ವಿಟಮಿನ್ ಎ ಡ್ರಾಪ್ಸ್ ಸೇವಿಸಿದ 13 ಮಕ್ಕಳು ಅಸ್ವಸ್ಥ

KannadaprabhaNewsNetwork |  
Published : Jul 11, 2025, 12:31 AM IST

ಸಾರಾಂಶ

ಅಂಗನವಾಡಿ ಮಕ್ಕಳಿಗೆ ನೀಡಲಾದ ವಿಟಮಿನ್ ಎ ಡ್ರಾಪ್ಸ್ ಸೇವಿಸಿದ 13 ಮಕ್ಕಳಲ್ಲಿ ವಾಂತಿ ಬೇದಿ ಕಾಣಿಸಿಕೊಂಡು ಅಸ್ವಸ್ಥರಾಗಿರುವ ಘಟನೆ ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಿರೇಸಾನಿ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಂಗನವಾಡಿ ಮಕ್ಕಳಿಗೆ ನೀಡಲಾದ ವಿಟಮಿನ್ ಎ ಡ್ರಾಪ್ಸ್ ಸೇವಿಸಿದ 13 ಮಕ್ಕಳಲ್ಲಿ ವಾಂತಿ ಬೇದಿ ಕಾಣಿಸಿಕೊಂಡು ಅಸ್ವಸ್ಥರಾಗಿರುವ ಘಟನೆ ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಿರೇಸಾನಿ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ನಡೆದಿದೆ.

ಇರುಳುಗಣ್ಣು ನಿವಾರಣೆಗಾಗಿ ಮುಂಜಾಗ್ರತಾ ಕ್ರಮವಾಗಿ ಮಕ್ಕಳಿಗೆ ವಿಟಮಿನ್ ಎ ಡ್ರಾಪ್ ಹಾಕಿದ ನಂತರದಲ್ಲಿ ಈ ರೀತಿಯಾಗಿ ಸಮಸ್ಯೆಯಾಗಿದೆ ಎಂದು ಪೋಷಕರು ಆರೋಪಿಸುತಿದ್ದಾರೆ. ಸ್ಥಳೀಯ ನೀರಿನ ಸಮಸ್ಯೆಯಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿರಬಹುದು ಎಂದು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಅಂಗನವಾಡಿಯಲ್ಲಿ ಮಕ್ಕಳಿಗೆ ವಿಟಮಿನ್ ಎ ಡ್ರಾಪ್ಸ್ ನೀಡಲಾಗುತ್ತಿದ್ದು , ಆದರಂತೆ ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ 6 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ ಡ್ರಾಫ್ಸ್ ಅನ್ನು ಮಂಗಳವಾರದಂದು ನೀಡಲಾಗಿದ್ದು, ಅಂದೇ ಸಂಜೆ ಮಕ್ಕಳಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡು ತಕ್ಷಣ ಖಾಸಗಿ ಅಸ್ಪತ್ರೆಯಲ್ಲಿ ತೋರಿಸಲಾಗಿದೆ‌. ಮಕ್ಕಳು ತೀವ್ರ ನಿತ್ರಾಣಗೊಂಡಿದ್ದು, ರಿಪ್ಪನ್‌ಪೇಟೆ ಸರ್ಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಕರೆತಂದು ತಕ್ಷಣ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ‌.

ಸುದ್ದಿ ಹರಡುತ್ತಿದ್ದಂತೆ ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಹೊಸನಗರ ಸಿಡಿಪಿಓ ಕಚೇರಿ ಅಧಿಕಾರಿಗಳು ಸೇರಿದಂತೆ ಇತರ ತಾಲೂಕು ಅಧಿಕಾರಿಗಳು ದೌಡಾಯಿಸಿದ್ದರು.

ಅಸ್ವಸ್ಥರಾಗಿದ್ದ ಅಂಗನವಾಡಿ ಮಕ್ಕಳನ್ನು ಶಿವಮೊಗ್ಗದ ಮೆಗ್ಗಾನ್ ಗೆ ರವಾನಿಸಲು ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್‌ ‌ಸಿಗದ ಕಾರಣ ಮಕ್ಕಳ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಈ ಸಂಧರ್ಭದಲ್ಲಿ ವಿಷಯ ತಿಳಿದ ಶಾಸಕ ಬೇಳೂರು ಗೋಪಾಲಕೃಷ್ಣ ಖಾಸಗಿ ಆಂಬುಲೆನ್ಸ್ ವ್ಯವಸ್ಥೆ ಮಾಡುವ ಮೂಲಕ ಮಕ್ಕಳನ್ನು ಮೆಗ್ಗಾನ್ ಗೆ ಕಳುಹಿಸಿಕೊಟ್ಟರು. ಮೆಗ್ಗಾನ್ ನ ವೈದ್ಯಾಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಅಸ್ವಸ್ಥ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದರು.

ಅಸ್ವಸ್ಥಗೊಂಡಿದ್ದ ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 11 ಮಕ್ಕಳ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಇಬ್ಬರಿಗೆ ಜ್ವರ ಕಾಣಿಸಿಕೊಂಡಿದೆ. ಇವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು‌ ಮೆಗ್ಗಾನ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ

-----------------

ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.

PREV