- ಸ್ಪಂದಿಸದಿದ್ರೆ ಬಿಜೆಪಿ ಕಚೇರಿಗೆ ಮುತ್ತಿಗೆ: ದಿನೇಶ ಶೆಟ್ಟಿ ಎಚ್ಚರಿಕೆ । ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಭಾರತ್ ಅಕ್ಕಿ ಯೋಜನೆ ರದ್ದುಪಡಿಸಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆ ಖಂಡಿಸಿ ಕಾಂಗ್ರೆಸ್ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.ನಗರದ ಪಾಲಿಕೆ ಆವರಣದ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ, ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್ ಇತರರ ನೇತೃತ್ವದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿಭಟಿಸಿ, ಕೇಂದ್ರದ ವಿರುದ್ಧ ಘೋಷಣೆ ಕೂಗಿದರು.
ದಿನೇಶ ಶೆಟ್ಟಿ ಮಾತನಾಡಿ, ಲೋಕಸಭೆ ಚುನಾವಣೆಗೆ 3 ತಿಂಗಳಿರುವಾಗ ಮತ ಸೆಳೆಯಲು ಕೇಂದ್ರ ಸರ್ಕಾರ ಭಾರತ್ ಅಕ್ಕಿ ಯೋಜನೆ ಜಾರಿಗೆ ತಂದಿತ್ತು. ಜನರಿಗೆ ಮರಳು ಮಾಡಲು ಎಲ್ಲೆಂದರಲ್ಲಿ ಭಾರತ್ ಅಕ್ಕಿ ಹಂಚಿದ್ದ ಬಿಜೆಪಿ, ಈಗ ಏಕಾಏಕಿ ಭಾರತ್ ಅಕ್ಕಿ ನೀಡುವುದನ್ನೇ ನಿಲ್ಲಿಸಿದ್ದಾರೆ. ಚುನಾವಣೆಯಲ್ಲಿ ನಿರೀಕ್ಷಿತ ಕ್ಷೇತ್ರದಲ್ಲಿ ಗೆಲುವು ಸಿಗಲಿಲ್ಲ ಎಂಬ ಕಾರಣಕ್ಕೆ ಯಾವುದೇ ಸುಳಿವನ್ನೇ ನೀಡದೆ ದಿಢೀರನೇ ಭಾರತ್ ಅಕ್ಕಿ ಯೋಜನೆ ನಿಲ್ಲಿಸಿದ್ದು ಖಂಡನೀಯ. 15 ದಿನದೊಳಗಾಗಿ ಭಾರತ್ ಅಕ್ಕಿ ವಿತರಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಪುನಃ ಆರಂಭಿಸಬೇಕು. ಇಲ್ಲದಿದ್ದರೆ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.ಕರ್ನಾಟಕ ಸರ್ಕಾರ ಅನ್ನಭಾಗ್ಯದಡಿ ಜನರಿಗೆ ಅಕ್ಕಿ ವಿತರಿಸಲು ಹಣ ಕೊಡುವುದಾಗಿ ಹೇಳಿದರೂ ಅಕ್ಕಿ ಇಲ್ಲವೆಂದು ಕೇಂದ್ರ ಸುಳ್ಳು ಹೇಳಿತ್ತು. ಆದರೆ, ಮತ ಪಡೆಯುವ ಆಸೆಯಿಂದ ಭಾರತ್ ಅಕ್ಕಿ ಯೋಜನೆ ಪ್ರಾರಂಭಿಸಿತ್ತು. ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನವು ಬಿಜೆಪಿಗೆ ಸಿಗಲಿಲ್ಲವೆಂದು ಭಾರತ್ ಅಕ್ಕಿ ನೀಡುವುದನ್ನು ನಿಲ್ಲಿಸಲಾಗಿದೆ. ಕೂಡಲೇ ಯೋಜನೆಯನ್ನು ಪುನಾರಂಭಿಸಬೇಕು ಎಂದು ಒತ್ತಾಯಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೇಳಿದ್ದಂತೆ ಎಲ್ಲಾ 5 ಗ್ಯಾರಂಟಿ ಯೋಜನೆ ಜಾರಿಗೊಳಿಸಿ, ಲಕ್ಷಾಂತರ ಜನರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಾಗಿದೆ. ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿ ಆಗುತ್ತದೆಂದು ಹೇಳುತ್ತಿದ್ದ ಬಿಜೆಪಿ ಈಗ ಎಲ್ಲ ಯೋಜನೆ ನಿಲ್ಲಲಿವೆ ಎಂದು ಅಪಪ್ರಚಾರದಲ್ಲಿ ತೊಡಗಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗುವುದಿಲ್ಲ ಎಂದು ದಿನೇಶ ಶೆಟ್ಟಿ ಸ್ಪಷ್ಟಪಡಿಸಿದರು.ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಮಾಜಿ ಮೇಯರ್ ಅನಿತಾಬಾಯಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ, ಯುವರಾಜ, ಕೆ.ಜಿ.ಶಿವಕುಮಾರ, ಅಯೂಬ್ ಪೈಲ್ವಾನ್, ಬಿ.ಎಚ್. ಚೈತನ್ಯಕುಮಾರ ಮೇಸ್ತ್ರಿ, ಎಚ್.ಜೆ. ಮೈನುದ್ದೀನ್, ರಾಕೇಶ್, ಬಿ.ಎಚ್. ಉದಯಕುಮಾರ, ಎಚ್.ಜಯಣ್ಣ, ಡೋಲಿ ಚಂದ್ರು, ಶುಭಮಂಗಳ, ಸುನೀತಾ ಭೀಮಪ್ಪ, ಕಾವ್ಯಾ, ಲಿಯಾಖತ್ ಅಲಿ, ಮಹದೇವಮ್ಮ, ರವಿ ಇತರರು ಇದ್ದರು.
- - -ಕೋಟ್ ಕೇಂದ್ರಕ್ಕೆ ಧೈರ್ಯವಿದ್ದರೆ, ಜನಸಾಮಾನ್ಯರ ಬಗ್ಗೆ ಕಾಳಜಿ ಇದ್ದಲ್ಲಿ ಭಾರತ್ ಅಕ್ಕಿ ಯೋಜನೆ ಜೊತೆಗೆ ರಾಜ್ಯದ ಅನ್ನ ಭಾಗ್ಯ ಯೋಜನೆಗೂ ಅಕ್ಕಿ ನೀಡಬೇಕು. ಜನರನ್ನು ಮರಳು ಮಾಡಲು ವೃತ್ತಗಳು, ರಸ್ತೆಗಳು, ಜನದಟ್ಟಣ ಪ್ರದೇಶಗಳಲ್ಲಿ ಭಾರತ್ ಅಕ್ಕಿ ಪೂರೈಸಿದ್ದ ಬಿಜಪಿಯವರು ಈಗ ಯೋಜನೆ ನಿಲ್ಲಿಸಿದ ಕೇಂದ್ರದ ವಿರುದ್ಧ ಧ್ವನಿ ಎತ್ತಬೇಕು
- ದಿನೇಶ ಕೆ. ಶೆಟ್ಟಿ, ಕಾಂಗ್ರೆಸ್ ಮುಖಂಡ - - --8ಕೆಡಿವಿಜಿ9, 10:
ಕೇಂದ್ರ ಸರ್ಕಾರವು ಭಾರತ್ ಅಕ್ಕಿ ಯೋಜನೆ ರದ್ದುಪಡಿಸಿದ ಕ್ರಮ ವಿರೋಧಿಸಿ ಕಾಂಗ್ರೆಸ್ ವತಿಯಿಂದ ದಾವಣಗೆರೆ ಪಾಲಿಕೆ ಆವರಣದ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.