ಬೆಂಗಳೂರು: 17 ಕಿ.ಮೀ. ರಸ್ತೆ ವೈಟ್‌ ಟಾಪಿಂಗ್‌ಗೆ ಚಾಲನೆ

KannadaprabhaNewsNetwork | Updated : Jul 16 2024, 05:47 AM IST

ಸಾರಾಂಶ

16.62 ಕಿ.ಮೀ. ಉದ್ದದ 18 ರಸ್ತೆಗಳನ್ನು ವೈಟ್‌ ಟಾಪಿಂಗ್‌ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೋಮವಾರ ಚಾಲನೆ ನೀಡಿದರು.

 ಬೆಂಗಳೂರು :  ನಗರದ ರಸ್ತೆ ಗುಂಡಿ ಸಮಸ್ಯೆ ಹಾಗೂ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 16.62 ಕಿ.ಮೀ. ಉದ್ದದ 18 ರಸ್ತೆಗಳನ್ನು ವೈಟ್‌ ಟಾಪಿಂಗ್‌ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೋಮವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿ ಬೀಳುವುದನ್ನು ತಪ್ಪಿಸಿ ಶಾಶ್ವತ ಪರಿಹಾರ ನೀಡುವ ಸಲುವಾಗಿ ವೈಟ್‌ ಟಾಪಿಂಗ್‌ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟು 157 ಕಿ.ಮೀ. ರಸ್ತೆಗಳನ್ನು ₹1,800 ಕೋಟಿ ವೆಚ್ಚದಲ್ಲಿ ವೈಟ್‌ ಟಾಪಿಂಗ್‌ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಅದರ ಭಾಗವಾಗಿ ಈಗ 16.62 ಕಿ.ಮೀ. ಉದ್ದದ 18 ರಸ್ತೆಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಚಾಲನೆ ನೀಡಲಾಗಿದೆ. ಈ ಕಾಮಗಾರಿಗೆ ₹207 ಕೋಟಿ ವ್ಯಯಿಸಲಾಗುತ್ತಿದೆ ಎಂದು ಹೇಳಿದರು.

ಬ್ರ್ಯಾಂಡ್‌ ಬೆಂಗಳೂರು-ಸುಗಮ ಸಂಚಾರ ಬೆಂಗಳೂರು ಪರಿಕಲ್ಪನೆ ಅಡಿಯಲ್ಲಿ ಚಾಮರಾಜಪೇಟೆ, ಗಾಂಧಿನಗರ, ಮಲ್ಲೇಶ್ವರ, ಮಹಾಲಕ್ಷ್ಮೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಗುಂಡಿ ಸಮಸ್ಯೆ ಉದ್ಭವಿಸಬಾರದು ಎಂಬ ಕಾರಣಕ್ಕಾಗಿ ವೈಟ್‌ ಟಾಪಿಂಗ್‌ ಕಾಮಗಾರಿ ಮಾಡಲಾಗುತ್ತಿದ್ದು, ಮುಂದಿನ 25 ವರ್ಷಗಳವರೆಗೆ ರಸ್ತೆಯಲ್ಲಿ ಯಾವುದೇ ಸಮಸ್ಯೆ ಉದ್ಭವವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ವೈಟ್‌ ಟಾಪಿಂಗ್‌ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಲು ನಿತ್ಯ ಮೂರ್ನಾಲ್ಕು ವಾರ್ಡ್‌ಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಹಾಗೆಯೇ, ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಲು 200 ಕಿಮೀನಷ್ಟು ಹೊಸ ರಸ್ತೆಗಳ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಸಚಿವರಾದ ಜಮೀರ್ ಅಹಮದ್ ಖಾನ್‌, ದಿನೇಶ್‌ ಗುಂಡೂರಾವ್‌, ಶಾಸಕರಾದ ಡಾ. ಸಿ.ಎನ್‌. ಅಶ್ವತ್ಥನಾರಾಯಣ್‌, ಕೆ. ಗೋಪಾಲಯ್ಯ, ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್‌, ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಇತರರಿದ್ದರು.

ಯಾವೆಲ್ಲ ರಸ್ತೆಗಳಲ್ಲಿ ಕಾಮಗಾರಿ:

ಚಾಮರಾಜಪೇಟೆ: ಪಂಪ ಮಹಾಕವಿ ರಸ್ತೆ, ಬುಲ್‌ ಟೆಂಪಲ್‌ ರಸ್ತೆ, ಚಾಮರಾಜಪೇಟೆ 2, 3, 4, 5, 7ನೇ ಮುಖ್ಯ ರಸ್ತೆಗಳು, ಸುಲ್ತಾನ್‌ ರಸ್ತೆ

ಗಾಂಧಿನಗರ: ಲೂಪ್‌ ರಸ್ತೆ, ಲಿಂಕ್‌ ರಸ್ತೆ, ಪ್ಲಾಟ್‌ಫಾರ್ಮ್‌ ರಸ್ತೆ, ಸುಬೇದಾರ ಛತ್ರ ರಸ್ತೆ

ಮಲ್ಲೇಶ್ವರ: ಮಲ್ಲೇಶ್ವರ 8ನೇ ಮುಖ್ಯರಸ್ತೆ(2 ಕಾಮಗಾರಿ), ಜೀವರಾಜ ಆಳ್ವರಸ್ತೆ

ಮಹಾಲಕ್ಷ್ಮೀಪುರ: ರಾಜಾಜಿನಗರ 10ನೇ ಅಡ್ಡರಸ್ತೆ, ಡಾ। ರಾಜ್‌ಕುಮಾರ್‌ ಮುಖ್ಯರಸ್ತೆ, ಮಹಾಲಕ್ಷ್ಮೀಪುರ ಮುಖ್ಯರಸ್ತೆ

18 ರಸ್ತೆಗಳು, 16.62 ಕಿಮೀ, ₹207 ಕೋಟಿ ವೆಚ್ಚ

ವೈಟ್‌ಟಾಪಿಂಗ್‌ ಕಾಮಗಾರಿ ವಿವರ

*ಒಎಫ್‌ಸಿ ಕೇಬಲ್‌ಗಳಿಗಾಗಿ ಪಾದಚಾರಿ ಮಾರ್ಗದಲ್ಲಿ ಡಕ್ಟ್‌ಗಳ ಅಳವಡಿಕೆ

*ವೈಟ್‌ ಟಾಪಿಂಗ್‌ ರಸ್ತೆ ನಿರ್ಮಾಣ

*ಪಾದಚಾರಿ ಮಾರ್ಗ ಮೇಲ್ದರ್ಜೆಗೆ

*ನೂತನ ವಿದ್ಯುತ್‌ ದೀಪಗಳ ಅಳವಡಿಕೆ

*ರಸ್ತೆಯ ಎರಡೂ ಬದಿಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಕೊಳವೆಗಳ ನಿರ್ಮಾಣ

*ಪಾದಚಾರಿ ಮಾರ್ಗದಲ್ಲಿ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆಗಾಗಿ ಪ್ರತ್ಯೇಕ ಕೊಳವೆಗಳ ಅಳವಡಿಕೆ

Share this article