ಶೂನ್ಯ ಬಡ್ಡಿಯಲ್ಲಿ 18 ಲಕ್ಷ ರೈತರಿಗೆ₹15,841 ಕೋಟಿ ವಿತರಣೆ: ದಿನೇಶ್‌

KannadaprabhaNewsNetwork | Published : Jan 21, 2024 1:30 AM

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆ ಆದ ಮೇಲೆ ರೈತರಿಗೆ ₹15,841 ಕೋಟಿ ಸಾಲ ವಿತರಿಸಲಾಗಿದೆ. ಇದು ಕಳೆದ ಸಾಲಿಗಿಂತಲೂ ಹೆಚ್ಚಿನ ಹಣ ಎಂದು ಎಂಎಲ್‌ಸಿ ದಿನೇಶ್‌ ಗೂಳಿಗೌಡ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ 19.97 ಲಕ್ಷ ರೈತರಿಗೆ ಶೂನ್ಯ ಬಡ್ಡಿದರಲ್ಲಿ ₹15,841.48 ಕೋಟಿ ಸಾಲ ವಿತರಿಸಿದ್ದು, ಕಳೆದ ಅವಧಿಗಿಂತ ಈ ಬಾರಿ ₹776.48 ಕೋಟಿ ಹೆಚ್ಚುವರಿ ಸಾಲ ವಿತರಿಸಲಾಗಿದೆ. ಆ ಮೂಲಕ ಕಾಂಗ್ರೆಸ್‌ ಸರ್ಕಾರ ರೈತರ ಪರವಾದ ಸರ್ಕಾರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಹೇಳಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ 21 ಡಿಸಿಸಿ ಬ್ಯಾಂಕ್‌ ಹಾಗೂ 6,040 ಕೃಷಿ ಪತ್ತಿನ ಸಹಕಾರ ಸಂಘಗಳಿಂದ ₹24,600 ಕೋಟಿ ಬೆಳೆ ಸಾಲ ನೀಡುವ ಗುರಿ ಹೊಂದಲಾಗಿತ್ತು. ಅದರಲ್ಲಿ ಜನವರಿವರೆಗೆ 19.97 ಲಕ್ಷ ರೈತರಿಗೆ ₹15,841.48 ಕೋಟಿ ಸಾಲ ನೀಡಲಾಗಿದೆ. ಕಳೆದ ಅವಧಿಗಿಂತ ಹೆಚ್ಚುವರಿಯಾಗಿ ₹776.48 ಕೋಟಿ ಸಾಲ ನೀಡಲಾಗಿದೆ. ಪ್ರಸಕ್ತ ಸಾಲಿನ ಉಳಿದ ಗುರಿಯನ್ನು ಶೀಘ್ರದಲ್ಲಿ ಮುಟ್ಟಲಾಗುವುದು. ಅದಕ್ಕೆ ಬೇಕಾದ ಎಲ್ಲ ಕ್ರಮವನ್ನೂ ಸರ್ಕಾರ ಕೈಗೊಳ್ಳುತ್ತಿದೆ ಎಂದಿದ್ದಾರೆ.

ಸದ್ಯ ನೀಡಲಾಗಿರುವ ಸಾಲದ ಪೈಕಿ ಅಲ್ಪಾವಧಿ ಕೃಷಿ ಸಾಲದ ಅಡಿಯಲ್ಲಿ 19.63 ಲಕ್ಷ ರೈತರಿಗೆ ₹15,031.72 ಕೋಟಿ ಸಾಲ ನೀಡಲಾಗಿದೆ. ಮಧ್ಯಮಾವಧಿಯಲ್ಲಿ 15,771 ರೈತರಿಗೆ ₹536.35 ಕೋಟಿ, ಧೀರ್ಘಾವಧಿಯಲ್ಲಿ 17,873 ರೈತರಿಗೆ ₹273.41 ಕೋಟಿ ಸಾಲ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಸದ್ಯ ಭೀಕರ ಬರಗಾಲವಿದೆ. 48 ಸಾವಿರ ಹೆಕ್ಟೇರ್‌ ಕೃಷಿ ಪ್ರದೇಶವು ಬರಗಾಲಕ್ಕೆ ತುತ್ತಾಗಿವೆ. ಎಲ್ಲ ರೈತರಿಗೂ ಬರ ಪರಿಹಾರ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಉತ್ತಮ ಕಾರ್ಯ ಮಾಡಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

Share this article