ಶಿವಕುಮಾರ ಕುಷ್ಟಗಿ ಗದಗ
ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಇನ್ನೂ ಸಾವಿರಾರು ಸಂಖ್ಯೆಯ ಅನರ್ಹರಿದ್ದು, ಅವರ ಕಾರ್ಡ್‌ಗಳು ಕೂಡಾ ಸಧ್ಯದಲ್ಲಿಯೇ ರದ್ದಾಗಲಿವೆ ಎನ್ನುವ ಚರ್ಚೆ ಕೇಳಿಬರುತ್ತಿದೆ.
253458 ಬಿಪಿಎಲ್ ಕಾರ್ಡ್: ಸರ್ಕಾರದ ಆಹಾರ ಇಲಾಖೆಯ ದಾಖಲೆಗಳ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 253458 ಬಿಪಿಎಲ್ ಕಾರ್ಡ್‌ಗಳಿವೆ. ಅವುಗಳಲ್ಲಿ ಸಧ್ಯ (ಮೊದಲ ಹಂತ) 1119 ಕಾರ್ಡ್‌ಗಳು ರದ್ದಾಗಿವೆ. ಇವುಗಳಲ್ಲಿ ಕೆಲ ಕಾರ್ಡ್‌ಗಳು ಎಪಿಎಲ್ ಆಗಿ ಬದಲಾವಣೆಯಾಗಿದ್ದು, ಯಾರ ಕಾರ್ಡ್ ಬದಲಾವಣೆಯಾಗಿದೆ. ಯಾವ ಕಾರಣಕ್ಕಾಗಿ ಬದಲಾವಣೆ ಮಾಡಿದ್ದಾರೆ ಎನ್ನುವ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದ್ದು ಇದಕ್ಕೆ ಇಲಾಖೆ ಕೂಡಲೇ ಸ್ಪಷ್ಟನೆ ನೀಡಬೇಕಿದೆ.200ಕ್ಕೂ ಅಧಿಕ ಸರ್ಕಾರಿ ನೌಕರರು: ಸದ್ಯ ರದ್ದಾಗಿರುವ 1119 ಕಾರ್ಡ್‌ಗಳಲ್ಲಿ 200 ಕ್ಕೂ ಅಧಿಕ ಜನ ಸರ್ಕಾರಿ ನೌಕರರೇ ಇದ್ದಾರೆ ಎನ್ನುವುದು ವಿಶೇಷ, ಇವರೊಟ್ಟಿಗೆ ಆದಾಯ ತೆರಿಗೆ ಪಾವತಿಸುತ್ತಿರುವವರು, ನಿಗಮ ಮಂಡಳಿಗಳಲ್ಲಿ ಕಾಯಂ ನೌಕರಿ ಹೊಂದಿರುವವರ ಕುಟುಂಬಸ್ಥರು, ಮನೆಗಳನ್ನು ಬಾಡಿಗೆ ಕೊಟ್ಟು ಉತ್ತಮ ಆದಾಯ ಗಳಿಸುತ್ತಿರುವವರು, ಕಾರು ಸೇರಿದಂತೆ ಇತರೇ ವಾಹನ ಹೊಂದಿರುವವರು ಹೀಗೆ ಸರ್ಕಾರದ 8 ಕ್ಕೂ ಅಧಿಕ ನಿಯಮಗಳ ವ್ಯಾಪ್ತಿ ಮೀರಿದವರ ಕಾರ್ಡ್ ಸದ್ಯ ರದ್ದಾಗಿವೆ.
ಹಾಗೆಯೇ ಉಳಿದಿವೆ:ಸಧ್ಯ ರದ್ದಾಗಿರುವ ಬಿಪಿಎಲ್ ಕಾರ್ಡ್‌ಗಳಲ್ಲಿ 200 ಜನ ಸರ್ಕಾರಿ ನೌಕರರು ಇದ್ದಾರೆ. ಅವರು ಸರ್ಕಾರಿ ನೌಕರಿ ಪಡೆಯುವ ಸಂದರ್ಭದಲ್ಲಿ ಆ ಕುಟುಂಬ ಬಡತನ ರೇಖೆಗಿಂತ ಕೆಳಗೆ ಇರುತ್ತದೆ. ಹಾಗಾಗಿ ಬಿಪಿಎಲ್ ಕಾರ್ಡ್ ಹೊಂದಿರುತ್ತಾರೆ. ಆದರೆ ಸರ್ಕಾರಿ ನೌಕರಿ ಪಡೆದ ನಂತರ ಆ ಕುಟುಂಬಗಳು ಅದನ್ನು ರದ್ದು ಪಡಿಸಬೇಕು, ಆದರೆ ರದ್ದು ಪಡಿಸದೇ ಇರುವುದೇ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಲು ಪ್ರಮುಖ ಕಾರಣವಾಗಿದೆ. ಇನ್ನು ತುಂಬು ಕುಟುಂಬದಲ್ಲಿನ ಒರ್ವರಿಗೆ ಸರ್ಕಾರಿ ನೌಕರಿ ಬಂದ ನಂತರ ಬಿಪಿಎಲ್ ಕಾರ್ಡ್ ರದ್ದಾದರೆ, ಇನ್ನುಳಿದ ಸಹೋದರರ ಗತಿ ಏನು ? ಹಾಗಾಗಿಯೇ ಹಲವಾರು ಸರ್ಕಾರಿ ನೌಕರರ ಕುಟುಂಬಗಳು (ಸರ್ಕಾರಿ ದಾಖಲೆಗಳ ಪ್ರಕಾರ) ಬಿಪಿಎಲ್ ಕಾರ್ಡ್ ಉಳಿಸಿಕೊಂಡಿದ್ದಾರೆ ಎನ್ನುವುದು ವಾಸ್ತವ.
ಸರ್ಕಾರದ ನಿಯಮ ಮತ್ತು ಮಾರ್ಗಸೂಚಿಯ ಅನ್ವಯ ಅನರ್ಹ ಬಿಪಿಎಲ್ ಕಾರ್ಡ್‌ದಾರರ ಪಟ್ಟಿ ಮಾಡಲಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಯಾವುದೇ ಕುಟುಂಬಗಳಿಗೂ ತೊಂದರೆಯಾಗುವುದಿಲ್ಲ ಎಂದು ಆಹಾರ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ ಎಚ್. ತಿಳಿಸಿದ್ದಾರೆ.