ಹೆಚ್ಚು ನೀರು ಬಳಕೆದಾರರಿಗೆ ಶೇ.10 ರಷ್ಟು ನೀರು ಕಡಿತ

KannadaprabhaNewsNetwork | Updated : Apr 05 2024, 06:44 AM IST

ಸಾರಾಂಶ

ಭಾರೀ ಪ್ರಮಾಣ ನೀರು ಬಳಕೆ ಮಾಡುವವರಿಗೆ ಏ.14ರಿಂದ ಶೇಕಡ 10ರಷ್ಟು ನೀರು ಕಡಿತಗೊಳಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ। ರಾಮ್‌ ಪ್ರಸಾತ್ ತಿಳಿಸಿದ್ದಾರೆ.

 ಬೆಂಗಳೂರು :  ಭಾರೀ ಪ್ರಮಾಣ ನೀರು ಬಳಕೆ ಮಾಡುವವರಿಗೆ ಏ.14ರಿಂದ ಶೇಕಡ 10ರಷ್ಟು ನೀರು ಕಡಿತಗೊಳಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ। ರಾಮ್‌ ಪ್ರಸಾತ್ ತಿಳಿಸಿದ್ದಾರೆ.

ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ 20 ಲಕ್ಷದಿಂದ 40 ಲಕ್ಷ ಲೀಟರ್‌ ನೀರು ಬಳಕೆದಾರರೊಂದಿಗೆ ಸಭೆಯನ್ನು ನಡೆಸಿ ಮಾತನಾಡಿದ ಅವರು, ಬೆಂಗಳೂರು ಜಲಮಂಡಳಿಯಿಂದ ತಿಂಗಳಿಗೆ 20 ಲಕ್ಷದಿಂದ 40 ಲಕ್ಷ ಲೀಟರ್‌ಗಳಷ್ಟು ಬಳಕೆ ಮಾಡುವ ಬಳಕೆದಾರರಿಗೆ ಏ.14ರಿಂದ ಶೇಡಕಾ 10ರಷ್ಟು ನೀರನ್ನು ಕಡಿತಗೊಳಿಸಲಾಗುವುದು. ಪಂಚಸೂತ್ರಗಳನ್ನು ಅಳವಡಿಸಿಕೊಳ್ಳುವುದರಿಂದ ಶೇಕಡ 10ರಷ್ಟು ನೀರಿನ ಉಳಿತಾಯ ಆಗಲಿದೆ. ಕಡಿತಗೊಳಿಸಿದ ನೀರನ್ನು ಅಗತ್ಯವಿರುವ ಪ್ರದೇಶಗಳಿಗೆ ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.

ಸಂಸ್ಕರಿಸಿದ ನೀರು ವಿಫುಲವಾಗಿ ಲಭ್ಯವಿದ್ದು, ಅದರ ಮಾರುಕಟ್ಟೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಣ್ಣ ಕೈಗಾರಿಕೆಗಳು, ಎಫ್‌ಕೆಸಿಸಿಐ ಮತ್ತು ಕಾಸಿಯಾ ಜತೆ ಸಭೆಯನ್ನು ಆಯೋಜಿಸಲಾಗುವುದು ಎಂದರು.ಜಲಮಂಡಳಿಯಿಂದ 4 ಸಾವಿರ ಫ್ಲೋ ರಿಸ್ಟ್ರಿಕ್ಟರ್‌ ಅಳವಡಿಕೆ:

ಸಾರ್ವಜನಿಕರು ಹೆಚ್ಚಾಗಿ ಭೇಟಿ ನೀಡುವಂತಹ ಸರ್ಕಾರಿ ಕಚೇರಿಗಳು ಹಾಗೂ ನಗರದ ಪ್ರಮುಖ ಸಂಸ್ಥೆಗಳಲ್ಲಿನ ನಳಗಳಿಗೆ ಬೆಂಗಳೂರು ಜಲ ಮಂಡಳಿಯಿಂದ ಏರಿಯೇಟರ್‌ ಅಳವಡಿಸಲಾಗುತ್ತಿದೆ. ಮುಖ್ಯವಾಗಿ ಸರ್ಕಾರಿ ಕಚೇರಿಗಳಾದ ಬಿಡಿಎ, ಬಿಎಸ್‌ಎನ್‌ಎಲ್‌, ಇಂದಿರಾ ಕ್ಯಾಂಟೀನ್‌, ಇನ್‌ ಕಮ್‌ ಟ್ಯಾಕ್ಸ್‌, ಬಿಬಿಎಂಪಿ ಶಾಲೆಗಳು, ಇಸ್ರೋ, ಬೆಮೆಲ್‌, ಸಿಲ್ಕ್‌ ಬೋರ್ಡ್‌, ಕೇಂದ್ರೀಯ ಸದನ್‌, ಡಿಫೆನ್ಸ್‌, ವಿವಿ ಟವರ್‌, ಐಎಎಸ್‌ ಅಫಿಸರ್ಸ್‌ ಅಸೋಸಿಯೇಷನ್‌, ಆರ್‌ಟಿಓ, ಡಿಸಿ ಆಫೀಸ್‌, ಪೊಲೀಸ್‌ ಸ್ಟೇಷನ್‌, ಜಯದೇವ ಹಾಸ್ಪಿಟಲ್‌, ಸೆಂಟ್ರಲ್‌ ಫಾರ್ಮಸಿ, ಐಟಿಐ ಇನ್‌ಸ್ಟಿಟ್ಯೂಟ್‌, ಸೆಂಟ್ರಲ್‌ ಫಾರ್ಮಸಿ, ಲೋಕಾಯುಕ್ತ ನಿವಾಸ, ಕೆಪಿಟಿಸಿಲ್‌, ಬಿಬಿಎಂಪಿ, ಕೆಎಂಎಫ್‌, ಬೆಸ್ಕಾಂ, ಪಿ ಆ್ಯಂಡ್‌ ಟಿ ಕ್ಯಾಟರ್ಸ್‌ ಮತ್ತು ಗ್ಯಾರಿಸನ್‌ ಎಂಜಿನಿಯರಿಂಗ್‌ ಕಟ್ಟಡಗಳಲ್ಲಿ ಜಲಮಂಡಳಿಯಿಂದ 4 ಸಾವಿರ ಏರಿಯೇಟರ್‌, ಫ್ಲೋ ರಿಸ್ಟ್ರಿಕ್ಟರ್‌ ಅಳವಡಿಸಲಾಗಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Share this article