25 ರಂದು ಡಾ. ಶಿವರಾತ್ರಿ ರಾಜೇಂದ್ರ ಶ್ರೀ ಜಯಂತಿ

KannadaprabhaNewsNetwork |  
Published : Aug 23, 2024, 01:03 AM IST
16 | Kannada Prabha

ಸಾರಾಂಶ

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ

ಕನ್ನಡಪ್ರಭ ವಾರ್ತೆ ಮೈಸೂರುಸುತ್ತೂರು ಜಗದ್ಗುರು ಶ್ರೀ ವೀರ ಸಿಂಹಾಸನ ಮಹಾಸಂಸ್ಥಾನ ಮಠದ 23ನೇ ಪೀಠಾಧಿಪತಿ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಗಳವರ 109ನೇ ಜಯಂತಿ ಮಹೋತ್ಸವವನ್ನು ಆ.25 ರಂದು ಆಚರಿಸಲಾಗುತ್ತಿದೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ತಿಳಿಸಿದರು.ಆ.25ರ ಬೆಳಗ್ಗೆ 11.30ಕ್ಕೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಜಯಂತಿ ಆಯೋಜಿಸಿದ್ದು, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುದ್ದೇನಹಳ್ಳಿ ಸತ್ಯಸಾಯಿ ಆಶ್ರಮದ ಸದ್ಗುರು ಮಧುಸೂದನ‌ಸಾಯಿ ಅವರ ಸಮ್ಮುಖದಲ್ಲಿ ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ ಕಾರ್ಯಕ್ರಮ ಉದ್ಘಾಟಿಸುವರು. ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಅಧ್ಯಕ್ಷತೆ ವಹಿಸುವರು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ನಿವೃತ್ತರಿಗೆ ಅಭಿನಂದನೆಜೆಎಸ್‌ಎಸ್ ಮಹಾವೀದ್ಯಾಪೀಠದ ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಅದೇ ದಿನ ಮಧ್ಯಾಹ್ನ 3ಕ್ಕೆ ಜೆಎಸ್‌ಎಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಅಭಿನಂದನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಬಾರಿ ನಿವೃತ್ತರಾಗಿರುವ 102 ಮಂದಿ ಹಾಗೂ ಸೇವೆಯಿಂದ ಬಿಡುಗಡೆ ಪಡೆದಿರುವ 63 ಜನರನ್ನು ಅಭಿನಂದಿಸಲಾಗುವುದು. ಹಾಗೆಯೇ, 12 ಜನ ಸೇವೆಯಲ್ಲಿರುವಾಗಲೇ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಸಾಂತ್ವನ ಹೇಳಲಾಗುವುದು. ನಂತರ ಜೆಎಸ್‌ಎಸ್ ವಿದ್ಯಾಸಂಸ್ಥೆಗಳಲ್ಲಿ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.ಜೆಎಸ್‌ಎಸ್ ಶಾಲಾ ಕಾಲೇಜುಗಳ ಉತ್ತಮ ವಾರ್ಷಿಕ ಸಂಚಿಕೆಗಳಿಗೆ ಹಾಗೂ ಪ್ರಸಾದ ಮಾಸಿಕ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ಜೆಎಸ್‌ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತರಿಗೆ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಅವರು ವಿವರಿಸಿದರು. ಮೃಗಾಲಯಕ್ಕೆ 1 ಲಕ್ಷ ಕೊಡುಗೆರಾಜೇಂದ್ರ ಶ್ರೀಗಳ ಜಯಂತಿಯ ದಿನದಂದು ಮೈಸೂರು ಮೃಗಾಲಯದ ಪ್ರಾಣಿ, ಪಕ್ಷಿಸಂಕುಲಕ್ಕೆ ಆಹಾರ ವಿತರಣೆ ಮಾಡಲು ಪ್ರತಿ ವರ್ಷದಂತೆ ಈ ವರ್ಷವೂ 1 ಲಕ್ಷ ರೂ. ಚೆಕ್ ನೀಡಲಾಗುತ್ತದೆ. ಜೊತೆಗೆ ರಕ್ತದಾನ, ನೇತ್ರದಾನ ಹಾಗೂ ದೇಹದಾನಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನೂ ಮಾಡಲಾಗುತ್ತದೆ ಎಂದರು.ಜೆಎಸ್‌ಎಸ್ ಗ್ರಂಥಮಾಲೆಯ ಪ್ರಕಟಣೆಗಳಿಗೆ ಆ.25 ರಿಂದ ಸೆ.30 ರವರೆಗೆ ಶೇ.50 ರಷ್ಟು ರಿಯಾಯಿತಿ ನೀಡಲಾಗುತ್ತದೆ.ಪ್ರತಿ ವರ್ಷದಂತೆ ಜೆಎಸ್‌ಎಸ್ ಮಹಾವಿದ್ಯಾಪೀಠದ ಎಲ್ಲಾ ಅಂಗಸಂಸ್ಥೆಗಳು, ವಿವಿಧ ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ವಿವಿಧೆಡೆಗಳಲ್ಲಿ ಜಯಂತಿ ಮಹೋತ್ಸವ ಆಚರಿಸಲಾಗುತ್ತದೆ. ಸಂಸ್ಥೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ. ರೋಗಿಗಳಿಗೆ ಹಣ್ಣು ವಿತರಣೆ, ಶಾಲಾ ಕಾಲೇಜುಗಳಲ್ಲಿ ಸಸಿ ನೆಡುವುದು, ವಿಚಾರ ಸಂಕಿರಣ, ಕ್ರೀಡಾಕೂಟ ಆಯೋಜನೆ, ಪುಸ್ತಕಗಳು, ನೋಟ್‌ಪುಸ್ತಕಗಳು, ಶಾಲಾ ಬ್ಯಾಗ್‌ಗಳು, ಸಮವಸ್ತ್ರಗಳನ್ನು ಅಗತ್ಯವಿರುವ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ ಎಂದು ಅವರು ತಿಳಿಸಿದರು. ಜೆಎಸ್‌ಎಸ್ ಮಹಾವೀದ್ಯಾಪೀಠದ ಕಾರ್ಯದರ್ಶಿ ಶಿವಕುಮಾರಸ್ವಾಮಿ, ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ, ಜೆಎಸ್ಎಸ್ ಕಾನೂನು ‌ಕಾಲೇಜಿನ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್.ಸುರೇಶ್ ಇದ್ದರು.------ ಬಾಕ್ಸ್---- ನಾಳೆ ಸುವರ್ಣ ಮಹೋತ್ಸವ 14ನೇ ವಿಶೇಷ ಉಪನ್ಯಾಸ--ಜೆಎಸ್ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವದ 14ನೇ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆ.24ರ ಸಂಜೆ 4ಕ್ಕೆ ಜೆಎಸ್ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಮುದ್ದೇನಹಳ್ಳಿ ಸತ್ಯಸಾಯಿ ಆಶ್ರಮದ ಸದ್ಗುರು ಮಧುಸೂದನ‌ಸಾಯಿ ಅವರು ಆತ್ಮಾನೋ ಮೋಕ್ಷಾರ್ಥಂ ಜಗತ್ ಹಿತಾಯ ಚ ಕುರಿತು ಉಪನ್ಯಾಸ ನೀಡುವರು ಎಂದು ಜೆಎಸ್‌ಎಸ್ ಮಹಾವೀದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ತಿಳಿಸಿದರು.ಇದೇ ವೇಳೆ ಇನ್ಫೋಸಿಸ್ ಪ್ರತಿಷ್ಠಾನದ ಡಾ. ಸುಧಾ ಮೂರ್ತಿ ಅವರ ದಾನಶೀಲತೆ ಅಗತ್ಯವೇ ಕೃತಿಯ ಅನುವಾದ ಈಸ್ ಚಾರಿಟಿ ಎಸೆನ್ಷಿಯಲ್? ಕೃತಿ, ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಅವರ ಲೀಡರ್ಶಿಪ್ ಆಫ್ ಜಿ20 ಆಪರ್ಚುನಿಟೀಸ್ ಫಾರ್ ಭಾರತ್ ಹಾಗೂ ಅಂತಾರಾಷ್ಟ್ರೀಯ ವೃತ್ತಿಪರ ಲೆಕ್ಕ‌ಪರಿಶೋಧಕರ ಸಂಘದ ಅಧ್ಯಕ್ಷರಾಗಿದ್ದ ಅನೂಪ್ ಎನ್. ಮೆಹ್ತಾ ಅವರ ಟುಮಾರೋಸ್ ಇಂಡಿಯಾ ಬಿಗಿನ್ಸ್ ಟುಡೇ ಲೆವರೇಜಿಂಗ್ ಅಕೌಂಟಬಿಲಿಟಿ ಫಾರ್ ಇಎಸ್ ಜಿ ಕೃತಿಗಳನ್ನು ವಿಶ್ರಾಂತ ಕುಲಪತಿ ಪ್ರೊ.ಜೆ. ಶಶಿಧರಪ್ರಸಾದ್ ಲೋಕಾರ್ಪಣೆ ಮಾಡಲಿದ್ದು, ಮೈಸೂರು ಪ್ರಾದೇಶಿಕ ಆಯುಕ್ತ ಡಿ.ಎಸ್. ರಮೇಶ್ ಅಧ್ಯಕ್ಷತೆ ವಹಿಸುವರು ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ