ಶಿವಕುಮಾರ ಕುಷ್ಟಗಿ
ಗದಗ: ಜಿಲ್ಲೆಯಲ್ಲಿ ಒಂದೆಡೆ ಅಭಿವೃದ್ಧಿ ಆಗುತ್ತಿಲ್ಲ, ಇದರಿಂದಾಗಿ ಜನರು ಪರದಾಡುತ್ತಾ ನಿತ್ಯವೂ ಸ್ಥಳೀಯ ಸಂಸ್ಥೆಗಳಿಗೆ ಮನವಿ ಪತ್ರ ಹಿಡಿದು ಅಲೆದಾಡುತ್ತಿದ್ದಾರೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿಗಾಗಿಯೇ ಬಿಡುಗಡೆಯಾದ ಅನುದಾನ ಬಳಕೆಯಾಗದೇ ಇರುವುದು, ಜಿಲ್ಲೆಯ ಅಧಿಕಾರಿ ವರ್ಗದ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.15ನೇ ಹಣಕಾಸು ಆಯೋಗದ ಪ್ರಕಾರ ಜಿಲ್ಲೆಯ 9 ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಘನತ್ಯಾಜ್ಯ ವಿಲೇವಾರಿ, ನೀರಿನ ಸಂಪರ್ಕ ಕಲ್ಪಿಸಲು 2024- 25ನೇ ಸಾಲಿನ ಅನಿರ್ಬಂಧಿತ ಅನುದಾನದ ಅಡಿಯಲ್ಲಿ ₹8.44 ಕೋಟಿ ಮತ್ತು ನಿರ್ಬಂಧಿತ ಅನುದಾನ ಅಡಿಯಲ್ಲಿ ₹10.26 ಕೋಟಿ ಅನುದಾನ ಮಂಜೂರಾಗಿತ್ತು. ಮೊದಲ ಕಂತಿನಲ್ಲಿ ಅನಿರ್ಬಂಧಿತ ಅನುದಾನದ ₹8.44 ಕೋಟಿ ಅನುದಾನದಲ್ಲಿ ₹4.08 ಕೋಟಿ ಮತ್ತು ನಿರ್ಬಂಧಿತ ಅನುದಾನ ₹10.26 ಕೋಟಿ ಅನುದಾನದಲ್ಲಿ ₹6.01 ಕೋಟಿ ಬಿಡುಗಡೆ ಆದ ಹಿನ್ನೆಲೆ ನಗರಸಭೆ, ಪುರಸಬೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಸಿವಿಲ್ ಕಾಮಗಾರಿಗಳನ್ನು ಆರಂಭಿಸಲಾಗಿತ್ತು.2ನೇ ಕಂತು ಏಕಿಲ್ಲ?: ಮೊದಲ ಕಂತಿನಲ್ಲಿ ಬಿಡುಗಡೆಯಾದ ನಿರ್ಬಂಧಿತ ಅನುದಾನ ಅಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 48 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ 42 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. ಬಿಡುಗಡೆಯಾದ ₹4.08 ಕೋಟಿಯಲ್ಲಿ ₹2 ಕೋಟಿ ಮಾತ್ರ ಖರ್ಚಾಗಿದೆ. ಅದೇ ರೀತಿ ಅನಿರ್ಬಂಧಿತ ಅನುದಾನದ ಅಡಿಯಲ್ಲಿ 40 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ 28 ಕಾಮಗಾರಿಗಳು ರ್ಪೂಣಗೊಂಡಿವೆ. ಬಿಡುಗಡೆಯಾದ ₹6.01 ಕೋಟಿ ಅನುದಾನದ ಅಡಿಯಲ್ಲಿ ₹3.80 ಕೋಟಿ ಮಾತ್ರ ಖರ್ಚಾಗಿದೆ. ಒಟ್ಟಾರೆ ಬಿಡುಗಡೆಯಾದ ಮೊದಲ ಕಂತಿನಲ್ಲಿ ಇನ್ನೂ ₹14.35 ಕೋಟಿ ಅನುದಾನದಲ್ಲಿ ಉಳಿಕೆಯಾದ ಕಾರಣ 2025-26ನೇ ಸಾಲಿನಲ್ಲಿ ಅನುದಾನ ಬಿಡುಗಡೆ ಆಗಿಲ್ಲ.
ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳು ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಲು ವಿಫಲವಾಗಿದೆ. ಕೆಲವು ಕಾಮಗಾರಿಗಳಿಗೆ ಇನ್ನೂ ಟೆಂಡರ್ ಪ್ರಕ್ರಿಯೆ ಕೂಡ ಆರಂಭ ಆಗಿಲ್ಲ. ಗದಗ ನಗರಸಭೆಗೆ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ₹3.42 ಕೋಟಿ ಮಂಜೂರಾತಿ ಸಿಕ್ಕಿತ್ತು. ಅದರಲ್ಲಿ ₹1.49 ಕೋಟಿ ಬಿಡುಗಡೆ ಆಗಿತ್ತು. ಈ ಅನುದಾನವನ್ನು ನಗರಸಭೆ ಸಂರ್ಪೂಣವಾಗಿ ಬಳಸಿಕೊಂಡಿದೆ. ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಗಜೇಂದ್ರಗಡ ಪುರಸಭೆಗೆ ₹83 ಲಕ್ಷ ಮಂಜೂರಾತಿ ಸಿಕ್ಕಿತ್ತು. ಅದರಲ್ಲಿ ₹41 ಲಕ್ಷ ಬಿಡುಗಡೆ ಆಗಿತ್ತು. ಈ ಅನುದಾನವನ್ನು ಗಜೇಂದ್ರಗಡ ಪುರಸಭೆ ಸಂರ್ಪೂಣವಾಗಿ ಬಳಸಿಕೊಂಡಿದೆ. ಆದರೆ ಇನ್ನುಳಿದ ಸ್ಥಳೀಯ ಸಂಸ್ಥೆಗಳು ಮಂಜೂರಾತಿಗೆ ಸಿಕ್ಕ ಸಂಪೂರ್ಣ ಅನುದಾನ ಬಳಸಿಕೊಳ್ಳಲು ವಿಫಲವಾಗಿದೆ.ಬಿಡುಗಡೆಗೆ ತೊಡಕು: ಸ್ಥಳೀಯ ಸಂಸ್ಥೆಗಳು 15ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಹಣವನ್ನು ಸಮರ್ಪಕವಾಗಿ ಬಳಸಿಕೊಳ್ಳದ ಹಿನ್ನೆಲೆ ಎರಡನೇ ಕಂತು ಬಿಡುಗಡೆಗೆ ತೊಡಕಾಗಿ ಪರಿಣಮಿಸಿದೆ. ಜಿಲ್ಲೆಯ ಎಲ್ಲ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯ ಮೂಲ ಸೌಕರ್ಯ ಮತ್ತು ರಸ್ತೆ, ಚರಂಡಿ ನಿರ್ಮಾಣಕ್ಕೆ ಬಿಡುಗಡೆ ಆಗಿದ್ದ ಅನುದಾನವನ್ನು ಸ್ಥಳೀಯ ಸಂಸ್ಥೆಗಳು ಸಮರ್ಪಕವಾಗಿ ಬಳಸಿಕೊಳ್ಳದ ಕಾರಣ 2ನೇ ಕಂತು ಬಿಡುಗಡೆ ಆಗಿಲ್ಲ. ಇದು ಜಿಲ್ಲೆಯ ಜನತೆಗೆ ಅಧಿಕಾರಿಗಳು ಮಾಡುತ್ತಿರುವ ದ್ರೋಹವಾಗಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ತಿಳಿಸಿದರು.