ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರು ‘ಒನ್ ಟೈಮ್ ಸೆಟ್ಟಲ್ಮೆಂಟ್’ (ಓಟಿಎಸ್) ಯೋಜನೆಯಡಿ ಪಾವತಿಸುವುದರಲ್ಲಿ ವಿಫಲವಾದರೆ, ಆಸ್ತಿ ತೆರಿಗೆ ಮೊತ್ತಕ್ಕೆ ಸಮನಾಗಿ ಬರೋಬ್ಬರಿ ಶೇಕಡ 100ಕ್ಕೆ100ರಷ್ಟು ದಂಡ ಮೊತ್ತದೊಂದಿಗೆ ಶೇ.9ರಿಂದ 15ರಷ್ಟು ದುಬಾರಿ ಬಡ್ಡಿ ಸೇರಿಸಿ ತೆರಿಗೆ ಕಟ್ಟಬೇಕಾಗುತ್ತದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವಾರು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ಪಾಲಿಕೆಯು ಓಟಿಎಸ್ ಯೋಜನೆ ಜಾರಿಗೊಳಿಸಿದ್ದು, ಈ ಯೋಜನೆ ಜು.31ಕ್ಕೆ ಮುಕ್ತಾಯಗೊಳ್ಳಲಿದೆ. ಆ ನಂತರ, ಅಂದರೆ ಆ.1ರಿಂದ ಆಸ್ತಿ ತೆರಿಗೆ ಪಾವತಿಗೆ ಮುಂದಾಗುವ ಸುಸ್ತಿದಾರರಿಗೆ ದೊಡ್ಡ ಆಘಾತ ಕಾದಿದೆ.
ಕಳೆದ ಬಜೆಟ್ ಅಧಿವೇಶನದಲ್ಲಿ ಬಿಬಿಎಂಪಿಯ-2020 ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಹಲವಾರು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಓಟಿಎಸ್ ಯೋಜನೆ ಜಾರಿಗೊಳಿಸಿ ಆಸ್ತಿ ತೆರಿಗೆ ಮೇಲಿನ ಬಡ್ಡಿ ಹಾಗೂ ದಂಡ ಪ್ರಮಾಣವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿತ್ತು. ಜು.31ಕ್ಕೆ ಈ ಯೋಜನೆ ಅಂತ್ಯಗೊಳ್ಳುತ್ತಿದೆ.
ಇನ್ನು ಇದೇ ವೇಳೆ ಆಸ್ತಿ ತೆರಿಗೆಯ ದಂಡ ಮೊತ್ತವನ್ನು ಶೇ.200ರಿಂದ 100ಕ್ಕೆ ಇಳಿಕೆ ಮಾಡಲಾಗಿದೆ. ಜತೆಗೆ, ಆಸ್ತಿ ತೆರಿಗೆ ವಿಳಂಬ ಪಾವತಿಯ ಬಡ್ಡಿ ವಿಧಿಸುವ ದರವನ್ನೂ ಪರಿಷ್ಕರಣೆ ಮಾಡಲಾಗಿದೆ. ಅದರಂತೆ ಆಗಸ್ಟ್ 1ರಿಂದ ಪಾವತಿ ವ್ಯವಸ್ಥೆ ಜಾರಿಗೆ ಬರಲಿದೆ.
ಆಸ್ತಿ ತೆರಿಗೆ ಮೊತ್ತಕ್ಕೆ ಸಮನಾದ ದಂಡ
ಬಿಬಿಎಂಪಿ 2020ರ ಕಾಯ್ದೆ ತಿದ್ದುಪಡಿ ಪ್ರಕಾರ, ಪ್ರಸಕ್ತ ಸಾಲಿನ 12 ತಿಂಗಳು ಮುಕ್ತಾಯಗೊಂಡ ನಂತರ, ಅಂದರೆ 2ನೇ ವರ್ಷದ ತರುವಾಯ ಆಸ್ತಿ ತೆರಿಗೆ ಬಾಕಿ ಇದ್ದಾಗ, ಆವರೆಗೆ ಪಾವತಿಸುವ ಆಸ್ತಿ ತೆರಿಗೆ ಮೊತ್ತಕ್ಕೆ ಸಮನಾದ ದಂಡ ವಿಧಿಸಲಾಗುತ್ತದೆ. ಜತೆಗೆ ಬಾಕಿ ಮೊತ್ತಕ್ಕೆ ವಾರ್ಷಿಕ ಶೇ.9 ರಷ್ಟು ಬಡ್ಡಿಯೊಂದಿಗೆ ಪಾವತಿಸಬೇಕಾಗಲಿದೆ ಎಂದು ತಿಳಿಸಲಾಗಿದೆ.
ಉದಾಹರಣೆಗೆ 2022-23ನೇ ಸಾಲಿನ ಹಾಗೂ ಅದಕ್ಕಿಂತ ಹಿಂದಿನ ವರ್ಷದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರಿಗೆ ಶೇ.100ಕ್ಕೆ 100ರಷ್ಟು ದಂಡ ಪಾವತಿ ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ₹1,000 ಸಾವಿರ ಆಸ್ತಿ ತೆರಿಗೆ ಬಾಕಿ ಇದ್ದರೆ, ₹1,000 ದಂಡದೊಂದಿಗೆ ಒಟ್ಟು ₹2,000 ಜತೆಗೆ ವಾರ್ಷಿಕ ಶೇ.9ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕಾಗಲಿದೆ.
ಇನ್ನು 2023-24ನೇ ಸಾಲಿನ ಆಸ್ತಿ ತೆರಿಗೆ ದಂಡ ಇರುವುದಿಲ್ಲ. ಆದರೆ, ಶೇ.15ರಷ್ಟು ಬಡ್ಡಿ ಪಾವತಿ ಮಾಡಬೇಕಾಗಲಿದೆ. ಇನ್ನು 2024-25ನೇ ಸಾಲಿನ ಆಸ್ತಿ ತೆರಿಗೆಗೆ 2024ರ ಏಪ್ರಿಲ್‌ನಿಂದ ಈವರೆಗೆ ಶೇ.15ರಷ್ಟು ಬಡ್ಡಿ ಸಮೇತ ಪಾವತಿ ಮಾಡಬೇಕಾಗಲಿದೆ.
ಎಲ್ಲರಿಗೂ ಒಂದೇ ದಂಡ ಪದ್ಧತಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ತಪ್ಪು ಆಸ್ತಿ ಘೋಷಣೆ ಮಾಡಿಕೊಂಡವರಿಗೆ, ಆಸ್ತಿ ತೆರಿಗೆ ವ್ಯಾಪ್ತಿಗೆ ಬಾರದೇ ಇರುವ ಆಸ್ತಿಗಳಿಗೆ ಹಾಗೂ ಅನಿವಾರ್ಯ ಕಾರಣದಿಂದ ತಡವಾಗಿ ಆಸ್ತಿ ತೆರಿಗೆ ಪಾವತಿ ಮಾಡುವ ಆಸ್ತಿ ಮಾಲೀಕರಿಗೆ ಸೇರಿದಂತೆ ಎಲ್ಲರಿಗೂ ಒಂದೇ ಮಾದರಿಯಲ್ಲಿ ದಂಡ ವಿಧಿಸುವ ಪದ್ಧತಿ ಜಾರಿಯಾಗಲಿದೆ.
ಕಾಯ್ದೆ ತಿದ್ದುಪಡಿಗೂ ಮುನ್ನಾ, ತಡವಾಗಿ ಆಸ್ತಿ ತೆರಿಗೆ ಪಾವತಿದಾರರಿಗೆ ಆಸ್ತಿ ತೆರಿಗೆ ಮೊತ್ತದೊಂದಿಗೆ ₹100 ದಂಡ ಮಾತ್ರ ವಿಧಿಸಲಾಗುತ್ತಿತ್ತು. ತಪ್ಪು ಆಸ್ತಿ ಘೋಷಣೆ ಮಾಡಿಕೊಂಡು ತೆರಿಗೆ ವಂಚನೆ ಪ್ರಕರಣದಲ್ಲಿ ಮಾತ್ರ ಆಸ್ತಿ ತೆರಿಗೆ ಮೊತ್ತದ ಎರಡು ಪಟ್ಟು ದಂಡ ವಿಧಿಸಲಾಗುತ್ತಿತ್ತು.
ಆಸ್ತಿ ಹರಾಜಿಗೆ ಸಿದ್ಧತೆ
ಆ.1ರಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರಿಗೆ ನಿಯಮಿತವಾಗಿ ಮೂರು ಬಾರಿ ನೋಟಿಸ್ ನೀಡಿ ಆಸ್ತಿ ತೆರಿಗೆ ವಸೂಲಿ ಮಾಡುವುದು. ಒಂದು ವೇಳೆ ಪಾವತಿ ಮಾಡದಿದ್ದರೆ ಬಿಬಿಎಂಪಿಯು, ಚರಾಸ್ತಿ ಜಪ್ತಿ ಮಾಡುವುದು. ಇಲ್ಲವೇ, ಬ್ಯಾಂಕ್ ಖಾತೆ ಮತ್ತು ಸ್ಥಿರ ಆಸ್ತಿಯನ್ನು ಮುಟ್ಟುಗೋಲು ಹಾಕುವುದು. ಅಗತ್ಯವಾದರೆ, ಸ್ಥಿರಾಸ್ತಿಯನ್ನು ಹರಾಜು ಹಾಕುವುದಕ್ಕೆ ಚಿಂತನೆ ನಡೆಸಲಾಗಿದೆ.ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರ ಅನುಕೂಲಕ್ಕಾಗಿ ಜಾರಿಗೆ ತಂದ ‘ಒನ್ ಟೈಮ್ ಸೆಟ್ಟಲ್ಮೆಂಟ್’ ಯೋಜನೆ ಜು.31ಕ್ಕೆ ಮುಕ್ತಾಯಗೊಳ್ಳಲಿದ್ದು, ಯೋಜನೆ ಅವಧಿ ವಿಸ್ತರಣೆ ಸಾಧ್ಯವಿಲ್ಲ. ಆ.1ರಿಂದ ಬಿಬಿಎಂಪಿ ಕಾಯ್ದೆಯ ದಂಡ, ಬಡ್ಡಿ ವಿಧಿಸುವ ಕಾರ್ಯ ಆರಂಭಗೊಳ್ಳಲಿದೆ.
-ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ. ಬಿಬಿಎಂಪಿ.