ಜೇವರ್ಗಿ ಕೆರೆ, ಬಾಂದಾರು ಯೋಜನೆಗೆ ರು.130 ಕೋಟಿ

KannadaprabhaNewsNetwork | Published : Feb 17, 2024 1:20 AM

ಸಾರಾಂಶ

ಅಭಿವೃದ್ದಿಯ ಜೊತೆ ಜನಕಲ್ಯಾಣದ ಬದ್ದತೆಯ ಕಾಂಗ್ರೆಸ್‌ ಸಿದ್ಧಾಂತ ಒಳಗೊಂಡ ಬಜೆಟ್‌ ಇದಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರು, ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಧರ್ಮಸಿಂಗ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ರಾಜ್ಯದ ಸಿಎಂ ಸಿದ್ದರಾಮಯ್ಯನವರು ಈ ಬಾರಿ 3,71,383 ಕೋಟಿ ರು. ಗಾತ್ರದ ಜನಪರ ಬಜೆಟ್‌ ಮಂಡಿಸಿದ್ದಾರೆ. ಕಳೆದ ಬಾರಿಯ ಬಜೆಟ್‌ ಗಾತ್ರಕ್ಕೆ ಹೋಲಿಸಿದಲ್ಲಿ ಇದು ಶೇ.19ರಷ್ಟು ಹೆಚ್ಚಳವಾದಂತಹ ಬಜೆಟ್‌ ಆಗಿದ್ದು ಸರ್ವಸ್ಪರ್ಶಿ, ಸರ್ವದರ್ಶಿ ಬಜೆಟ್‌ ಮಂಡಿಸಿದ್ದಾರೆ, ಅಭಿವೃದ್ದಿಯ ಜೊತೆ ಜನಕಲ್ಯಾಣದ ಬದ್ದತೆಯ ಕಾಂಗ್ರೆಸ್‌ ಸಿದ್ಧಾಂತ ಒಳಗೊಂಡ ಬಜೆಟ್‌ ಇದಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರು, ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಧರ್ಮಸಿಂಗ್‌ ಹೇಳಿದ್ದಾರೆ.

ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ, ಅಲ್ಲಿನ ಸರ್ವತೋಮುಖ ಪ್ರಗತಿಗೆ ಪೂರಕವಾಗುವಂತಹ ಅನೇಕ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸುವ ಮೂಲಕ ಮುಖ್ಯಮಂತ್ರಿಗಳು ಈ ಬಜೆಟ್‌ ಕಲ್ಯಾಣ ನಾಡಿನ ಪ್ರಗತಿ ಸ್ನೇಹಿ ಬಜೆಟ್ಟಾಗಿಸಿದ್ದಾರೆ.

ಈ ಬಾರಿಯೂ 2024-25 ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲು 5,000 ಕೋಟಿ ರು. ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿ ಘೋಷಣೆ ಮಾಡಿದ್ದು ಇದರಿಂದಾಗಿ ಕಲ್ಯಾಣ ನಾಡಲ್ಲಿ ಪ್ರಗತಿ ಹಸಿರು ಚಿಗುರಲಿದೆ ಎಂದಿದ್ದಾರೆ.

46 ಪಿಎಚ್‌ಸಿಗಳಿಗೆ 221 ಕೋಟಿ ರು. ವೆಚ್ಚ:

ಕಲ್ಯಾಣ ಕರ್ನಾಟಕ ಭಾಗದಲ್ಲಿ 46 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 221 ಕೋಟಿ ರು.ಗಳ ವೆಚ್ಚದಲ್ಲಿ ಕೆಕೆಆರ್‌ಡಿಬಿ ಮೂಲಕ ಸ್ಥಾಪಿಸುವುದು, ಸರ್ಕಾರಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸುವುದು ಬಜೆಟ್‌ನ ಜನಪ್ರೀಯ ಘೋಷಣೆಗಳು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವತಿಯಿಂದ ಕೊಪ್ಪಳ, ಬೀದರ್, ಯಾದಗಿರಿ, ರಾಯಚೂರು ಮತ್ತು ಕಲಬುರಗಿಯಲ್ಲಿ ವಿಶ್ವವಿದ್ಯಾಲಯಗಳ ಘಟಕ ಕಾಲೇಜನ್ನು ಅವಶ್ಯವಿರುವ ಜಿಲ್ಲಾ/ ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪಿಸುವುದಕ್ಕೂ ಬಜೆಟ್‌ ಘೋಷಣೆಯಲ್ಲಿ ಪ್ರಮುಖವಾಗಿದೆ.

ಇನ್ನು 2 ದಶಕದ ಹಳೆಯದಾದ ಡಾ. ಡಿ.ಎಂ. ನಂಜುಂಡಪ್ಪ ವರದಿಯ ಅನುಷ್ಠಾನದ ನಂತರದ ಬದಲಾವಣೆಗಳನ್ನು ಅಧ್ಯಯನ ಮಾಡಲು ಉನ್ನತಾಧಿಕಾರ ಸಮೀತಿ ರಚಿಸುವ ಬಗ್ಗೆ ಬಜೆಟ್‌ನಲ್ಲಿ ಮಾಡಿರುವ ಗೋಷಣೆಯನ್ನೂ ಡಾ. ಅಜಯ್‌ ಸಿಂಗ್‌ ಸ್ವಾಗತಿಸಿದ್ದಾರೆ. ಇದರಿಂದಾಗಿ ಹೊಸ ವರದಿ ಆಧರಿಸಿಯೇ ರಾಜ್ಯದಲ್ಲಿನ ಆರ್ಥಿಕ ಮತ್ತು ಪ್ರಾದೇಶಿಕ ಅಸಮಾನತೆಯ ಆಧಾರದ ಮೇಲೆ ಜಿಲ್ಲೆ ಮತ್ತು ತಾಲ್ಲೂಕುಗಳನ್ನು ವರ್ಗೀಕರಿಸಿ ಹೊಸ ಅಭಿವೃದ್ಧಿ ಸೂಚ್ಯಂಕಗಳನ್ನು ತಯಾರಿಸಲು ಹೆಚ್ಚಿನ ಅನುಕೂಲವಾಗಲಿದೆ ಎಂದು ಡಾ. ಅಜಯ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಜೇವರ್ಗಿ ಕೆರೆ ತುಂಬಿಸುವ, ಬಾಂದಾರು ಯೋಜನೆಗೆ ಗ್ರೀನ್‌ ಸಿಗ್ನಲ್‌:

ತಾವು ಪ್ರತಿನಿಧಿಸುತ್ತಿರುವ ಜೇವರ್ಗಿ ತಾಲೂಕಿನಲ್ಲಿರುವ ಕೆರೆಗಳನ್ನು ತುಂಬಿಸುವ ಯೋಜನೆ ಹಾಗೂ ಸಣ್ಣ ನೀರಾವರಿ ಇಲಾಖೆಯಡಿಯಲ್ಲಿ ಹರವಾಳದ ಬಳಿ ಭೀಮಾ ನದಿಗೆ ಬಾಂದಾರು ಸೇತುವೆ ಕಟ್ಟುವ ಯೋಜನೆಗೂ ಬಜೆಟ್‌ನಲ್ಲಿ ಹಸಿರು ನಿಶಾನೆ ದೊರಕಿದೆ.

ಇದಕ್ಕಾಗಿ 130 ಕೋಟಿ ರುಪಾಯಿ ಹಣವೂ ಮೀಸಲಿಡಲಾಗಿದೆ. ಇದರಿಂದ ಜೇವರ್ಗಿ ತಾಲೂಕಿನಲ್ಲಿ ನೀರಾವರಿಗೆ ಹೆಚ್ಚಿನ ಅನುಕೂಲವಾಗಲಿದೆಯಲ್ಲದೆ ಜನ ಸಂಪರ್ಕಕ್ಕೂ ಹೆಚ್ಚಿನ ಅನುಕೂಲವಗಲಿದೆ ಎಂದು ಡಾ. ಅಜಯ್ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿಗಳು ನಮ್ಮ ಕಲ್ಯಾಣ ಕರ್ನಾಟಕ ಭಾಗದ ಆಶೋತ್ತರಗಳಿಗೆ ಹಾಗೂ ಈ ಪ್ರದೇಶದ ಜನಪ್ರತಿನಿಧಿಗಳ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಇದು ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಕಾಂಗ್ರೆಸ್ ಸರಕಾರ ಬದ್ದತೆಯನ್ನ ತೋರಿಸಿದೆ ಎಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

Share this article