ಕನ್ನಡಪ್ರಭ ವಾರ್ತೆ ಆಳಂದ
ಬೇಸಿಗೆ ವಿಪರೀತ ಬಿಸಿಲು ಮತ್ತು ನೀರಿನ ಸಮಸ್ಯೆಯಿಂದ ತತ್ತರಿಸಿಹೋಗಿದ್ದ ಆಳಂದ ತಾಲೂಕಿನಲ್ಲಿ ಜೂನ್ ಆರಂಭದಲ್ಲೇ ಮಳೆರಾಯ ಆಗಮನದಿಂದಾಗಿ ಎಲ್ಲಡೆ ಅಂತಜರ್ಲ ಹೆಚ್ಚಳವಾಗಿ ಬಹುತೇಕ ಕಡೆ ನೀರಿನ ಬರ ಹಿಂಗತೊಡಗಿದೆ.ತಾಲೂಕಿನ ಅರ್ಧ ಭಾಗದಲ್ಲಿ ಹೆಚ್ಚಿನ ಮಳೆಯಾಗಿ ಕೆರೆ, ಹಳ್ಳಕೊಳ್ಳಗಳು ತುಂಬಿಹರಿದರೆ, ಇನ್ನರ್ಧ ಭಾಗ ನಿಂಬರಗಾ, ಮಾದನಹಿಪ್ಪರಗಾ ಭಾಗದಲ್ಲಿ ಮಳೆಯಾಗಿದೆ ಆದರೆ ಕೆರೆಗಳಿಗೆ ನಿರೀಕ್ಷಿತ ಪ್ರಮಾಣದ ನೀರು ಸಂಗ್ರಗೊಂಡಿಲ್ಲ. ಆದರೂ ಸದ್ಯಕ್ಕೆ ಜನ ಜಾನುವಾರುಗಳ ನೀರಿನ ಸಮಸ್ಯೆಗೆ ಕೊಂಚ ಮುಕ್ತಿದೊರೆಯತೊಡಗಿದೆ.
ಸಣ್ಣ ನೀರಾವರಿ ಇಲಾಖೆಯ 35 ಕೆರೆಗಳು ಹಾಗೂ ಮಧ್ಯಮ ನೀರಾವರಿ ಯೋಜನೆ ಒಂದು ಅಮರ್ಜಾ ಅಣೆಕಟ್ಟೆ ಇಲ್ಲಿವೆ. ಈ ಪೈಕಿ ಅಣೆಕಟ್ಟೆಗೆ ಮೂರು ಅಡಿ ನೀರು ಸಂಗ್ರಹವಾದರೆ, 35 ಕೆರೆಗಳ ಪೈಕಿ ಸುಮಾರು 10 ಕೆರೆಗಳಲ್ಲಿ ನೀರು ಭರ್ತಿಯಾಗಿದೆ. ಜಿಪಂನಿಂದ ಕೈಗೊಂಡ ಆಯಾ ಕಡೆಯ ಅಣೆಕಟ್ಟುಗಳ ಸಹ ಕೆಲವು ಭರ್ತಿಯಾಗಿವೆ. ಇನ್ನೂ 25 ಕೆರೆಗಳಲ್ಲಿ ನೀರಿನ ಭರ್ತಿ ಬಾಕಿ ಉಳಿದುಕೊಂಡಿದೆ.ತಾಲೂಕಿ ಖಜೂರಿ, ಆಳಂದ ಮತ್ತು ನರೋಣಾ ವಲಯದ ಅರ್ಧ ಭಾಗದ ವಲಯದಲ್ಲಿ ಜೂನ್ ತಿಂಗಳ ಆರಂಭದ 12 ದಿನಗಳಲ್ಲಿ ಸುರಿದ ಮುಂಗಾರು ಮಳೆಯಿಂದಾಗಿ ಈ ಊರುಗಳಲ್ಲಿ ಅಂತರ್ಜಲ ಮುರುಪೋರಣಗೊಂಡಿದೆ. ಬಾವಿ, ಕೊಳವೆ ಬಾವಿ, ನಾಲಾ ಹಳ್ಳಗಳಲ್ಲಿ ನೀರು ಹರಿದಿದೆ. ಅಲ್ಲದೆ, ಆಳಂದ ವಿಧಾನಸಭಾ ಕ್ಷೇತ್ರದ ನಾಲ್ಕು ಕರೆಗಳಿಗೆ ನೀರು ಭಾಗಶಃ ಭರ್ತಿಯಾದರೆ ಇನ್ನೂಳಿದ ತಾಲೂಕಿನ ಕಲಬುರಗಿ ಗ್ರಾಮೀಣ ಮತಕ್ಷೇತ್ರಕ್ಕೆ ಒಳಪಡುವ ಬೆಳಮಗಿ, ಕರಾರಿ, ನರೋಣಾ ಗ್ರಾಮದ ಕೆರೆಗಳು ಸಹ ನೀರು ಭರ್ತಿಯಾಗಿ ರೈತ ಸಮುದಾಯವನ್ನು ಸಂತಷಗೊಳಿಸಿದೆ.
ನೀರಿನ ಅನುಕೂಲ: ಆಳಂದ ಮತ್ತು ಕೇಂದ್ರೀಯ ವಿವಿ ಸೇರಿದಂತೆ ಕೆಲವು ಹಳ್ಳಿಗಳಿಗೆ ಕುಡಿಯುವ ನೀರಿನ ಮೂಲವಾದ ಅಮರ್ಜಾ ಅಣೆಕಟ್ಟೆಗೆ ಖಜೂರಿ ಮತ್ತು ಆಳಂದ ವಲಯದಲ್ಲಿ ಸುರಿದ ಮಳೆಯಿಂದಾಗಿ ಅಣೆಕಟ್ಟೆಗೆ ನೀರಿನ ಒಳಹರಿವು ಶುರುವಾಗಿದ್ದು ಈಗಾಗಲೇ 3 ಅಡಿ ನೀರು ಸಂಗ್ರಹಗೊಂಡಿದೆ ಇನ್ನೇರಡು ದಿನಗಳಲ್ಲಿ ನೀರಿನ ಸಂಗ್ರಹ ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.ಅಮರ್ಜಾ ಅಣೆಕಟ್ಟೆಗೆ ನೀರಿನ ಮೂಲ ಸಾಲೇಗಾಂವ ಕರೆ, ಚಿತಲಿ ಮಟಕಿ ಮಾರ್ಗದಿಂದ ಶಖಾಪೂರ ಹಳ್ಳಕ್ಕೆ ಹಾಗೂ ಆಳಂದ ಪಾಂಚಪುಲ್‍ನಿಂದ ನೀರಿನ ಪ್ರವಾಹ ಜೋರಾಗಿದ್ದರಿಂದ ಅಣೆಕಟ್ಟೆಗೆ ಮೂರ್ನಾಲ್ಕು ದಿನಗಳಲ್ಲಿ 3 ಅಡಿ ನೀರು ಸಂಗ್ರಹಗೊಂಡಿದೆ. ಇನ್ನೊಂದಡೆ ಜಿಡಗಾ, ರಾಜವಾಳ ಮಾರ್ಗದಿಂದ ಅಷ್ಟೊಂದು ನೀರು ಹರಿದು ಬಂದಿಲ್ಲ. ಈ ಮೂಲದಿಂದಲೂ ನೀರು ಹರಿಯಲು ಶುರುವಾದರೆ ಅಣೆಕಟ್ಟೆಗೆ ಒಳಹರಿವು ಜೋರಾಗಲಿದೆ ಎಂದು ಅಣೆಕಟ್ಟೆಯ ಇಂಜಿನಿಯರ್ ಮಲ್ಲಿಕಾರ್ಜುನ ಅವರು ಹೇಳುತ್ತಾರೆ.
ಖಜೂರಿ ವಲಯದ ಸಾಲೇಗಾಂವ, ಕೋತನಹಿಪ್ಪರಗಾ, ಆಳಂದ ಕೆರೆ ಭರ್ತಿಯಾಗಿವೆ. ಆಳಂದ ವಲಯದ ಆಳಂದ, ತಡಕಲ್ ಗ್ರಾಮದಲ್ಲಿರುವ ಮೂರು ಕೆರೆ ಹಾಗೂ ಒಂದು ಅಣೆಕಟ್ಟೆ, ಮುನ್ನೊಹಳ್ಳಿ ಹಳ್ಳಿಸಲಗರ ಕೆರೆಗೆ ಮಳೆ ನೀರು ಭರ್ತಿಯಾಗಿದೆ. ಆಳಂದ ಕರೆಯಿಂದ ವೇಸ್ಟ್‍ವೇರನಿಂದ ನೀರಿನ ಹರಿವು ಶುರುವಾಗಿದೆ. ಗ್ರಾಮೀಣ ಮತಕ್ಷೇತ್ರದ ತಾಲೂಕಿನ ಬೆಳಮಗಿ, ಕರಹರಿ, ವಾಗ್ದರಿ ಮತ್ತು ನರೋಣಾ ಕೆರೆಗಳಿಗೂ ಸಹ ನೀರು ಸಂಗ್ರಗೊಂಡಿದ್ದು ಸಾರ್ವಜನಿಕರನ್ನು ಸಂತಷಗೊಳಿಸಿದೆ. ಮಳೆ ಹೆಚ್ಚಾದ ಕಡೆ ಬಿತ್ತನೆಗೆ ಅಡ್ಡಿಯಾಗಿದೆ. ಕಡಿಮೆ ಮಳೆಯಾದ ಪ್ರದೇಶದಲ್ಲಿ ರೈತರು ಬಿತ್ತನೆ ಆರಂಭಿಸಿದ್ದಾರೆ.ನಿರ್ವಾಹಣೆ ಕೊರತೆ: ತಾಲೂಕಿನ ಸಣ್ಣ ನೀರಾವರಿ ಇಲಾಖೆಯ ಕರೆಗಳಿಗೆ ಬಹುತೇಕ ನಿರ್ವಾಹಣೆ ಕೊರತೆಯಿಂದಾಗಿ ಆಳಂದ, ಸಾಲೇಗಾಂವ ಇನ್ನಿತರ ಕೆರೆಗಳ ಬದುವಿಗೆ ಮುಳ್ಳು, ಕಂಟಿ, ಗಿಡಗಂಟಿ ಬೆಳೆದು ಶಿಥಿಲಾವಸ್ಥೆಗೆ ತಲುಪಿವೆ. ಕಾಲಕಾಲಕ್ಕೆ ನಿರ್ವಾಹಣೆ ಆಗದೆ ಹೋದಲ್ಲಿ ಕೆರೆಗಳು ಅಪಾಯತಂದೊಡ್ಡುವ ಸಾಧ್ಯತೆ ಇದೆ ಎಂದು ನಾಗರಿಕರು ಆತಂಕ ಹೊರಹಾಕಿದ್ದಾರೆ.
ವಿವಿಧ ಕೆರೆಗೆ ಅಧಿಕಾರಿ ಭೇಟಿ: ಸಣ್ಣ ನೀರಾವರಿ ಇಲಾಖೆಯ ಎಇಇ ಶಾಂತಪ್ಪ ಜಾಧವ ಅವರು ಗುರುವಾರ ವಿವಿಧೆಡೆ ಕೆರೆಗಳಿಗೆ ಭೇಟಿ ನೀಡಿ ನೀರಿನ ಸಂಗ್ರಹ ಮತ್ತಿ ಕೆರೆಗಳ ಪರಿಸ್ಥಿತಿಯ ಕುರಿತು ವೀಕ್ಷಿಸಿ ಮಾಹಿತಿ ಕಲೆಹಾಕಿದ್ದಾರೆ. ತಾಲೂಕಿನ ಝಳಕಿ, ಹಡಲಗಿ, ಕಡಂಚಿ, ಮದಗುಣಕಿ, ಕೆರೂರ, ಮಾದನಹಿಪ್ಪರಗಾ ಕೆರೆಗಳಿಗೆ ಭೇಟಿ ಕೊಟ್ಟಿದ್ದು, ಶೇ 30ರಷ್ಟು ನೀರು ಸಂಗ್ರಹವಾಗಿದೆ. ಆಳಂದ, ಸಾಲೇಗಾಂವ, ಮುನ್ನೊಳ್ಳಿ, ತಡಕಲ್, ಹೊನ್ನಳ್ಳಿ, ಕೋತನಹಿಪ್ಪರಗಾ ಕೆರೆ ಭರ್ತಿಯಾಗಿವೆ. ಬದುಗಳಲ್ಲಿ ಬೆಳೆದ ಗಿಡ, ಕಂಟಿಗಳ ನಿರ್ವಾಹಣೆ ಮಾಡುತ್ತೇವೆ ಎಂದು ಎಇಇ ಶಾಂತಪ್ಪ ಜಾಧವ ಅವರು ತಿಳಿಸಿದ್ದಾರೆ.