ್ಲರಿಗೂ ಪೌಷ್ಟಿಕ ಆಹಾರವನ್ನು ವಿತರಿಸಲು ಕ್ರಮವಹಿಸಲಾಗಿದೆ ಎಂದರು.

26 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು:

ತಾಲೂಕಿನಲ್ಲಿ 26 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, 23 ಪ್ರಕರಣಗಳು ರಾಜಿ ಸಂದಾನದ ಮೂಲಕ ಇತ್ಯರ್ಥ ಮಾಡಲಾಗಿದ್ದು, ಮೂರು ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾಖಲಿಸಿದೆ. ಮಾತೃವಂದನಾ ಯೋಜನೆಯಡಿ 1,925 ಅರ್ಜಿಗಳು ಸ್ವೀಕೃತವಾಗಿದ್ದು, 1,886 ಮಂಜೂರಾಗಿರುತ್ತದೆ. ಇಲಾಖೆಯ ಎಲ್ಲ ಯೋಜನೆಗಳ ಅನುಷ್ಟಾನಕ್ಕೆ ಇತರ ಎಲ್ಲ ಇಲಾಖೆಯ ಸಹಕಾರ ಬೇಕು ಎಂದು ಕೋರಿದರು.

ಸಮಿತಿ ಸದಸ್ಯ, ಬೆಳಕು ಸೇವಾ ಸಂಸ್ಥೆಯ ಮುಖ್ಯಸ್ಥ ನಿಂಗರಾಜ ಮಲ್ಲಾಡಿ ಮಾತನಾಡಿ, ಹುಣಸೂರು ಪಟ್ಟಣ ವ್ಯಾಪ್ತಿಯಲ್ಲಿ ಗುಜರಿಯಲ್ಲಿ ಬಾಲ ಕಾರ್ಮಿಕರು ದುಡಿಯತ್ತಿದ್ದು, ಅವರನ್ನು ರಕ್ಷಿಸುವ ಮತ್ತು ಶಿಕ್ಷಣ ನೀಡುವ ಕಾರ್ಯ ನಡೆಸಬೇಕಿದೆ ಎಂದರು.

ತಾಲೂಕಿನ ಹಾಡಿಗಳಲ್ಲಿ ಬಾಲ್ಯ ವಿವಾಹ ಪದ್ಧತಿ ಜಾರಿಯಲ್ಲಿದ್ದು, ಅಲ್ಲಿ ಅರಿವು ಮೂಡಿಸುವ ಕಾರ್ಯ ಸತತವಾಗಿ ನಡೆಯಬೇಕಿದೆ. ಅನಾಥ ಮಕ್ಕಳು ಮತ್ತು ಪೋಷಕರನ್ನು ಹೊಂದಿ ಬಡತನಕ್ಕೆ ಸಿಲುಕಿರುವ ಕುಟುಂಬದ ಬಾಲಕರು ಬೀದಿಗೆ ಬೀಳುವ ಪರಿಸ್ಥಿತಿ ಇದ್ದು ತಾಲೂಕು ಆಡಳಿತ ಗಮನಹರಿಸಬೇಕೆಂದು ಒತ್ತಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಮಂಜುನಾಥ್, ಇಷ್ಟೊಂದು ಆಡಳಿತದ ವ್ಯವಸ್ಥೆಯಿದ್ದರೂ ಚಿಕ್ಕವಯಸ್ಸಿನಲ್ಲೇ ಪೋಷಕರು ಬಾಲ್ಯ ವಿವಾಹ ಪ್ರಕರಣಗಳು ನಡೆದಿರುವುದು ಕಳವಳಕಾರಿಯಾಗಿದೆ. ಅವರಿಗೆ ಕಾನೂನಿನ ಅರಿವು ಇರಲಿಲ್ಲವೆ? ಈ ಬಾಲ್ಯ ವಿವಾಹಗಳು ನಡೆಯಲು ಆ ಕುಟುಂಬಗಳ ಸಾಮಾಜಿಕ ಸಮಸ್ಯೆಗಳೇನು ಎಂಬುವುದರ ಬಗ್ಗೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸವನ್ವಯತೆಯಿಂದ ಅಧ್ಯಯನ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ ಈ ಬಾಲ್ಯ ವಿವಾಹವನ್ನು ತಡೆಗಟ್ಟಲು ಶ್ರಮಿಸಬೇಕು. ತಾಲೂಕಿನಲ್ಲಿ ಬಾಲ್ಯವಿವಾಹದ ಪ್ರಕರಣವನ್ನು ಜಿಲ್ಲೆಯಲ್ಲಿ ಝೀರೋ ಅಂಕಿಯಾಗಿ ಘೋಷಣೆ ಮಾಡಲು ಪಣತೊಡಿರೆಂದರು.

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ, ಮಹಿಳಾ ಸಂರಕ್ಷಣಾಧಿಕಾರಿ ಜಯಂತಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಶಿಕ್ಷಣ ಸಂಯೋಜಕ ಕುಮಾರಸ್ವಾಮಿ, ಕಾರ್ಮಿಕ ಇಲಾಖೆಯ ಅಧಿಕಾರಿ ಭಾಸ್ಕರ್, ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಯ ರಘು, ಎಎಸ್ಐಗಳಾದ ಲಕ್ಷ್ಮಮ್ಮ, ರಾಘವೇಂದ್ರ, ತಿಮ್ಮರಾಜನಾಯ್ಕ ಇದ್ದರು.

Share this article