ಮನೆಯಿಂದಲೇ ಮತದಾನಕ್ಕೆ ೨,೫೮೦ ಜನರ ನೋಂದಣಿ

KannadaprabhaNewsNetwork | Published : Apr 8, 2024 1:00 AM

ಸಾರಾಂಶ

ಈಗಾಗಲೇ ಗುರುತಿಸಲಾಗಿರುವ ೮೫ ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರ ಮತ್ತು ಎಲ್ಲ ಅಂಗವಿಕಲರ ಮನೆಗಳಿಗೆ ನಿಯೋಜಿತ ಬೂತ್ ಲೆವೆಲ್ ಆಫಿಸರ್(ಬಿಎಲ್‌ಒ) ತೆರಳಿ ೧೨ಡಿ ಫಾರಂ ವಿತರಿಸಿದ್ದಾರೆ.

ಕಾರವಾರ: ಕಳೆದ ೨೦೨೩ರ ವಿಧಾಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗದಿಂದ ೮೦ ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ೮೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮನೆಯಿಂದಲೇ ಮತ ಚಲಾಯಿಸಲು ಅವಕಾಶವಿದ್ದು, ಉತ್ತರ ಕನ್ನಡ ಕ್ಷೇತ್ರದಲ್ಲಿ ೨,೫೮೦ ಜನರು ನೋಂದಣಿ ಮಾಡಿಕೊಂಡಿದ್ದಾರೆ.

ಮತದಾನದ ದಿನದಂದು ತಮ್ಮ ಅಧಿಕಾರವನ್ನು ಚಲಾಯಿಸುವ ಮತದಾರರು ಮತಗಟ್ಟೆಗೆ ಆಗಮಿಸಲು ಅನುಕೂಲವಾಗುವಂತೆ ಹಾಗೂ ಮತದಾರರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳುವ ಮೂಲಕ ಮತಗಟ್ಟೆಯಲ್ಲಿನ ಸಮಸ್ಯೆಯಿಂದ ಯಾವುದೇ ಮತದಾರರ ಮತದಾನದಿಂದ ಹೊರಗುಳಿಯದಂತೆ ಜಿಲ್ಲಾಡಳಿತದಿಂದ ಎಚ್ಚರಿಕೆ ವಹಿಸಲಾಗುತ್ತದೆ.

ಮನೆಯಿಂದಲೇ ಮತದಾನ ಮಾಡುವ ಸೌಲಭ್ಯ ಪಡೆಯಲು ಅರ್ಹರಿರುವ ೮೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಿಂದ ಮತದಾನ ಮಾಡಲು ತಮ್ಮ ಒಪ್ಪಿಗೆ ನೀಡುವಂತೆ ಈಗಾಗಲೇ ವಿತರಿಸಿರುವ ೧೨ಡಿ ನಮೂನೆಯ ೭,೮೩೫ ಅರ್ಜಿಗಳಿಗೆ ೨,೫೮೦ ಹಿರಿಯ ನಾಗರಿಕರು ಮಾತ್ರ ತಮ್ಮ ಒಪ್ಪಿಗೆ ಪತ್ರವನ್ನು ನೀಡಿದ್ದು, ೧೫,೫೮೩ ಅಂಗವಿಕಲರಲ್ಲಿ ೧,೭೬೫ ಜನರು ಮಾತ್ರ ತಮ್ಮ ಒಪ್ಪಿಗೆ ನೀಡಿದ್ದಾರೆ.

ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ೧೨ಡಿ ಫಾರಂ ಪಡೆದಿರುವ ೮೫ ವರ್ಷ ಮೇಲ್ಪಟ್ಟ ೧,೧೧೬ ಹಿರಿಯ ನಾಗರಿಕರಲ್ಲಿ ೨೯೬, ಕಿತ್ತೂರಿನಲ್ಲಿ ೩೩೨ ಜನರಲ್ಲಿ ೨೪೪, ಭಟ್ಕಳ ಕ್ಷೇತ್ರದಲ್ಲಿ ೧,೧೧೯ ಜನರಲ್ಲಿ ೩೩೮, ಹಳಿಯಾಳದಲ್ಲಿ ೬೮೮ ಹಿರಿಯ ನಾಗರಿಕರಲ್ಲಿ ೩೦, ಕಾರವಾರ ೧೧೫೯ ಜನರಲ್ಲಿ ೭೨೩, ಕುಮಟಾದ ೧೦೦೭ ರಲ್ಲಿ ೨೮೫, ಶಿರಸಿ ೧,೩೪೨ ರಲ್ಲಿ ೫೫೪ ಮತ್ತು ಯಲ್ಲಾಪುರ ವಿಧಾಸಭಾ ಕ್ಷೇತ್ರದಲ್ಲಿ ೧,೦೭೨ ಜನರಲ್ಲಿ ೧೧೦ ಹಿರಿಯ ನಾಗರಿಕರು ಮಾತ್ರ ಮನೆಯಿಂದ ಮತದಾನ ಮಾಡಲು ಒಪ್ಪಿಗೆ ನೀಡಿದ್ದಾರೆ.

ಅಂಗವಿಕಲ ಮತದಾರರಿಗೆ ಸಂಬಂಧಿಸಿದಂತೆ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ೧೨ಡಿ ಫಾರಂ ಪಡೆದಿರುವ ೨,೨೫೧ ಅಂಗವಿಕಲ ಮತದಾರರಲ್ಲಿ ೩೦೦, ಕಿತ್ತೂರಿನ ೫೬೬ ಜನರಲ್ಲಿ ೨೧೬, ಭಟ್ಕಳ ೨,೭೭೦ ರಲ್ಲಿ ೨೭೦, ಹಳಿಯಾಳ ೧,೭೦೫ ರಲ್ಲಿ ೩೨, ಕಾರವಾರ ೨,೪೯೯ ಅಂಗವಿಕಲರಲ್ಲಿ ೪೮೦, ಕುಮಟಾ ೨,೭೫೦ರಲ್ಲಿ ೧೭೫, ಶಿರಸಿ ೨೦೪೭ರಲ್ಲಿ ೨೩೦ ಮತ್ತು ಯಲ್ಲಾಪುರ ವಿಧಾಸಭಾ ಕ್ಷೇತ್ರದಲ್ಲಿ ೨,೦೮೪ ಜನರಲ್ಲಿ ೬೨ ಜನ ಮಾತ್ರ ಮನೆಯಿಂದ ಮತದಾನ ಮಾಡಲು ಒಪ್ಪಿಗೆ ನೀಡಿದ್ದಾರೆ.

ಈಗಾಗಲೇ ಗುರುತಿಸಲಾಗಿರುವ ೮೫ ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರ ಮತ್ತು ಎಲ್ಲ ಅಂಗವಿಕಲರ ಮನೆಗಳಿಗೆ ನಿಯೋಜಿತ ಬೂತ್ ಲೆವೆಲ್ ಆಫಿಸರ್(ಬಿಎಲ್‌ಒ) ತೆರಳಿ ೧೨ಡಿ ಫಾರಂ ವಿತರಿಸಿದ್ದು, ಮನೆಗಳಿಗೆ ಭೇಟಿ ನೀಡಿದಾಗ ಮನೆಗಳಲ್ಲಿ ಯಾರೂ ಇಲ್ಲದಿದಲ್ಲಿ ಮರುದಿನ ಮತ್ತೆ ಮನೆಗಳಿಗೆ ಭೇಟಿ ನೀಡಿ ಫಾರಂ ವಿತರಿಸಿದ್ದಾರೆ. ಅವರಿಂದ ಒಪ್ಪಿಗೆ ಅಥವಾ ನಿರಾಕರಣೆ ಪತ್ರಗಳನ್ನು ಸ್ವೀಕರಿಸುತ್ತಿದ್ದಾರೆ. ಯಾವುದೇ ಅರ್ಹ ಅಂಗವಿಕಲರು ಮತ್ತು ಹಿರಿಯ ನಾಗರಿಕರು ಈ ಸೌಲಭ್ಯ ಪಡೆಯುವಲ್ಲಿ ವಂಚಿತರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಅಗತ್ಯ ನೆರವು: ಎಲ್ಲ ಮತದಾರರು ಒಟ್ಟಾಗಿ ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಅಚರಿಸಬೇಕಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಹುತೇಕ ಹಿರಿಯ ನಾಗರಿಕರು ಮತ್ತು ಅಂಗವಿಕಲರು ತಮಗೆ ಚುನಾವಣಾ ಆಯೋಗ ಮನೆಯಿಂದಲೇ ಮತದಾನ ಮಾಡಲು ನೀಡಿರುವ ಸೌಲಭ್ಯದ ಬದಲು ಮತಗಟ್ಟೆಗೆ ಬಂದು ಮತ ಚಲಾಯಿಸಲು ಹೆಚ್ಚಿನ ಉತ್ಸಾಹ ತೋರಿದ್ದು, ಇದು ಇತರೆ ಎಲ್ಲ ಸಾಮಾನ್ಯ ಮತದಾರರಿಗೂ ಉತ್ತಮ ಸಂದೇಶ ನೀಡುವ ಜತೆಗೆ ಪ್ರೇರಣೆಯಾಗಿದೆ. ಅಂಗವಿಕಲರು ಮತ್ತು ಹಿರಿಯ ನಾಗರಿಕರು ಮತದಾನ ಕೇಂದ್ರಗಳಿಗೆ ಬಂದು ಮತ ಚಲಾಯಿಸಲು ಜಿಲ್ಲಾಡಳಿದ ಮೂಲಕ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.ಮತಗಟ್ಟೆಗೆ ಬರಲು ಹೆಚ್ಚಿನ ಅಸಕ್ತಿ

ಪ್ರಸಕ್ತ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ೮೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಲು ಅವರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಮನೆಯಿಂದಲೇ ಮತ ಚಲಾಯಿಸಲು ವಿಶೇಷ ಸೌಲಭ್ಯ ಒದಗಿಸಿದೆ. ಆದರೆ ಜಿಲ್ಲೆಯ ಬಹುತೇಕ ಹಿರಿಯ ನಾಗರಿಕರು ಮತ್ತು ಅಂಗವಿಕಲರು ಚುನಾವಣಾ ಆಯೋಗ ಒದಗಿಸಿರುವ ಮನೆಯಿಂದಲೇ ಮತದಾನ ಮಾಡುವ ಈ ಸೌಲಭ್ಯವನ್ನು ಬಳಸಿಕೊಳ್ಳದೇ, ಮತದಾನದ ದಿನದಂದು ಮತಗಟ್ಟೆಗೆ ಖುದ್ದು ತೆರಳಿ ತಮ್ಮ ಮತದಾನದ ಹಕ್ಕು ಚಲಾಯಿಸಲು ಉತ್ಸಾಹ ತೋರಿದ್ದಾರೆ.

Share this article