ಬಿ. ಶೇಖರ್ ಗೋಪಿನಾಥಂ
ಕನ್ನಡಪ್ರಭ ವಾರ್ತೆ ಮೈಸೂರುನಾಡಹಬ್ಬ ದಸರಾ ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ ಗಜಪಡೆಯು ಶುಕ್ರವಾರ ಮೈಸೂರು ಅರಮನೆ ಆವರಣದ ಆನೆ ಬಿಡಾರದಲ್ಲಿ ಸಂಪೂರ್ಣ ವಿಶ್ರಾಂತಿ ಪಡೆಯುತ್ತಿದ್ದವು.
ವಿಜಯದಶಮಿ ಮೆರವಣಿಗೆಯಲ್ಲಿ ತಮಗೆ ವಹಿಸಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ದಸರಾ ಗಜಪಡೆಯು ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದವು.ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಯು ಜಂಬೂಸವಾರಿಯಲ್ಲಿ ಲಕ್ಷಾಂತರ ಮಂದಿ ಜನರ ನಡುವೆ ಯಾವುದೇ ರೀತಿಯ ಅಳುಕಿಲ್ಲದೇ ಸಾಗುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು.
ಸತತ 6ನೇ ಬಾರಿ ಅಂಬಾರಿ ಹೊತ್ತ ಅಭಿಮನ್ಯು ಆನೆಯನ್ನು ನೋಡಲು ಬಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸಪಟ್ಟರು. ಮಾವುತರು ಮತ್ತು ಕಾವಾಡಿಗಳು ಸಹ ಜನ ಆನೆಗಳ ಹತ್ತಿರ ಬರದಂತೆ ಎಚ್ಚರಿಕೆ ನೀಡುತ್ತಿದ್ದರು. ಹಲವರು ಮಾವುತರು, ಕಾವಾಡಿಗಳು, ಅರಣ್ಯ ಇಲಾಖೆಯ ಸಿಬ್ಬಂದಿ ಬಳಿಗೆ ತೆರಳಿ ಫೋಟೋ ತೆಗೆದುಕೊಳ್ಳಲು ಅವಕಾಶ ಕೇಳುತ್ತಿದ್ದು ಸಾಮಾನ್ಯವಾಗಿತ್ತು.ಅಭಿಮನ್ಯುಗೆ ವಸಂತ ಮುತ್ತು
ಜಂಬೂಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಸತತ 6ನೇ ಬಾರಿಗೆ ಹೊತ್ತು ಸಾಗಿದ್ದ ಅಭಿಮನ್ಯು ಆನೆಗೆ ಅದರ ಮಾವುತ ವಸಂತ ಅಕ್ಕರೆ ಮುತ್ತು ನೀಡಿ ಮುದ್ದಾಡಿದರು. ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ. ದೂರ ಮೆರವಣಿಯಲ್ಲಿ ಸಾಗಿ ತುಂಬಾ ದಣಿದಿದ್ದ ಅಭಿಮನ್ಯುಗೆ ಮಾವುತ ವಸಂತ ತಬ್ಬಿಕೊಂಡು ಮುತ್ತಿಕ್ಕಿದ್ದರು.ಇದಕ್ಕೂ ಮುನ್ನ ಅಭಿಮನ್ಯು ಆನೆಯು ಸೊಪ್ಪು ಮೇಯುತ್ತಾ ವಿಶ್ರಾಂತಿ ಪಡೆಯುತ್ತಿತ್ತು. ನಂತರ ಅದರ ಕಾವಾಡಿ ರಾಜು ಅವರು ನೀರಿನ ತೊಟ್ಟಿಯಲ್ಲಿ ಸ್ನಾನ ಮಾಡಿಸಿದರು.
ನೌಫತ್ ಆನೆಯಾಗಿ ಸಾಗಿದ ಗೋಪಿ, ಸಾಲಾನೆಗಳಾಗಿ ಸಾಗಿದ ಪ್ರಶಾಂತ, ಶ್ರೀಕಂಠ, ಮಹೇಂದ್ರ, ಸುಗ್ರೀವ ಆನೆಗಳಿಗೆ ಅದರ ಮಾವುತರು, ಕಾವಾಡಿಗಳು ನೀರಿನ ತೊಟ್ಟಿಯಲ್ಲಿ ಸ್ನಾನ ಮಾಡಿಸಿ ಆರೈಕೆ ಮಾಡುತ್ತಿದ್ದರು. ಇನ್ನೂ ಬಿಡಾರದಲ್ಲಿ ಉಳಿದಿದ್ದ ಭೀಮಾ, ಲಕ್ಷ್ಮಿ, ರೂಪಾ, ಏಕಲವ್ಯ ಮೇವು ಮೇಯುತ್ತಾ ರಿಲ್ಯಾಕ್ಸ್ ಆಗಿದ್ದವು. ಅವುಗಳ ಮುಂದೆ ಮಾವುತರು, ಕಾವಾಡಿಗಳು, ಅವರ ಮಕ್ಕಳು ವಿಶ್ರಾಂತಿ ಪಡೆಯುತ್ತಿದ್ದರು. ಇನ್ನೂ ಮಾವುತರು, ಕಾವಾಡಿಗಳ ಕುಟುಂಬವರು ಮತ್ತೆ ಕಾಡಿಗೆ ಹೋಗಲು ಅಗತ್ಯ ಸಿದ್ಧತೆಯಲ್ಲಿ ತೊಡಗಿದ್ದರು,ಎಲ್ಲಾ ಆನೆಗಳು ಭಾಗಿ
ಈ ಬಾರಿ ದಸರೆಗಾಗಿ ಕಾಡಿನಿಂದ ನಾಡಿಗೆ 14 ಆನೆಗಳನ್ನು ತರಲಾಗಿತ್ತು. ಎಲ್ಲಾ ಆನೆಗಳು ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಆನೆಗೆ ಚಿನ್ನದ ಅಂಬಾರಿ ಹೊರಿಸಲಾಯಿತು. ಇದರ ಅಕ್ಕಪಕ್ಕದಲ್ಲಿ ಕಾವೇರಿ ಮತ್ತು ರೂಪಾ ಕುಮ್ಕಿ ಆನೆಗಳು ಸಾಗಿದವು. ನಿಶಾನೆ ಆನೆಯಾಗಿ ಧನಂಜಯ, ನೌಫತ್ ಆನೆಯಾಗಿ ಗೋಪಿ ಸಾಗಿದವು. ಸಾಲಾನೆಗಳಾಗಿ ಮಹೇಂದ್ರ, ಶ್ರೀಕಂಠ, ಲಕ್ಷ್ಮಿ, ಪ್ರಶಾಂತ, ಸುಗ್ರೀವ, ಹೇಮಾವತಿ, ಕಂಜನ್, ಭೀಮ ಮತ್ತು ಏಕಲವ್ಯ ಆನೆಗಳು ಸಾಗಿದವು.
ಇದೇ ಮೊದಲ ಬಾರಿಗೆ ದಸರೆ ಆಗಮಿಸಿದ್ದ ಶ್ರೀಕಂಠ, ರೂಪಾ ಮತ್ತು ಹೇಮಾವತಿ ಆನೆಗಳು ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದವು.ನಾಳೆ ಗಜಪಡೆ ವಾಪಸ್ ಕಾಡಿಗೆ
ದಸರಾ ಜಂಬೂಸವಾರಿಯನ್ನು ಯಶಸ್ವಿಯಾಗಿ ಮುಗಿಸಿರುವ ಆನೆಗಳು ಅ.5 ರಂದು ನಾಡಿನಿಂದ ಕಾಡಿಗೆ ಲಾರಿಗಳಲ್ಲಿ ವಾಪಸ್ ಆಗಲಿವೆ. ಆನೆಗಳೊಂದಿಗೆ ಮಾವುತರು ಮತ್ತು ಕಾವಾಡಿಗಳು ಸಹ ತಮ್ಮ ಕುಟುಂಬ ಸಮೇತ ತಮ್ಮ ಸ್ವಸ್ಥಾನಕ್ಕೆ ತೆರಳಲು ಸಜ್ಜಾಗಿದ್ದಾರೆ.-----
-- ಬಾಕ್ಸ್--ಮುಂದಿನ ವರ್ಷವೂ ಅಭಿಮನ್ಯುಗೆ ಅಂಬಾರಿ
ಮುಂದಿನ ವರ್ಷವೂ ಅಭಿಮನ್ಯುವೇ ಅಂಬಾರಿ ಹೊತ್ತು ಸಾಗುತ್ತಾನೆ. ಆ ನಂತರದ ವರ್ಷಗಳಲ್ಲಿ ಅಂಬಾರಿ ಹೊತ್ತು ಸಾಗಲು 3- 4 ಆನೆಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಭೀಮ, ಮಹೇಂದ್ರ, ಏಕಲವ್ಯ, ಧನಂಜಯ, ಪ್ರಶಾಂತ ಸೇರಿದಂತೆ ಇತರೆ ಆನೆಗಳು ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅಂದಿನ ಸಂದರ್ಭಕ್ಕೆ ತಕ್ಕಂತೆ, ಆನೆಗಳ ಆರೋಗ್ಯವನ್ನು ನೋಡಿಕೊಂಡು ಅಂಬಾರಿ ಆನೆಯನ್ನು ಆಯ್ಕೆ ಮಾಡಲಾಗುತ್ತದೆ ಎಂದು ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ ತಿಳಿಸಿದರು.----
ಕೋಟ್...ಇದೇ ಮೊದಲ ಬಾರಿ ಮೈಸೂರಿಗೆ ಆಗಮಿಸಿದ್ದ 3 ಹೊಸ ಆನೆಗಳ ಜೊತೆಗೆ ಎಲ್ಲಾ 14 ಆನೆಗಳು ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿದೆ. ಪ್ರತಿ ಬಾರಿ ಕೆಲ ಆನೆಗಳನ್ನು ಅಂತಿಮ ಕ್ಷಣದಲ್ಲಿ ಮೆರವಣಿಗೆಯಿಂದ ಹೊರಗಿಡಲಾಗುತ್ತಿತ್ತು. ಅಂತಿಮವಾಗಿ 9 ಅಥವಾ 11 ಆನೆಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದವು. ಆದರೆ, ಈ ಬಾರಿ ಮೈಸೂರಿಗೆ ಬಂದಿದ್ದ ಎಲ್ಲಾ 14 ಆನೆಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಸಂತಸ ತಂದಿದೆ.
- ಡಾ.ಐ.ಬಿ. ಪ್ರಭುಗೌಡ, ಡಿಸಿಎಫ್