ಈಶ್ವರ ಶೆಟ್ಟರ
1996ರಲ್ಲಿ ನಡೆದ 11ನೇ ಲೋಕಸಭೆ ಚುನಾವಣೆ ರಾಜ್ಯ ರಾಜಕಾರಣದ ಚಿತ್ರಣವನ್ನೇ ಬದಲಿಸಿತು. ಜೊತೆಗೆ ಕರ್ನಾಟಕದಿಂದ ಒಬ್ಬ ನಾಯಕ ಪ್ರಧಾನಿ ಪಟ್ಟ ಏರುವಂತೆ ಮಾಡಿತು. 1994ರಲ್ಲಿ ಜನತಾ ಪರಿವಾರ ಒಗ್ಗೂಡಿ ಸರ್ಕಾರ ರಚಿಸಿದ್ದವು. ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿಗಳಾಗಿದ್ದರು. ಈ ಸರ್ಕಾರ ರಚನೆಯಾದ ಕೆಲವೆ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಿತು. ಇದರಲ್ಲಿ ರಾಜ್ಯದಿಂದ 16 ಜನ ಜನತಾ ದಳದಿಂದ ಆಯ್ಕೆಯಾದರು. ಇದು ದೇವೇಗೌಡರು ಪ್ರಧಾನಿ ಪಟ್ಟಕ್ಕೇರಲು ಕಾರಣಗಳಲ್ಲಿ ಒಂದಾಗಿತ್ತು.
ಅಂದು ನಡೆದ ಚುನಾವಣೆಯಲ್ಲಿ ಅರಣ್ಯ ಸಚಿವರಾಗಿದ್ದ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಮತಕ್ಷೇತ್ರದ ಶಾಸಕ ಎಚ್.ವೈ. ಮೇಟಿ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಕೇಂದ್ರದ ಸಚಿವರಾಗಿದ್ದ ಸಿದ್ದು ನ್ಯಾಮಗೌಡರನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಭದ್ರಕೋಟೆ ಛಿದ್ರ ಮಾಡಿದ್ದರು.ಸ್ವಾತಂತ್ರ್ಯ ನಂತರದ ಎಲ್ಲ 10 ಲೋಕಸಭಾ ಚುನಾವಣೆಗಳಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ನಿರಾಯಾಸವಾಗಿ ಗೆಲ್ಲುತ್ತ ಬಂದಿತ್ತು. ಆದರೆ, ಕೈಪಡೆಗೆ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿದ್ದು ಜನತಾದಳ ಪಕ್ಷ. ಬಾಗಲಕೋಟೆ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದರು ಹುಲ್ಲಪ್ಪ ಮೇಟಿ.
ಸಚಿವ ಸ್ಥಾನಕ್ಕೆ ರಾಜೀನಾಮೆ:ಅಂದು ಪ್ರಭಾವಿ ಅರಣ್ಯ ಖಾತೆ ಹೊಂದಿದ್ದ ಹುಲ್ಲಪ್ಪ ಮೇಟಿ ಅವರನ್ನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಬಾಗಲಕೋಟೆ ಲೋಕಸಭೆಗೆ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದಾಗ ಒಲ್ಲದ ಮನಸ್ಸು ಮೇಟಿಯವರದ್ದಾಗಿತ್ತು. ಕಾರಣ ರಾಜ್ಯ ರಾಜಕಾರಣದಲ್ಲಿ ಸಮಾಧಾನವಿತ್ತು. ಲೋಕಸಭೆಯಲ್ಲಿ ಭಾಷಾ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ ಸ್ಪರ್ಧೆಗೆ ಹಿಂದೇಟು ಹಾಕಿದಾಗ ಅಂದಿನ ಎಲ್ಲ ನಾಯಕರು ಮನವೊಲಿಸಿ ಮೇಟಿ ಅವರನ್ನು ಸ್ಪರ್ಧೆ ಮಾಡಲು ಹಚ್ಚಿದ್ದರು.
ರಾಜ್ಯ ಜನತಾದಳದ ನಾಯಕರ ನಿರೀಕ್ಷೆ ಹುಸಿಯಾಯಿತು. ಪ್ರಬಲ ಸ್ಪರ್ಧೆ ನೀಡಿ ಕಾಂಗ್ರೆಸ್‌ನ ಸಿದ್ದು ನ್ಯಾಮಗೌಡರನ್ನು ಸೋಲಿಸುವ ಮೂಲಕ ಬಾಗಲಕೋಟೆ ಲೋಕಸಭೆ ಸ್ಥಾನ ಪಡೆಯುವಲ್ಲಿ ಹುಲ್ಲಪ್ಪ ಮೇಟಿ ಯಶಸ್ವಿಯಾಗಿದ್ದು ಈಗ ಇತಿಹಾಸ.
1996ರ ಲೋಕಸಭೆ ಚುನಾವಣೆ ಬಾಗಲಕೋಟೆಯ ಮಟ್ಟಿಗೆ ಕೇವಲ ಕಾಂಗ್ರೆಸ್ ಸೋಲಿಗೆ ಕಾರಣವಾಗಲಿಲ್ಲ. ಬಿಜೆಪಿ ಕೂಡ ಭದ್ರ ನೆಲೆಯೂರಲು ಕಾರಣವಾಯಿತು. ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಈ ಲೋಕಸಭೆಗೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಷಯದಲ್ಲಿ ಚಾಣಾಕ್ಷ ನಡೆ ಅನುಸರಿತು. ಬಿವಿವಿ ಸಂಘದ ಕಾರ್ಯಧ್ಯಕ್ಷರಾಗಿದ್ದ, ಇಂದಿನ ಬಾಗಲಕೋಟೆಯ ಮಾಜಿ ಶಾಸಕರು ಆಗಿರುವ ವೀರಣ್ಣ ಚರಂತಿಮಠ ಅವರನ್ನು ಅಂದು ಲೋಕಸಭೆಗೆ ನಿಲ್ಲಿಸಲಾಯಿತು. ಇದರ ಪರಿಣಾಮ ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ತಳಮಟ್ಟದಲ್ಲಿ ಗುರುತಿಸಲು ಕಾರಣವಾಯಿತು.
ಜನತಾದಳ ಗೆಲವು:
---------
ನಾನು ಲಿಂಗಾಯತರ ವಿರೋಧಿಯಲ್ಲ
ಅಂದಿನ ಮುಖ್ಯಮಂತ್ರಿ ದೇವೇಗೌಡರು ಈ ಚುನಾವಣೆಯನ್ನು ಬಹಳ ಗಂಭಿರವಾಗಿ ಪರಿಣಿಸಿದ್ದರು. ಬಾಗಲಕೋಟೆಯ ವಲ್ಲಭ್‌ಭಾಯಿ ಚೌಖದಲ್ಲಿ ನಡೆದ ಬಹಿರಂಗ ಪ್ರಚಾರದಲ್ಲಿ ಮಾತನಾಡುವ ಸಂದರ್ಭದಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದರು. ಪ್ರಮುಖವಾಗಿ ನಾನು ಲಿಂಗಾಯತರ ವಿರೋಧಿಯಲ್ಲ, ನನ್ನನ್ನು ಲಿಂಗಾಯತ ವಿರೋಧಿಯೆಂದು ಕೆಲವರು ಸದಾಕಾಲ ಬಿಂಬಿಸುತ್ತಾರೆ. ಆದರೆ, ನಾನು ಲಿಂಗಾಯತ ವಿರೋಧಿಯಾಗಿದ್ದರೆ ಬಾಗಲಕೋಟೆ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಲಿಂಗಾಯತರಾದ ಡಾ.ಎಸ್.ಎಂ.ಜಾಮದಾರ ಅವರನ್ನು ಏಕೆ ಹಾಕುತ್ತಿದ್ದೆ ಎಂದು ಹೇಳಿದ್ದರು. ದೇವೇಗೌಡರ ಈ ಹೇಳಿಕೆ ಆ ಚುನಾವಣೆಯಲ್ಲಿ ಲಿಂಗಾಯತ ಮತ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.