ದಾವಣಗೆರೆ: ಅಕ್ರಮವಾಗಿ ಗಾಂಜಾ ಸಂಗ್ರಹಿಸಿ, ಮಾರಾಟ ಮಾಡುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿದ ಪೊಲೀಸರು ರೈಲ್ವೆ ಹಳಿಗಳ ಕಾಮಗಾರಿ ಕೆಲಸಕ್ಕೆಂದು ಬಂದು, ಗಾಂಜಾವನ್ನೂ ತಂದಿದ್ದ ಒರಿಸ್ಸಾ ಮೂಲದ ಇಬ್ಬರು ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ₹10 ಲಕ್ಷ ಮೌಲ್ಯದ 10 ಕೆಜಿ ಗಾಂಜಾ, 1 ಬೈಕ್ ಜಪ್ತಿ ಮಾಡಿರುವ ಘಟನೆ ಹರಿಹರ ನಗರದಲ್ಲಿ ನಡೆದಿದೆ.
ಒರಿಸ್ಸಾದ ಗಂಜಾಮ್ ಜಿಲ್ಲೆಯ ಖಾಲಿಕೋಟೆ ತಾಲೂಕು ಕಂಚನ್ ಗ್ರಾಮದ ಕಾಂಕ್ರೀಟ್ ಕೆಲಸಗಾರ ಕೇಸಬಾ ಮೊಹಾಂತಿ (24), ಅದೇ ಊರಿನ ಕೂಲಿ ಕೆಲಸಗಾರ ಸುಮಂತ ಸಾಹು (25) ಹಾಗೂ ಹರಿಹರದ ಬೆಂಕಿ ನಗರದ ಸರ್ಕಾರಿ ಶಾಲೆ ಹತ್ತಿರದ 1ನೇ ಮುಖ್ಯ ರಸ್ತೆಯ ವಾಸಿ, ಕಾಂಕ್ರೀಟ್ ಕೆಲಸಗಾರ ಸೈಯದ್ ಸಾದಿಕ್ (27) ಆರೋಪಿಗಳು. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಕೇಸಬಾ ಮೊಹಾಂತಿ ಹಾಗೂ ಸುಮಂತ ಸಾಹು ಹರಿಹರ ವ್ಯಾಪ್ತಿಯಲ್ಲಿ ರೈಲ್ವೆ ಹಳಿಗಳ ಕಾಮಗಾರಿಯಲ್ಲಿ ಕಾಂಕ್ರೀಟ್ ಕೆಲಸಕ್ಕೆ ಬಂದವರು. ಒರಿಸ್ಸಾದಿಂದ ಬರುವಾಗ ಗಾಂಜಾವನ್ನು ಸಹ ತಂದಿದ್ದರು. ಹರಿಹರದಲ್ಲಿ ಮಾದಕ ವಸ್ತುಗಳ ಸೇವನೆ ಮಾಡುವವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಈ ವೇಳೆ ಮಾದಕ ವ್ಯಸನಿಗಳಿಗೆ ಸಿಗುತ್ತಿದ್ದ ಗಾಂಜಾದ ಮೂಲ ಬೆನ್ನುಹತ್ತಿದಾಗ ಹರಿಹರದಲ್ಲಿ ಗಾಂಜಾ ಸಾಗಾಟ, ಮಾರಾಟ ವಿಚಾರ ಸ್ಪಷ್ಟವಾಗಿದೆ. ಹರಿಹರದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಗಾಂಜಾ ಸಂಗ್ರಹ ಹಾಗೂ ಮಾರಾಟದ ಬಗ್ಗೆ ದೊರೆತ ಖಚಿತ ಮಾಹಿತಿ ಆದರಿಸಿ ಪೊಲೀಸರು ದಾಳಿ ನಡೆಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ ಮಾರ್ಗದರ್ಶನದಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಉಪಾಧೀಕ್ಷಕ ಬಿ.ಎಸ್.ಬಸವರಾಜ ನೇತೃತ್ವದಲ್ಲಿ ಅಧಿಕಾರಿ, ಸಿಬ್ಬಂದಿ ದಾಳಿ ನಡೆಸಿದ್ದರು.ಹರಿಹರ ನಗರ ಪೊಲೀಸ್ ನಿರೀಕ್ಷಕ ದೇವಾನಂದ, ವೃತ್ತ ನಿರೀಕ್ಷಕರಾದ ಸುರೇಶ ಸಗರಿ, ಪಿಎಸ್ಐಗಳಾದ ಶ್ರೀಪತಿ ಗಿನ್ನಿ, ಜಿ.ಎಸ್.ವಿಜಯ, ಮಂಜುನಾಥ ಕುಪ್ಪೇಲೂರ, ಸಿಬ್ಬಂದಿ ನಾಗರಾಜ ಸುಣಗಾರ, ಲಿಂಗರಾಜ, ಸಿದ್ದೇಶ, ಹೇಮಾ ನಾಯ್ಕ, ಆರ್.ರವಿ, ಕೆ.ಸಿ. ರುದ್ರಸ್ವಾಮಿ, ಹನುಮಂತ ಗೋಪನಾಳ, ಮಂಜುನಾಥ ಕ್ಯಾತಮ್ಮನವರ್, ರವಿನಾಯ್ಕ್, ಕರಿಯಪ್ಪ, ತಿಪ್ಪೆಸ್ವಾಮಿ, ಎಸ್.ಬಿ.ಸಿದ್ದರಾಜು, ರಾಜಾಸಾಬ್, ರವಿ ನಾಯ್ಕ, ಸತೀಶ, ತಿಪ್ಪೇಸ್ವಾಮಿ ತಂಡದಲ್ಲಿದ್ದರು.