ಕನ್ನಡಪ್ರಭ ವಾರ್ತೆ ಮಂಡ್ಯ/ಶ್ರೀರಂಗಪಟ್ಟಣ
ಕಾವೇರಿ ಉಗಮ ಸ್ಥಾನದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಕೇವಲ ಐದು ದಿನಗಳಲ್ಲಿ ೧೫ ಟಿಎಂಸಿ ನೀರು ಹರಿದುಬಂದಿದೆ. ಅಣೆಕಟ್ಟು ಬಹುತೇಕ ಭರ್ತಿಯ ಹಂತ ತಲುಪಿರುವುದು ರೈತ ಸಮುದಾಯದಲ್ಲಿ ಸಂತಸ ಮೂಡಿಸಿದೆ.ಅಣೆಕಟ್ಟೆಯ ಗರಿಷ್ಠ ಮಟ್ಟ ೧೨೪.೮೦ ಅಡಿಗಳಾಗಿದ್ದು, ಹಾಲಿ ಜಲಾಶಯದ ನೀರಿನ ಮಟ್ಟ ೧೨೦ ಅಡಿ ತಲುಪಿದೆ. ಭರ್ತಿಗೆ ಕೇವಲ ೪.೮೦ ಅಡಿ ಬಾಕಿ ಇದೆ. ಜಲಾಶಯಕ್ಕೆ ೫೧,೩೭೪ ಕ್ಯುಸೆಕ್ ನೀರು ಹರಿದುಬರುತ್ತಿದ್ದು, ಭಾನುವಾರ ಸಂಜೆಯ ವೇಳೆಗೆ ಅಣೆಕಟ್ಟು ಭರ್ತಿಯಾಗಲಿದೆ. ಅಣೆಕಟ್ಟು ಸುರಕ್ಷತೆ ದೃಷ್ಟಿಯಿಂದ ಜಲಾಶಯದಿಂದ ೧೫ ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಹದಿನೈದು ದಿನಗಳ ಹಿಂದೆ ಕಳಾಹೀನವಾಗಿದ್ದ ಜಲಾಶಯ ಇದೀಗ ಜಲವೈಭವದಿಂದ ಕಂಗೊಳಿಸುತ್ತಿದೆ.ದೋಣಿವಿಹಾರ ಸ್ಥಗಿತ:
ಜಲಾಶಯದಿಂದ ೧೫ ಸಾವಿರ ಕ್ಯುಸೆಕ್ ನೀರನ್ನು ಹೊರಬಿಡುತ್ತಿರುವುದರಿಂದ ಶ್ರೀರಂಗಪಟ್ಟಣ ತಾಲೂಕು ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ಬಂದ್ ಮಾಡಲಾಗಿದೆ. ನದಿಯಲ್ಲಿ ನೀರಿನ ರಭಸ ಹೆಚ್ಚಿರುವುದರಿಂದ ಮುಂದಿನ ಆದೇಶದವರೆಗೆ ಬಂದ್ ಮಾಡಿದ್ದು, ಪ್ರವಾಸಿಗರ ವೀಕ್ಷಣೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಣೆಕಟ್ಟೆಯಿಂದ ನೀರು ಸ್ಥಗಿತಗೊಳಿಸಿದ ನಂತರವಷ್ಟೇ ದೋಣಿವಿಹಾರಕ್ಕೆ ಅವಕಾಶ ನೀಡಲಾಗುವುದು ಎಂದು ಮೈಸೂರು ವನ್ಯಜೀವಿ ವಿಭಾಗದ ಪ್ರಕಟಣೆ ತಿಳಿಸಿದೆ.ಕೆಆರ್‌ಎಸ್‌ನಲ್ಲಿ ಜಿಲ್ಲಾಧಿಕಾರಿ ಪರಿಶೀಲನೆ:
ಕೆಆರ್‌ಎಸ್ ಜಲಾಶಯದಿಂದ ನದಿಗೆ ನೀರು ಬಿಡುಗಡೆಯಾದಾಗ ನೆರೆ ಪರಿಸ್ಥಿತಿಯಿಂದ ಹಾನಿಯಾಗುವ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬೆಳಗೊಳ, ಪಶ್ಚಿಮ ವಾಹಿನಿ, ಬಲಮುರಿ, ಕಾರೇಕುರ, ಎಡಮುರಿ, ಎಣ್ಣೆಹೊಳೆ ಕೊಪ್ಪಲು ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಅಧಿಕಾರಿಗಳು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದರು. ನದಿ ಪಾತ್ರದ ಸ್ಥಳಗಳಿಗೆ ಸಾರ್ವಜನಿಕರು ತೆರಳದಂತೆ ಎಚ್ಚರಿಕೆಯ ಸೂಚನಾ ಫಲಕ ಅಳವಡಿಸಿರುವುದನ್ನು ವೀಕ್ಷಿಸಿದರು. ಕೃಷ್ಣರಾಜಸಾಗರ ಜಲಾಶಯಕ್ಕೆ ತೆರಳಿ ಹತ್ತು ಗೇಟ್‌ಗಳ ಮೂಲಕ ೧೫ ಸಾವಿರ ಕ್ಯುಸೆಕ್ ನೀರನ್ನು ಹೊರಬಿಟ್ಟಿರುವುದನ್ನು ವೀಕ್ಷಿಸಿ ಜಲಾಶಯದ ಒಳಹರಿವು ಮತ್ತು ಹೊರಹರಿವಿನ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಅಣೆಕಟ್ಟೆಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದರಿಂದ ಯಾವುದೇ ಕ್ಷಣದಲ್ಲಾದರೂ ಹೊರಹರಿವಿನ ಪ್ರಮಾಣ ಹೆಚ್ಚಳ ಸಾಧ್ಯತೆ ಇದೆ ಹಾಗಾಗಿ ಕೆಆರ್‌ಎಸ್ ಅಣೆಕಟ್ಟೆ ಸೇರಿದಂತೆ ನೆರೆ ಆತಂಕ ಸ್ಥಳಗಳಿಗೆ ಭೇಟಿ ನೀಡಿದರು. ನಂತರ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿ ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತದಿಂದ ಸಕಲ ತಯಾರಿ ನಡೆಸುವಂತೆ ಸೂಚನೆ ನೀಡಿದರು.ಹಾನಿಯಾಗುವ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳ ಭೇಟಿ:
ಕೆಆರ್‌ಎಸ್‌ನಿಂದ ೧೫ ಸಾವಿರ ಕ್ಯುಸೆಕ್ ನೀರನ್ನು ಬಿಟ್ಟಿರುವುದರಿಂದ ನೆರೆ ಪರಿಸ್ಥಿತಿಯಿಂದ ಹಾನಿಯಾಗುವ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕರ್ಜುನ ಬಾಲದಂಡಿ, ಅಪರ ಪೊಲೀಸ್ ಅಧೀಕ್ಷಕ ಸಿ.ಇ.ತಿಮ್ಮಯ್ಯ, ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಜಯಂತ್, ಎಇಇ ಕಿಶೋರ್, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ, ಪಶ್ಚಿಮ ವಾಹಿನಿ, ಬಲಮುರಿ, ಎಡಮುರಿ, ಕಾರೇಕುರ, ಎಣ್ಣೆಹೊಳೆ ಕೊಪ್ಪಲು ಗ್ರಾಮಗಳಿಗೆ ಭೇಟಿ ನೀಡಿ ಅಧಿಕಾರಿಗಳು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಪರಿಶೀಲಿಸಿದರು. ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳದ ಬಳಿಯಿರುವ ಬಲಮುರಿ ಮತ್ತು ಎಡಮುರಿಯಲ್ಲಿ ಹೆಚ್ಚು ನೀರು ಹರಿಯುತ್ತಿರುವುದರಿಂದ ಪ್ರವಾಸಿಗರು ತೆರಳದಂತೆ ಬ್ಯಾರಿಕೇಡ್ ಮತ್ತು ಸೂಚನಾ ಫಲಕಗಳನ್ನು ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಅವರು ಹಾಕಿಸಿದರು. ಅಲ್ಲದೆ, ಪಶ್ಚಿಮವಾಹಿನಿಗೆ ಆಗಮಿಸಿ ಸಾರ್ವಜನಿಕರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಿದರು.
ಆ.೮ರಂದು ಸಿಎಂ ಬಾಗಿನ ಸಂಭವ:ನಂತರ ಜಿಲ್ಲಾಧಿಕಾರಿ ಡಾ. ಕುಮಾರ ಮಾತನಾಡಿ, ಮುಂದಿನ ೫ ರಿಂದ ೭ ದಿನಗಳಲ್ಲಿ ಹೆಚ್ಚು ಮಳೆಯಾಗುವ ಸಂಭವವಿದ್ದು, ನಾಳೆಯೊಳಗೆ ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗಲಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ವಿಚಾರವನ್ನು ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದ್ದು, ಸರ್ಕಾರದ ಮಟ್ಟದಲ್ಲಿ ದಿನಾಂಕ ನಿಗದಿಪಡಿಸಿ ಆ.೮ರಂದು ಬಾಗಿನ ಬಿಡಬಹುದು ಎಂದು ಅವರು ತಿಳಿಸಿದರು.
ಕಳೆದ ೧೦ ದಿನಗಳಿಂದ ಕೆಆರ್‌ಎಸ್‌ಗೆ ಒಳಹರಿವು ಹೆಚ್ಚಾಗಿದೆ. ೩೦ ಸಾವಿರದಿಂದ ೫೨ ಸಾವಿರ ಕ್ಯೂಸೆಕ್ ನೀರು ಬರುತ್ತಿದೆ. ಶನಿವಾರ ಅಣೆಕಟ್ಟೆ ೧೨೦ ಅಡಿ ದಾಟಿದ್ದು, ೧೨೪ ಅಡಿ ದಾಟಿದ ನಂತರ ಹೆಚ್ಚು ನೀರನ್ನು ಬಿಟ್ಟರೆ ನದಿ ಪಾತ್ರದಲ್ಲಿರುವ ಜನ-ಜಾನುವಾರುಗಳನ್ನು ತೆರವು ಮಾಡಲಾಗುತ್ತದೆ. ಅಣೆಕಟ್ಟೆಯಿಂದ ಒಂದು ಲಕ್ಷಕ್ಕೂ ಹೆಚ್ಚು ನೀರನ್ನು ಬಿಟ್ಟರೆ ಕೆಲವು ಗ್ರಾಮಗಳು ಮತ್ತು ಕೆಲ ಕೃಷಿ ಪ್ರದೇಶಗಳಿಗೆ ಹಾನಿಯಾಗಲಿದೆ. ಒಟ್ಟಾರೆ ೯೨ ಹಳ್ಳಿಗಳಿಗೆ ನೆರೆ ಪರಿಸ್ಥಿತಿ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ಗ್ರಾ.ಪಂ ಸೇರಿದಂತೆ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಟಾಸ್ಕ್‌ಫೋರ್ಸ್ ರಚಿಸಲಾಗಿದೆ ಎಂದು ಹೇಳಿದರು.