- ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜನೆ
- ಬಾಳೇಬೈಲಿನ ಕನ್ನಡ ಭವನದಿಂದ ಕಲಾತಂಡಗಳ ಮೆರವಣಿಗೆಗೆ ಕಡಿದಾಳು ದಿವಾಕರ್ ಚಾಲನೆ
- ವಿವಿಧ ವಿಷಯಗಳ ಮೇಲೆ ಮೂರು ಗೋಷ್ಠಿಗಳ ಆಯೋಜನೆ - - - ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನ.29ರಂದು ಎಂ.ನವೀನ್‌ಕುಮಾರ್ ಸಮ್ಮೇಳನಾಧ್ಯಕ್ಷತೆಯಲ್ಲಿ ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ತಾಲೂಕು ಕ.ಸಾ.ಪ. ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ ಹೇಳಿದರು.
ಬಾಳೇಬೈಲಿನ ಕನ್ನಡ ಭವನದಿಂದ ವಿವಿಧ ಕಲಾತಂಡಗಳ ಮೆರವಣಿಗೆ ನಡೆಯಲಿದೆ. ಮಾಜಿ ಶಾಸಕ ಕಡಿದಾಳು ದಿವಾಕರ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 9.30 ಗಂಟೆಗೆ ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ ಎಂದರು.
ಪ್ರಸಕ್ತ ಕಾಲಘಟ್ಟದ ಆತಂಕಗಳು, ಮಳೆಕಾಡು ಸಂಸ್ಕೃತಿ, ಸಮ್ಮೇಳನಾಧ್ಯಕ್ಷರ ಬದುಕು ಬರಹ ಎಂಬ ಮೂರು ಗೋಷ್ಠಿಗಳು ನಡೆಯಲಿದೆ. ʼಮಾನವೀಯ ಮೌಲ್ಯಗಳುʼ ಬಗ್ಗೆ ಲೇಖಕ ಎಚ್.ಕೆ. ವಿವೇಕಾನಂದ, ʼಪರಿಸರ ಸ್ನೇಹಿ ಪ್ರವಾಸೋದ್ಯಮʼ ಕುರಿತು ಪ್ರಗತಿಪರ ಕೃಷಿಕ ಕಡಿದಾಳು ದಯಾನಂದ್, ʼಪ್ರಕೃತಿಯ ಸಕಾಲಿಕ ಮತ್ತು ಅಕಾಲಿಕʼ ವಿಷಯದ ಬಗ್ಗೆ ಚಿಂತಕ ನೆಂಪೆ ದೇವರಾಜ್, ʼಸಾಹಿತ್ಯದಲ್ಲಿ ಮಲೆನಾಡಿನ ಮಹಿಳೆಯರುʼ ಕುರಿತು ಕೆ.ಟಿ. ಪಾರ್ವತಮ್ಮ, ʼಮಲೆನಾಡಿನ ಜಾನಪದʼ ಬಗ್ಗೆ ಜಾನಪದ ವಿದ್ವಾಂಸ ಶಿವಾನಂದ ಕರ್ಕಿ, ʼಕನ್ನಡ ಸಾಹಿತ್ಯಕ್ಕೆ ಮಲೆನಾಡಿನ ಕೊಡುಗೆʼ ಕುರಿತು ಲೇಖಕ ಸರ್ಜಾಶಂಕರ್ ಹರಳೀಮಠ, ʼಸಮ್ಮೇಳನಾಧ್ಯಕ್ಷ ನವೀನ್ ಕುಮಾರ್ ಕಾವ್ಯಗಳುʼ ಕುರಿತು ಉಪನ್ಯಾಸಕ ನವೀನ್ ಮಂಡಗದ್ದೆ, ʼಸಮ್ಮೇಳನಾಧ್ಯಕ್ಷರ ಕಥೆಗಳುʼ ಬಗ್ಗೆ ಉಪನ್ಯಾಸಕಿ ಅನಿತಾ ಹೆಗ್ಗೋಡು ಮಾತನಾಡಲಿದ್ದಾರೆ ಎಂದು ತಿಳಿಸಿದರು.
- - - (-ಫೋಟೋ: ಸಾಂದರ್ಭಿಕ ಚಿತ್ರ)