‘ವಯಸ್ಕಳಾಗಿದ್ದು, ಲೈಂಗಿಕ ಕ್ರಿಯೆಗೆ ಸಮ್ಮತಿಸಿದ್ದರು’ ಎಂಬ ಕಾರಣ ನೀಡಿ ಅಪ್ರಾಪ್ತೆ ಗರ್ಭಿಣಿಯನ್ನಾಗಿಸಿ ಮದುವೆಯಾಗಲು ನಿರಾಕರಿಸಿದ್ದ ವ್ಯಕ್ತಿಯನ್ನು ಅತ್ಯಾಚಾರ ಪ್ರಕರಣದಿಂದ ಖುಲಾಸೆಗೊಳಿಸಿದ್ದ ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸಿರುವ ಹೈಕೋರ್ಟ್ ತೀರ್ಪು ಹೊರಡಿಸಿದೆ.
ವೆಂಕಟೇಶ್ ಕಲಿಪಿ
ಕನ್ನಡಪ್ರಭ ವಾರ್ತೆ ಬೆಂಗಳೂರು
‘ವಯಸ್ಕಳಾಗಿದ್ದು, ಲೈಂಗಿಕ ಕ್ರಿಯೆಗೆ ಸಮ್ಮತಿಸಿದ್ದರು’ ಎಂಬ ಕಾರಣ ನೀಡಿ ಅಪ್ರಾಪ್ತೆ ಗರ್ಭಿಣಿಯನ್ನಾಗಿಸಿ ಮದುವೆಯಾಗಲು ನಿರಾಕರಿಸಿದ್ದ ವ್ಯಕ್ತಿಯನ್ನು ಅತ್ಯಾಚಾರ ಪ್ರಕರಣದಿಂದ ಖುಲಾಸೆಗೊಳಿಸಿದ್ದ ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಅಪರಾಧಿಗೆ 10 ವರ್ಷ ಕಠಿಣ ಜೈಲು ಮತ್ತು 25 ಸಾವಿರ ರು. ದಂಡ ವಿಧಿಸಿ ತೀರ್ಪು ಹೊರಡಿಸಿದೆ.
ಘಟನೆ ನಡೆದಾಗ ಸಂತ್ರಸ್ತೆಗೆ ಅಪ್ರಾಪ್ತೆಯಾಗಿದ್ದು, ಲೈಂಗಿಕ ಕ್ರಿಯೆಗೆ ಸಮ್ಮತಿ ಸೂಚಿಸಿರಲಿಲ್ಲ. ಅಪ್ರಾಪ್ತೆಯಾಗಿದ್ದಾಗ ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡುವ ವಿಷಯವೇ ಉದ್ಭವಿಸುವುದಿಲ್ಲ ಎಂದು ತೀರ್ಮಾಸಿರುವ ನ್ಯಾಯಮೂರ್ತಿ ಎಚ್.ಬಿ. ಪ್ರಭಾಕರ್ ಶಾಸ್ತ್ರಿ ಮತ್ತು ನ್ಯಾಯಮೂರ್ತಿ ಉಮೇಶ್ ಎಂ.ಅಡಿಗ ಅವರಿದ್ದ ವಿಭಾಗೀಯ ಪೀಠ, ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ ನಿವಾಸಿ ಮಂಜಪ್ಪ ಎಂಬಾತನನ್ನು ದೋಷಿಯಾಗಿ ಪರಿಗಣಿಸಿ ಶಿಕ್ಷೆ ವಿಧಿಸಿದೆ.
ಮುಂದಿನ 45 ದಿನಗಳಲ್ಲಿ ಮಂಜಪ್ಪ ಅಧೀನ ನ್ಯಾಯಾಲಯದ ಮುಂದೆ ಶರಣಾಗಬೇಕು. ಸಂತ್ರಸ್ತೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸೂಕ್ತ ಪರಿಹಾರ ಪಾವತಿಸಬೇಕು ಎಂದು ನಿರ್ದೇಶಿಸಿದೆ.
ಮಂಜಪ್ಪನನ್ನು ಖುಲಾಸೆಗೊಳಿಸಿದ್ದ ದಾವಣಗೆರೆ 2ನೇ ಹೆಚ್ಚುವರಿ ಜಿಲ್ಲಾ/ಸೆಷನ್ಸ್ ನ್ಯಾಯಾಲಯ ಮತ್ತು ಪೊಕ್ಸೋ ವಿಶೇಷ ನ್ಯಾಯಾಲಯ 2017ರ ಅ.13ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಹೊನ್ನಾಳಿ ಠಾಣಾ ಪೊಲೀಸರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಪುರಸ್ಕರಿಸಿದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಪೋಕ್ಸೋ ಪ್ರಕರಣದಲ್ಲಿ ಆರೋಪಿಯ ಖುಲಾಸೆ ಆದೇಶ ಪ್ರಶ್ನಿಸಿ ಪ್ರಾಸಿಕ್ಯೂಷನ್ (ಪೊಲೀಸರು) ಮೇಲ್ಮನವಿ ಸಲ್ಲಿಸಿದ ಪ್ರಕರಣದಲ್ಲಿ ಅಧೀನ ನ್ಯಾಯಾಲಯ ಆದೇಶ ರದ್ದಾಗುವುದು ಮತ್ತು ಆರೋಪಿಗೆ ಶಿಕ್ಷೆಯಾಗುವುದು ವಿರಳ. ಆ ನಿಟ್ಟಿನಲ್ಲಿ ಈ ತೀರ್ಪು ಪ್ರಮುಖವಾಗಿದೆ.
ಪ್ರಕರಣದ ವಿವರ: ಸಂತ್ರಸ್ತೆ ಹಾಗೂ ಮಂಜಪ್ಪ ಕೂಲಿ ಕೆಲಸ ಮಾಡುತ್ತಿದ್ದು, ಪರಿಚಯ ಪ್ರೇಮಕ್ಕೆ ತಿರುಗಿತ್ತು. ಮದುವೆಯಾಗುವುದಾಗಿ ಭರವಸೆ ನೀಡಿ ಆಕೆಯನ್ನು ಕರೆದೊಯ್ದು ಬಲವಂತವಾಗಿ ಹಲವಾರು ಲೈಂಗಿಕ ಕ್ರಿಯೆ ನಡೆಸಿದ ಪರಿಣಾಮ ಸಂತ್ರಸ್ತೆ ಗರ್ಭಿಣಿಯಾಗಿದ್ದರು.
ಗರ್ಭಿಣಿಯಾದ ವಿಷಯ ತಿಳಿದ ನಂತರ ಆಕೆಯನ್ನು ಭೇಟಿಯಾಗುವುದನ್ನೇ ಮಂಜಪ್ಪ ನಿಲ್ಲಿಸಿದ್ದನು. ಇದರಿಂದ ಆಕೆ ಪೋಷಕರಿಗೆ ಮಾಹಿತಿ ನೀಡಿದ್ದರು.ಗ್ರಾಮದ ಹಿರಿಯರು ಪಂಚಾಯಿತಿ ನಡೆಸಿ, ಸಂತ್ರಸ್ತೆಯನ್ನು ಮದುವೆಯಾಗಲು ಮಂಜಪ್ಪಗೆ ಸೂಚಿಸಿದ್ದರು.
ಸಂತ್ರಸ್ತೆ ಗರ್ಭಿಣಿಯಾಗಲು ತಾನು ಜವಾಬ್ದಾರನಲ್ಲ ಎಂದು ಆತ ಹೇಳಿ ಮದುವೆಗೆ ನಿರಾಕರಿಸಿದ್ದ. ಇದರಿಂದ ಸಂತ್ರಸ್ತೆ 2016ರಂದು ಏ.3ರಂದು ಹೊನ್ನಾಳಿ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ನಡೆಸಿದ್ದ ಪೊಲೀಸರು, ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ-2012ರ ಸೆಕ್ಷನ್ 6ರ ಅಡಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಅಪರಾಧದಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಅಧೀನ ನ್ಯಾಯಾಲಯ, ಘಟನೆ ನಡೆದಾಗ ಸಂತ್ರಸ್ತೆಯು ವಯಸ್ಕಳಾಗಿದ್ದರು ಮತ್ತು ಲೈಂಗಿಕ ಸಂಭೋಗಕ್ಕೆ ಆಕೆಯ ಸಮ್ಮತಿಯಿತ್ತು ಎಂದು ತೀರ್ಮಾನಿಸಿ ಮಂಜಪ್ಪನನ್ನು ಖುಲಾಸೆಗೊಳಿಸಿತ್ತು.
ಈ ಆದೇಶ ರದ್ದುಪಡಿಸಿ, ಆರೋಪಿಗೆ ಶಿಕ್ಷೆ ವಿಧಿಸುವಂತೆ ಕೋರಿ ಹೊನ್ನಾಳಿ ಠಾಣಾ ಪೊಲೀಸರು ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು.
ಸಮ್ಮತಿ ಪ್ರಶ್ನೆಯೇ ಇಲ್ಲ: ಪ್ರಕರಣದ ಸಾಕ್ಷ್ಯಧಾರಗಳ ಪ್ರಕಾರ ಘಟನೆ ನಡೆದಾಗ ಸಂತ್ರಸ್ತೆಗೆ 15 ವರ್ಷವಾಗಿತ್ತು ಎನ್ನುವುದು ದೃಢಪಟ್ಟಿದೆ. ಘಟನೆ ನಡೆದ ತಕ್ಷಣವೇ ದೂರು ದಾಖಲಿಸಿಲ್ಲ ಎಂಬ ಮಾತ್ರಕ್ಕೆ ಸಂತ್ರಸ್ತೆ ಸಂಭೋಗಕ್ಕೆ ಒಪ್ಪಿದ್ದಳು ಎಂದರ್ಥವಲ್ಲ.
ತನ್ನಿಚ್ಛೆಗೆ ವಿರುದ್ಧವಾಗಿ ಆರೋಪಿ ಸಂಭೋಗ ನಡೆಸಿದ್ದಾನೆ ಎಂದು ಸಂತ್ರಸ್ತೆ ಸ್ಪಷ್ಟವಾಗಿ ಸಾಕ್ಷ್ಯ ನುಡಿದಿದ್ದಾಳೆ. ಇಂತಹ ಸಂದರ್ಭಗಳಲ್ಲಿ ಆರೋಪಿ ಮತ್ತು ಸಂತ್ರಸ್ತೆಯ ನಡುವೆ ಸಮ್ಮತಿ ಸಂಭೋಗ ನಡೆದಿರುವುದಾಗಿ ಅಧೀನ ನ್ಯಾಯಾಲಯ ತೀರ್ಮಾನಿಸಿರುವುದು ದೋಷಪೂರಿತವಾಗಿದೆ.
ಸಂಭೋಗಕ್ಕೆ ಸಂತ್ರಸ್ತೆ ಸಮ್ಮತಿಸಿದ್ದಳು ಎಂಬುದು ಮಂಜಪ್ಪನ ವಾದ. ಆದರೆ ಪೋಕ್ಸೋ ಕಾಯ್ದೆ ಪ್ರಕಾರ ಸಂತ್ರಸ್ತೆ ಅಪ್ರಾಪ್ತೆಯಾಗಿದ್ದರೆ, ಸಂಭೋಗಕ್ಕೆ ಸಮ್ಮತಿ ನೀಡುವ, ನೀಡದಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಅಪ್ರಾಪ್ತೆಯ ಸಮ್ಮತಿಯಿದ್ದರೂ ಅದನ್ನು ಪರಿಗಣಿಸಲಾಗುವುದಿಲ್ಲ ಎಂದು ತೀರ್ಮಾನಿಸಿರುವ ಹೈಕೋರ್ಟ್ ಮಂಜಪ್ಪನ್ನು ದೋಷಿಯಾಗಿ ನಿರ್ಧರಿಸಿ ಶಿಕ್ಷೆ ವಿಧಿಸಿದೆ. ಪೋಲೀಸರ ಪರ ಸರ್ಕಾರಿ ಅಭಿಯೋಜಕ ರಜತ್ ಸುಬ್ರಹ್ಮಣ್ಯಂ ವಾದ ಮಂಡಿಸಿದ್ದರು.