ಯಾದಗಿರಿ ಪಿಎಸ್‌ಐ ಸಾವು ಪ್ರಕರಣ
ಹಗಲು ವೇಳೆಯಲ್ಲಿ ಕರ್ತವ್ಯ, ರಾತ್ರಿ ಪೂರ್ತಿ ಓದು
ಸೋಮರಡ್ಡಿ ಅಳವಂಡಿ
ಪಿಎಸ್ಐ ಆಗಲೇಬೇಕು ಎಂದು ಹಠ ತೊಟ್ಟಿದ್ದ ಪರಶುರಾಮ ಅರಸಿ ಬಂದಿದ್ದ 10 ಸರ್ಕಾರಿ ನೌಕರಿಗಳನ್ನು ತ್ಯಜಿಸಿ, ಹಠಕ್ಕೆ ಬಿದ್ದು, ಹಗಲಿರುಳು ಓದಿ, ಪಿಎಸ್ಐ ಆಗಿದ್ದ, ವರ್ಗಾವಣೆ ದಂಧೆಯ ಒತ್ತಡದಿಂದಾಗಿ ಈಗ ಉಸಿರು ಚೆಲ್ಲಿದ್ದಾರೆ ಎನ್ನಲಾಗುತ್ತಿದೆ.
ಗ್ರಾಮದಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿ, ನಂತರ ತಾಲೂಕು ವ್ಯಾಪ್ತಿಯಲ್ಲಿ ಪ್ರೌಢ ಮತ್ತು ಪಿಯು ಶಿಕ್ಷಣ ಪೂರ್ಣಗೊಳಿಸಿ, ಧಾರವಾಡ ಕೆಸಿಡಿ ಕಾಲೇಜಿನಲ್ಲಿ ಪದವಿ ಅಭ್ಯಾಸ ಮಾಡಿದ್ದಾರೆ.
ಪಿಎಸ್ಐ ಪರಶುರಾಮ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿಯಲ್ಲಿ ನಾಲ್ಕು ವಿಷಯಗಳಲ್ಲಿ ಫೇಲಾಗಿದ್ದ. ಇದರಿಂದ ಮಾನಸಿಕವಾಗಿ ನೊಂದು ಕೂಲಿ ಮಾಡಲು ಬೆಂಗಳೂರಿಗೆ ಹೋಗಿದ್ದ. ಗಾಲ್ಫ್ ಮೈದಾನದಲ್ಲಿ ನೀರು ಬೀಡುವ ಕೆಲಸ ಮಾಡುತ್ತಿದ್ದನಂತೆ. ಕೊನೆಗೆ ಮತ್ತೆ ಗ್ರಾಮಕ್ಕೆ ಬಂದು, ಪಿಯುಸಿ ಪಾಸಾಗಿ, ನಂತರ ಮನೆಯವರನ್ನು ಒಪ್ಪಿಸಿ, ಕಲಾ ವಿಭಾಗಕ್ಕೆ ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಪದವಿ ಪ್ರವೇಶ ಪಡೆದ, ಅಲ್ಲಿಂದ ಈತನ ದಿಕ್ಕೆ ಬದಲಾಯಿತು, ಮುಂದಿನದೆಲ್ಲ ಯಶಸ್ಸು.
ಪರಿಪರಿಯಾಗಿ ಬೇಡಿಕೊಂಡಿದ್ದ:
ಪಿಎಸ್‌ಐ ಆಗಿ ಯಾದಗಿರಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಕೇವಲ ಏಳು ತಿಂಗಳಿಗೆ ವರ್ಗಾವಣೆಯಾಗುತ್ತದೆ. ಇದರಿಂದ ತೀವ್ರ ಮನನೊಂದಿದ್ದ ಪರಶುರಾಮ ತಮ್ಮ ಹಿತೈಷಿಗಳನ್ನು ಸಂಪರ್ಕ ಮಾಡಿ, ನನಗೆ ಇಲ್ಲಿಯೇ ಮುಂದುವರೆಯಲು ಅವಕಾಶ ಕೊಡಿಸಿ ಎಂದು ಕೇಳಿಕೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶಿಫಾರಸ್ಸು ಮಾಡಿದರೆ ನಾನು ಮುಂದುವರೆಯಬಹುದು. ದಯಮಾಡಿ ಯಾರಿಗಾದರೂ ಹೇಳಿ ಎಂದೆಲ್ಲ ಬೇಡಿಕೊಂಡಿದ್ದಾನೆ. ಆದರೆ, ಸಿಗಬೇಕಾದ ಸ್ಪಂದನೆ ಸಿಕ್ಕಿಲ್ಲ. ಈಗ ಸಾವನ್ನಪ್ಪಿದ್ದು, ಅವರ ಸಂಬಂಧಿಕರು ಸ್ನೇಹಿತರಿಗೆ ದೊಡ್ಡ ಶಾಕ್ ಆಗಿದೆ.ಪಿಎಸ್‌ಐ ಪರಶುರಾಮ ಅವರ ಸಾವಿಗೆ ಅವರ ಸ್ನೇಹಿತರ ವಲಯ ಭಾರಿ ಕಂಬನಿ ಮಿಡಿದಿದೆ. ದೇವರ ನಿರ್ಣಯಕ್ಕೆ ಧಿಕ್ಕಾರ ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಪೋಸ್ ಮಾಡಿದ್ದಾರೆ.
ಎಲ್ಲರ ಒಡನಾಡಿ:ಪರಶುರಾಮ ಎಲ್ಲರ ಒಡನಾಡಿಯಾಗಿದ್ದ, ಮನೆಯವರು, ಸಂಬಂಧಿಕರು, ಸ್ನೇಹಿತರು ಎಂದರೆ ಪಂಚಪ್ರಾಣ ಆತನಿಗೆ ಎನ್ನುತ್ತಾರೆ ಸಹೋದರ ಹನುಮಂತಪ್ಪ.ನಮ್ಮ ಮನೆಯಲ್ಲಿ ಆತನೊಬ್ಬನೇ ನೌಕರನಾಗಿದ್ದ. ಬಹಳ ಕಷ್ಟಪಟ್ಟು ನೌಕರಿ ಸೇರಿಕೊಂಡಿದ್ದ, ಒಂದಲ್ಲ, ಹತ್ತು ಹುದ್ದೆಗಳು ಬಂದಿದ್ದರೂ ತ್ಯಜಿಸಿ, ಪಿಎಸ್‌ಐ ಆಗಲೇಬೇಕು ಎಂದು ಹಠ ತೊಟ್ಟು ಕೊನೆಗೂ ಪಿಎಸ್‌ಐ ಆಗಿದ್ದ, ಆದರೆ ಏನು ಮಾಡುವುದು ಈಗ ನಮ್ಮಿಂದ ದೂರವಾಗಿದ್ದಾನೆ. ಪಿಎಸ್‌ಐ ಆಗಿದ್ದ 6 ವರ್ಷದಲ್ಲಿಯೇ ಸಾವನ್ನಪ್ಪಿದ್ದಾನೆ. ನಮಗೆ ದಿಕ್ಕು ತಿಳಿಯದಾಗಿದೆ ಎಂದು ಸಹೋದರ ಹನುಮಂತಪ್ಪ ಬಿಕ್ಕಿ ಬಿಕ್ಕಿ ಅಳುತ್ತಾರೆ.