10ರಿಂದ ದತ್ತಾಂಜನೇಯಸ್ವಾಮಿ ಬ್ರಹ್ಮ ಕುಂಭಾಭಿಷೇಕ ಮಹೋತ್ಸವ

KannadaprabhaNewsNetwork | Published : Jul 9, 2024 12:51 AM

ಸಾರಾಂಶ

ಶ್ರೀ ದತ್ತಾಂಜನೇಯ ಸ್ವಾಮಿ ದೇವಾಲಯದ ಬ್ರಹ್ಮ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮ ಜು.10 ರಿಂದ 14 ರವರೆಗೆ ನಡೆಯಲಿದೆ

ಕನ್ನಡಪ್ರಭ ವಾರ್ತೆ ಗುಬ್ಬಿ

ನಿಷ್ಕಾಮ ಕರ್ಮ ಯೋಗ ಸಿದ್ಧಿಯ ಅವಧೂತ ಪರಂಪರೆಯ ಚಿದಂಬರಾಶ್ರಮದಲ್ಲಿನ ಪುರಾತನ ಶ್ರೀ ದತ್ತಾಂಜನೇಯ ಸ್ವಾಮಿ ದೇವಾಲಯದ ಬ್ರಹ್ಮ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮ ಜು.10 ರಿಂದ 14 ರವರೆಗೆ ನಡೆಯಲಿದೆ ಎಂದು ಚಿದಂಬರಾಶ್ರಮದ ಟ್ರಸ್ಟಿ ಡಾ.ಸಚ್ಚಿದಾನಂದ ಶರ್ಮಾ ತಿಳಿಸಿದರು.ಪಟ್ಟಣದ ಶ್ರೀ ಚಿದಂಬರಾಶ್ರಮದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐದು ದಿನಗಳ ಕಾಲ ನಡೆಯುವ ಕಾರ್ಯಕ್ರಮದ ಪೈಕಿ ಜು.12 ರಂದು ಮಧ್ಯಾಹ್ನ 12 ಕ್ಕೆ ಸಲ್ಲುವ ಕನ್ಯಾ ಲಗ್ನದಲ್ಲಿ ಬ್ರಹ್ಮ ಕುಂಭಾಭಿಷೇಕ ಮಹೋತ್ಸವ ನಡೆಯಲಿದೆ. ಅವಧೂತ ಪರಂಪರೆಯ ಚಿದಂಬರ ಶ್ರೀಗಳು ಸ್ಥಾಪಿತ ಈ ಆಶ್ರಮದಲ್ಲಿ ಕಳೆದ ಎಂಭತ್ತು ವರ್ಷದಿಂದ ನಿರಂತರ ಶೈಕ್ಷಣಿಕ ಸೇವೆ, ಆಧ್ಯಾತ್ಮ, ವೇದಾಧ್ಯಯನ, ಸನಾತನ ಜೊತೆ ಆಧುನಿಕ ಸ್ಪರ್ಶದ ಎಲ್ಲಾ ಆಯಾಮದ ಶಿಕ್ಷಣ ಜಾತ್ಯತೀತವಾಗಿ ನೀಡಲಾಗುತ್ತಿದೆ ಎಂದರು.

ಕನ್ನಡದಲ್ಲಿ ಗೀತಾ ಪಾರಾಯಣಕ್ಕೆ ಪುಸ್ತಕ ರಚಿಸಿದ ಶ್ರೀಗಳು ಗುರುಗೀತೆ, ದತ್ತಾತ್ರೇಯ ಕಲ್ಪ, ಸ್ತೋತ್ರಾ ಮಾಲ ಹೀಗೆ 60 ಕ್ಕೂ ಅಧಿಕ ಕೃತಿ ರಚಿಸಿ ಜಾತ್ಯತೀತವಾಗಿ ಮಹಿಳೆಯರಿಗೆ ಲಲಿತ ಪೂಜೆ, ಗೌರಿ ಪೂಜೆ ಸಾಮೂಹಿಕವಾಗಿ ನಡೆಸಿ ಕಲಿಸಿದ ಹೆಗ್ಗಳಿಕೆ ಆಶ್ರಮಕ್ಕಿದೆ ಎಂದರು.ಚಿದಂಬರಾಶ್ರಮದ ವೇದಗುರು ಶ್ರೀ ಅತೀತಾನಂದ ಮಾತನಾಡಿ, ಆಶ್ರಮದಲ್ಲಿ ನಿರ್ಮಾಣವಾಗಿರುವ ಪುರಾತನ ಶ್ರೀ ದತ್ತಾಂಜನೇಯ ಸ್ವಾಮಿ ದೇವಾಲಯದ ಕುಂಭಾಭಿಷೇಕ ಕಾರ್ಯಕ್ರಮ ಜು.10 ರಂದು ಬೆಳಿಗ್ಗೆ ಗುರುವಂದನೆ, ಫಲಸಮರ್ಪಣೆ, ಗಣಪತಿ ಪೂಜೆ, ಅಂಕುರಾರ್ಪಣೆ, ಧ್ವಜಾರೋಹಣ ಮೂಲಕ ಆರಂಭವಾಗಿ ಸಂಜೆ ಹೋಮ ಹವನಾದಿಗಳು,11 ರಂದು ಕಲಶ ಸ್ಥಾಪನೆ, ಶೋಡಶನ್ಯಾಸ, ಅಧಿವಾಸ, ದತ್ತಾತ್ರೇಯ ಮಹಾಮಂತ್ರ ಅಭಿಮಂತ್ರಣ, ಶಯನೋತ್ಸವ,12 ರಂದು ಬ್ರಹ್ಮ ಕುಂಭಾಭಿಷೇಕ ಮಹೋತ್ಸವ,13 ರಂದು ಆಂಜನೇಯ ಮೂಲಮಂತ್ರ ಹವನ, ಬ್ರಹ್ಮ ಕಲಾಶಾಭಿಷೇಕ, ಸಂಜೆ ಗುರುಪಾದುಕಾ ಪೂಜೆ ನಡೆದು, 14 ರಂದು ಬೆಳಿಗ್ಗೆ ಮಹಾಯಾಗ ನಡೆಸಲಾಗಿ ಮಧ್ಯಾಹ್ನ 3 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಕೇಂದ್ರದ ಜಲಶಕ್ತಿ, ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ಶಾಸಕ ಎಸ್.ಆರ್.ಶ್ರೀನಿವಾಸ್, ಶಿರಳಗಿ ರಾಜಾರಾಮ ಆಶ್ರಮದ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿ, ಅಗಡಿ ಆನಂದವನ ಶ್ರೀ ವಿಶ್ವನಾಥ ಚಕ್ರವರ್ತಿ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Share this article