ಚಿತ್ರದುರ್ಗ: ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ. ಅಣ್ಣ ಬಸವಣ್ಣನ ವಚನವೊಂದರ ಸಾಲಿದು. ಸ್ಥಾವರ ಮತ್ತು ಜಂಗಮ ಎಂಬುದರ ಹಿಂದೆ ಉದಾತ್ತ ಆಲೋಚನಾ ಕ್ರಮವಿತ್ತು. ಜಂಗಮ ವೆಂದರೆ ಜಾತಿವಾಚಕವಾಗಿರದೆ ಚಲನಶೀಲತೆ ಆಶಯ ಇತ್ತು. ಅಚ್ಚರಿಯೆಂದರೆ ಬಸವತತ್ವ ಬೋಧನೆ ಮಾಡುವ ಮಠವೊಂದು ಬಸವಣ್ಣನನ್ನು ಸ್ಥಾವರ ಮಾಡಲು ಹೋಗಿ ಹೊಸ ನಮೂನೆಯ ರಗಳೆಗಳ ಮೇಲೆಳೆದುಕೊಂಡಿದೆ. ಬಸವ ಪ್ರತಿಮೆ ನಿರ್ಮಾಣದ ಆಶಯವೊಂದಕ್ಕೆ ನಾನಾ ಮಜಲುಗಳ ಸೋಂಕು ಅಂಟಿಸಿಕೊಂಡಿದೆ. ಚಿತ್ರದುರ್ಗ ಬಸವಕೇಂದ್ರ ಮುರುಘಾಮಠದಿಂದ ನಿರ್ಮಾಣಗೊಳ್ಳುತ್ತಿರುವ 323 ಅಡಿ ಎತ್ತರದ ಬಸವಮೂರ್ತಿ ಈಗ ರಾಜ್ಯವ್ಯಾಪಿ ಸದ್ದು ಮಾಡುತ್ತಿದ್ದು ಅನುದಾನ ದುರುಪಯೋಗದ ಆರೋಪ ಎದುರಿಸುತ್ತಿದೆ. ಅಧಿಕಾರಿಗಳ ತಂಡವೊಂದು ಪರಿಶೀಲನೆಗೆ ಮುಂದಾಗಿದೆ.
ಏನಿದು ಪ್ರತಿಮೆ:ದಶಕದ ಹಿಂದೆ ಬಸವಕೇಂದ್ರ ಮುರುಘಾಮಠಕ್ಕೆ ಬಸವ ಪ್ರತಿಮೆಯೊಂದನ್ನು ಸ್ಥಾಪಿಸಬೇಕು. ಆ ಮೂಲಕ ಪ್ರವಾಸಿಗರ ಆಕರ್ಷಿಸಿ ಬಸವತತ್ವ ಪ್ರಚಾರಕ್ಕೆ ಸ್ಪಷ್ಟ ಜಾಡು ಮಾಡಬೇಕೆಂಬ ಆಲೋಚನೆಗಳು ಮೂಡಿದವು. ಇದೇ ವೇಳೆಗೆ ಗದಗ ಮತ್ತು ಕೂಡಲ ಸಂಗಮದಲ್ಲಿಯೂ ಪ್ರತಿಮೆ ಸ್ಥಾಪನೆ ಪ್ರಸ್ತಾಪಗಳು ಬಂದಿದ್ದರಿಂದ ಆಲೋಚನೆಗಳಿಗೆ ತೀವ್ರ ವೇಗ ನೀಡಿದ ಮುರುಘಾಮಠ ನಾವೇ ಮೊದಲು ಎಂಬ ತರಾತುರಿಗೆ ಮುಗಿ ಬಿದ್ದು ಅಂದಿನ ಸಿಎಂ ಯಡಿಯೂರಪ್ಪ ಅವರ ಬಳಿ ವಿಷಯ ಪ್ರಸ್ತಾಪಿಸಿ ಬಜೆಟ್ ನಲ್ಲಿ 5 ಕೋಟಿ ರು ಮಂಜೂರು ಮಾಡಿಸಿಕೊಂಡಿತು.
ರಾಜ್ಯ ಸರ್ಕಾರ ಬಜೆಟ್ ನಲ್ಲಿ ಅನುದಾನ ಒದಗಿಸಿದ ತಕ್ಷಣ ಪ್ರತಿಮೆ ನಿರ್ಮಿಸುವ ಧಾವಂತಗಳು ಎದುರಾದವು. ಏಕಶಿಲೆಯ 100 ಅಡಿ ಉದ್ದದ ಪ್ರತಿಮೆ ಸಾಕೆಂದು ಕೆಲ ಮಠದ ಹಿತೈಷಿಗಳು ಸಲಹೆ ನೀಡಿದರು. ಅದರಂತೆ ಮುಂದುವರಿದಾಗ ದೊಡ್ಡಬಳ್ಳಾಪುರದಲ್ಲಿ ಏಕ ಶಿಲೆ ದೊರೆಯುತ್ತದೆ. ಸುಬ್ರಮಣಿ ಎಂಬುವರು ಇಂತಹ ವಿಶೇಷ ಕಲ್ಲುಗಳನ್ನು ಭೂಮಿಯಿಂದ ಹೆಕ್ಕಿ ಕೊಡುತ್ತಾರೆ. ನೂರು ಅಡಿ ಉದ್ದದ ಕಲ್ಲು ಅಲ್ಲಿಯೇ ದೊರೆಯುತ್ತದೆ ಎಂಬ ಖಚಿತ ಮಾಹಿತಿಗಳು ಮಠದ ಪ್ರಾಂಗಣ ತಲುಪಿದವು.ನೆಲದಲ್ಲಿ ಹೂತಿತ್ತು 100 ಅಡಿ ಉದ್ದನೆ ಶಿಲೆ:
ಅದರಂತೆ ಸುಬ್ರಮಣಿ ಸಂಪರ್ಕಿಸಿ ಕಲ್ಲು ಪೂರೈಕೆ ಮಾತುಕತೆ ನಡೆಸಿ ಮುಂಗಡ ಹಣ ಕೂಡಾ ನೀಡಲಾಯಿತು. ಸ್ವಲ್ಪ ದಿನ ಬಿಟ್ಟು ಹೋದಾಗ ಸುಬ್ರಮಣಿ ನೆಲದಲ್ಲಿ ಹೂತಿದ್ದ ಉದ್ದನೆಯ ಕಲ್ಲು ತೋರಿಸಿದರು. ಹದಿನೈದು ಅಡಿ ದಪ್ಪ ಹಾಗೂ 120 ಅಡಿ ಉದ್ದದ ಕಲ್ಲನ್ನು ಹೆಕ್ಕಿ ತೆಗೆದಿದ್ದೇನೆ. ಇದನ್ನು ಬಸವಮೂರ್ತಿಯನ್ನಾಗಿಸುವ ಹೊಣೆಗಾರಿಕೆ ನಿಮ್ಮದೆಂದು ಸ್ಪಷ್ಟಪಡಿಸಿದರು.ನೆಲದಲ್ಲಿ ಹೂತಿದ್ದ ಕಲ್ಲನ್ನೇನೋ ಸುಬ್ರಮಣಿ ತೋರಿಸಿದ. ಆದರೆ ಮೂರ್ತಿಯನ್ನು ಇಲ್ಲಿಯೇ ಕೆತ್ತಬೇಕೇ ಅಥವಾ ಕಲ್ಲನ್ನು ಮುರುಘಾಮಠಕ್ಕೆ ಒಯ್ದು ಅಲ್ಲಿ ಪುತ್ಥಳಿ ಮಾಡಬೇಕೆ ? ಎಂಬ ಜಿಜ್ಞಾಸೆಗಳು ಮೂಡಿದವು. ಎಲ್ಲದಕ್ಕಿಂತ ಮಿಗಿಲಾಗಿ ಬೃಹದಾಕಾರದ 120 ಅಡಿ ಉದ್ದದ ಬಂಡೆಯ ಚಿತ್ರದುರ್ಗಕ್ಕೆ ಹೇಗೆ ಸಾಗಿಸುವುದು ? ಹೊತ್ತೊಯ್ಯುವ ವಾಹನಗಳು ಇವೆಯೇ ? ದಾರಿಯುದ್ದಕ್ಕೂ ಬರುವ ಸೇತುವೆಗಳು ಈ ಭಾರ ತಡೆಯುವಷ್ಟು ಸಾಮರ್ಥ್ಯ ಹೊಂದಿವೆಯೇ ? ಅಥವಾ ಪ್ರತ್ಯೇಕ ರಸ್ತೆ ನಿರ್ಮಿಸಿಕೊಂಡು ಕಲ್ಲು ಒಯ್ಯಲು ಸಾಧ್ಯವೇ ಎಂಬಿತ್ಯಾದಿ ಪ್ರಶ್ನೆಗಳು ಧುತ್ತನೆ ಎದುರಾದವು. ಪುತ್ಥಳಿ ನಿರ್ಮಿಸಬೇಕೆಂಬ ಮಹದಾಸೆಗೆ ಆರಂಭದಲ್ಲಿಯೇ ವಿಘ್ನಗಳು ಎದುರಾದವು.
ಇಷ್ಟೊತ್ತಿಗಾಗಲೇ ಬಜೆಟ್ ನಲ್ಲಿ ಘೋಷಿತ ಐದು ಕೋಟಿ ಅನುದಾನವ ಮುಜರಾಯಿ ಇಲಾಖೆ ಮೂಲಕ ರಾಜ್ಯ ಸರ್ಕಾರ ಜಿಲ್ಲಾಧಿಕಾರಿ ಮುಖೇನ ಮುರುಘಾಮಠಕ್ಕೆ ಹಸ್ತಾಂತರಿಸಿತು. ಪ್ರತಿಮೆ ನಿರ್ಮಾಣದ ಅಂದಾಜು ವೆಚ್ಚ, ತಾಂತ್ರಿಕ ಮಾಹಿತಿ, ಛೀಪ್ ಆರ್ಕಿಟೆಕ್ ಅನುಮೋದನೆ ಯಾವುದನ್ನೂ ಗಮನಿಸದೆ ಮುರುಘಾಮಠದ ಮೇಲೆ ವಿಶ್ವಾಸವಿಟ್ಟು ಅನುದಾನ ಬಿಡುಗಡೆ ಮಾಡಿತು.ಮುಂದೆ ಎದುರಾಯ್ತು ಸಮಸ್ಯೆ:
ರಾಜ್ಯ ಸರ್ಕಾರದ ಯಾವುದೇ ಅನುದಾನ ಪಡೆದರೆ ವರ್ಷದ ಒಳಗೆ ಹಣ ಬಳಕೆ ಪ್ರಮಾಣ ಪತ್ರ(ಯುಟಿಲೈಜೇಷನ್ ಸರ್ಟಿಫಿಕೇಟ್ ) ಸಲ್ಲಿಸಬೇಕು. ಈ ಯುಸಿ ಪಬ್ಲಿಕ್ ಅಕೌಂಟ್ಸ್ ಸಮಿತಿಗೆ ಹೋಗುತ್ತದೆ. ಇದು ಸರ್ಕಾರಿ ವ್ಯವಸ್ಥೆಯೊಂದು ರೂಪಿಸಿಕೊಂಡಿರುವ ನಿಯಮಾವಳಿ. ಈ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಕೆಯಾದರಲ್ಲಿ ನಂತರ ಮುಂದಿನ ಕಂತು ಅನುದಾನ ಬಿಡುಗಡೆಗೆ ಅವಕಾಶ ಮಾಡಿಕೊಡುತ್ತದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾಗಿ ವರ್ಷವಾದರೂ ಯುಸಿ ಸಲ್ಲಿಕೆಯಾಗಲಿಲ್ಲ. ಏಕ ಶಿಲೆಯ ಮೂರ್ತಿ ಪ್ರತಿಷ್ಟಾಪಿಸುವುದು ದುಸ್ಸಾಹಸದ ಕೆಲಸವೆಂಬ ತೀರ್ಮಾನಕ್ಕೆ ಬರಲಾಯಿತು. ಕಲ್ಲಿನ ವೀಣೆ ಮೀಟಿ ಬಸವಣ್ಣನ ನಾದವ ಹೊರಹೊಮ್ಮಿಸುವುದು ಕಷ್ಟವೆಂಬ ಸಂಗತಿ ಅರಿವಾಗುತ್ತಿದ್ದಂತೆ ಮಠದ ಪ್ರಾಂಗಣದಲ್ಲಿ ಸುಳಿದಾಡಿದ್ದು ಕಂಚಿನ ಪ್ರತಿಮೆ ಪ್ರತಿಷ್ಠಾಪನೆ ಹೊಸ ಕನಸು.