138 ಹುದ್ದೆ ಖಾಲಿ, ಕೊರೋನಾ ವಿರುದ್ಧ ಹೋರಾಡುವುದು ಹೇಗೆ?

KannadaprabhaNewsNetwork | Updated : Jan 06 2024, 05:47 PM IST

ಸಾರಾಂಶ

ಒಂದೆಡೆ ಕೋವಿಡ್‌ನ ಹೊಸ ರೂಪಾಂತರಿ ತಳಿ ನಿಧಾನವಾಗಿ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಜಿಲ್ಲಾ ಆರೋಗ್ಯ ಇಲಾಖೆಯ 138 ಹುದ್ದೆಗಳು ಖಾಲಿ ಇವೆ.ಇದು ಕೊರೋನಾ ವಿರುದ್ಧ ಯುದ್ಧ ಸಾರಿರುವ ಗದಗ ಜಿಲ್ಲಾ ಆರೋಗ್ಯ ಇಲಾಖೆಯ ಅಸಹಾಯಕ ಸ್ಥಿತಿ.

ಶಿವಕುಮಾರ ಕುಷ್ಟಗಿ  ಕನ್ನಡಪ್ರಭ ವಾರ್ತೆ 

ಗದಗ: ಒಂದೆಡೆ ಕೋವಿಡ್‌ನ ಹೊಸ ರೂಪಾಂತರಿ ತಳಿ ನಿಧಾನವಾಗಿ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಜಿಲ್ಲಾ ಆರೋಗ್ಯ ಇಲಾಖೆಯ 138 ಹುದ್ದೆಗಳು ಖಾಲಿ ಇವೆ.

ಜಿಲ್ಲಾ ಆಸ್ಪತ್ರೆ, ಒಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆ, 4 ತಾಲೂಕು ಆರೋಗ್ಯ ಕೇಂದ್ರಗಳು, 2 ಸಮುದಾಯ ಆರೋಗ್ಯ ಕೇಂದ್ರಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು 3, ಪ್ರಾಥಮಿಕ ಆರೋಗ್ಯ ಕೇಂದ್ರಗಳು 39 ಹಾಗೂ 190 ಉಪ ಕೇಂದ್ರಗಳು ಸೇರಿದಂತೆ ಒಟ್ಟು 240 ಆರೋಗ್ಯ ಕೇಂದ್ರಗಳು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.

138 ಹುದ್ದೆಗಳು ಖಾಲಿ: 57 ತಜ್ಞ ವೈದ್ಯರ ಪೈಕಿ ಕೇವಲ 26 ಜನ ಕಾರ್ಯ ನಿರ್ವಹಿಸುತ್ತಿದ್ಧಾರೆ. 13 ತಜ್ಞ ವೈದ್ಯ ಹುದ್ದೆಗಳು ಗುತ್ತಿಗೆ ಆಧಾರದಲ್ಲಿ ಮಂಜೂರಾತಿ ಹೊಂದಿದ್ದು, 10 ಜನ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು 3 ಹುದ್ದೆಗಳು ಖಾಲಿ ಇವೆ. 41 ವೈದ್ಯರ (ಎಂಬಿಬಿಎಸ್) ಪೈಕಿ 32 ಜನ ಕಾರ್ಯ ನಿರ್ವಹಿಸುತ್ತಿದ್ದು, 9 ಹುದ್ದೆಗಳು ಖಾಲಿ ಇವೆ. 23 ವೈದ್ಯ (ಎಂಬಿಬಿಎಸ್) ಹುದ್ದೆಗಳು ಗುತ್ತಿಗೆ ಆಧಾರದಲ್ಲಿ ಮಂಜೂರಾಗಿದ್ದು, 13 ಜನ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 10 ಹುದ್ದೆ ಖಾಲಿ ಇವೆ.

106 ಸ್ಟಾಫ್ ನರ್ಸ್‌ ಹುದ್ದೆಗಳ ಪೈಕಿ 99 ಜನ ಕಾರ್ಯ ನಿರ್ವಹಿಸುತ್ತಿದ್ದು, 7 ಹುದ್ದೆ ಖಾಲಿ ಇವೆ. ಗುತ್ತಿಗೆ ಆಧಾರದಲ್ಲಿ 121 ಸ್ಟಾಫ್ ನರ್ಸ್‌ ಮಂಜೂರಾಗಿದ್ದು, 115 ಜನ ಕಾರ್ಯ ನಿರ್ವಹಿಸುತ್ತಿದ್ದು 6 ಖಾಲಿ ಇವೆ.

ಪಿಎಚ್ ಸಿಓ ಸರ್ಕಾರಿ (ಆರೋಗ್ಯ ಉಪಕೇಂದ್ರಗಳು 190 ಮಂಜೂರಾತಿ ಪಡೆದಿದ್ದು 143 ಕಾರ್ಯ ನಿರ್ವಹಿಸುತ್ತಿದ್ದು 47 ಹುದ್ದೆಗಳು ಖಾಲಿ ಇವೆ, ಇನ್ನು ಪಿಎಚ್ ಸಿಓ ಗುತ್ತಿಗೆ ಆಧಾರದಲ್ಲಿ 24 ಮಂಜೂರಾತಿ ಇದ್ದು, ಎಲ್ಲಾ 24 ಹುದ್ದೆಗಳು ಭರ್ತಿಯಾಗಿವೆ. ಲ್ಯಾಬ್ ಟೆಕ್ನಿಶಿಯನ್ ಸರ್ಕಾರಿ ವಿಭಾಗದಲ್ಲಿ 54 ಮಂಜೂರಾತಿ ಇದ್ದು, 38 ಜನ ಕಾರ್ಯ ನಿರ್ವಹಿಸುತ್ತಿದ್ದು 16 ಖಾಲಿ ಇವೆ. 

ಗುತ್ತಿಗೆ ಆಧಾರದಲ್ಲಿ 12 ಹುದ್ದೆಗಳಿದ್ದು, 11 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಫಾರ್ಮಾಸಿಸ್ಟ್ 54 ಹುದ್ದೆ ಮಂಜೂರಿದ್ದು, ಅವರಲ್ಲಿ 46 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. 8 ಹುದ್ದೆಗಳು ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 695 ಹುದ್ದೆಗಳು ಜಿಲ್ಲೆಗೆ ಮಂಜೂರಾಗಿದ್ದು, ಅವರಲ್ಲಿ 557 ಜನ ಕಾರ್ಯ ನಿರ್ವಹಿಸುತ್ತಿದ್ದು, 138 ಹುದ್ದೆಗಳು ಖಾಲಿ ಇವೆ. 

ಜಿಲ್ಲೆಯಲ್ಲಿ 11.69 ಲಕ್ಷ ಜನರಿದ್ದಾರೆ, ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರ ನಿಗದಿ ಮಾಡಿರುವ ವೈದ್ಯರು, ತಜ್ಞ ವೈದ್ಯರ ಹುದ್ದೆಗಳು ಅತ್ಯಂತ ಕಡಿಮೆ ಇವೆ. 1170 ಜನ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಬೇಕು. ಆದರೆ ಸದ್ಯಕ್ಕೆ ಜಿಲ್ಲೆಗೆ ಮಂಜೂರಾಗಿರುವದೇ 695 ಹುದ್ದೆಗಳು, ಅವರಲ್ಲಿ 557 ಜನ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ಜಿಲ್ಲೆಯ ಆರೋಗ್ಯ ಇಲಾಖೆಗೆ ಹುದ್ದೆಗಳ ಮಂಜೂರಾತಿಯಲ್ಲಿಯೇ ಸಾಕಷ್ಟು ಕಡಿತಗೊಳಿಸಿದೆ. 

ಸರ್ಕಾರಿ ಹುದ್ದೆಗಳೇ ಹೆಚ್ಚು ಖಾಲಿ: ಜಿಲ್ಲೆಗೆ ಮಂಜೂರಾಗಿರುವ ಒಟ್ಟು 695 ಹುದ್ದೆಗಳಲ್ಲಿ 502 ಸರ್ಕಾರಿ ಹುದ್ದೆಗಳಾಗಿದ್ದು, ಇವುಗಳಲ್ಲಿ 117 ಹುದ್ದೆಗಳು ಖಾಲಿ ಇವೆ. ಇನ್ನು ಗುತ್ತಿಗೆ ಆಧಾರದಲ್ಲಿ ಒಟ್ಟು 193 ಹುದ್ದೆಗಳು ಮಂಜೂರಾಗಿದ್ದು, ಅವುಗಳಲ್ಲಿ ಕೇವಲ 21 ಹುದ್ದೆಗಳು ಮಾತ್ರ ಖಾಲಿ ಇವೆ. ಇನ್ನುಳಿದ 172 ಹೊರ ಗುತ್ತಿಗೆ ಹುದ್ದೆಗಳು ಭರ್ತಿಯಾಗಿದ್ದು, ಸರ್ಕಾರಿ ಹುದ್ದೆಗಳೇ ಹೆಚ್ಚು ಖಾಲಿ ಇವೆ. 

ಕೋವಿಡ್ ಸಂಕಷ್ಟ ಈಗಷ್ಟೇ ಸಣ್ಣಗೆ ಪ್ರಾರಂಭವಾಗಿದ್ದು, ಇದು ತೀವ್ರ ಸ್ವರೂಪ ಪಡೆದಲ್ಲಿ ಈ ಹಿಂದಿನಂತೆ ಮತ್ತೆ ಸರ್ಕಾರ ಖಾಸಗಿ ಆಸ್ಪತ್ರೆಗಳ ಸಹಾಯಕ್ಕೆ ಕೈ ಚಾಚಬೇಕಾದ ಅನಿವಾರ್ಯತೆ ಎದುರಾಗಲಿದೆ.ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಸರ್ಕಾರ ಕೂಡಲೇ ಭರ್ತಿ ಮಾಡಬೇಕು. ಆ ಮೂಲಕ ಬಡವರ ಆರೋಗ್ಯ ರಕ್ಷಣೆಯಲ್ಲಿ ಸರ್ಕಾರ ವಿಶೇಷ ಗಮನ ನೀಡಬೇಕು ಕನ್ನಡಪರ ಸಂಘಟನೆಯ ಹೋರಾಟಗಾರ ಚಂದ್ರಕಾಂತ ಚವಾಣ ಹೇಳಿದರು.

Share this article