ಮನೆಯಲ್ಲಿ 2 ಸಿಲಿಂಡರ್‌ ಸ್ಫೋಟ: ಅಗ್ನಿಶಾಮಕ ಸಿಬ್ಬಂದಿ ಪಾರು

KannadaprabhaNewsNetwork | Published : Feb 29, 2024 2:01 AM

ಸಾರಾಂಶ

ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್‌ ಸ್ಫೋಟಗೊಂಡು ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿ ನದಿಸುವ ವೇಳೆ ಮತ್ತೊಂದು ಸಿಲಿಂಡರ್‌ ಸಹ ಸ್ಫೋಟಗೊಂಡ ಘಟನೆ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ನಡೆದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್‌ ಸ್ಫೋಟಗೊಂಡು ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿ ನದಿಸುವ ವೇಳೆ ಮತ್ತೊಂದು ಸಿಲಿಂಡರ್‌ ಸಹ ಸ್ಫೋಟಗೊಂಡ ಘಟನೆ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ನಡೆದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಗೋಪಾಲಗೌಡ ಬಡಾವಣೆ ಕೃಷ್ಣ ಮಠದ ಬಳಿಯ ಮನೆಯೊಂದರಲ್ಲಿ ಈ ದುರಂತ ಸಂಭವಿಸಿದೆ. ಬ್ಯಾಂಕ್ ಉದ್ಯೋಗಿ ಕೃಷ್ಣಪ್ಪ ಎಂಬವರ ಮನೆಯಲ್ಲಿ ಸಿಲಿಂಡರ್‌ಗಳ ಸ್ಫೋಟ ಸಂಭವಿಸಿದೆ. ಅವಘಡ ಸಂಭವಿಸಿದ ವೇಳೆ ಮನೆಯಲ್ಲಿ ಯಾರು ಇರಲಿಲ್ಲ. ಮನೆ ಒಳಗಡೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸುತ್ತಮುತ್ತಲಿನ ನಿವಾಸಿಗಳು, ಅಗ್ನಿಶಾಮಕ ದಳಕ್ಕೆ ಕೂಡಲೇ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಗೆ ಮುಂದಾಗಿದ್ದರು. ಇದೇ ವೇಳೆಯೇ, ಮನೆಯಲ್ಲಿದ್ದ ಮತ್ತೊಂದು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಪವಾಡ ಸದೃಶ್ಯ ರೀತಿಯಲ್ಲಿ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ಸಿಲಿಂಡರ್ ಸ್ಫೋಟದಿಂದ ಮನೆ ಗೋಡೆಯೊಂದು ಛಿದ್ರಛಿದ್ರವಾಗಿದೆ. ಜೊತೆಗೆ ವಸ್ತುಗಳೆಲ್ಲ ಸುಟ್ಟು ಕರಕಲಾಗಿವೆ. ಮನೆಯೊಳಗಿದ್ದ ಮತ್ತೆರೆಡು ಸಿಲಿಂಡರ್‌ಗಳನ್ನು ಹೊರತರುವಲ್ಲಿ ಸಫಲರಾಗಿದ್ದಾರೆ. ಇದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

ಸಿಲಿಂಡರ್‌ನಲ್ಲಿನ ಗ್ಯಾಸ್ ಸೋರಿಕೆಯಿಂದ ಈ ಸ್ಫೋಟ ಸಂಭವಿಸಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಘಟನೆಗೆ ಸ್ಪಷ್ಟ ಕಾರಣವೇನು, ಹಾನಿಗೀಡಾದ ವಸ್ತುಗಳ ಮೌಲ್ಯವೆಷ್ಟು ಎಂಬುವುದು ಸ್ಪಷ್ಟವಾಗಬೇಕಾಗಿದೆ.

ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಮಹಾಲಿಂಗಪ್ಪ, ಪ್ರಾದೇಶಿಕ ಅಧಿಕಾರಿ ರಾಜು, ಸಿಬ್ಬಂದಿ ಸುನೀಲ್, ಲೋಹಿತ್ ಕುಮಾರ್, ಮಂಜುನಾಥ್, ಶಶಿಕುಮಾರ್, ವೆಂಕಟೇಶ್, ನರೇಂದ್ರ ಮೊದಲಾದವರು ಬೆಂಕಿ ನಂದಿಸುವ ಕಾರ್ಯದಲ್ಲಿ ಶ್ರಮಿಸಿದರು.

- - - -28ಎಸ್‌ಎಂಜಿಕೆಪಿ01:

ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಕೃಷ್ಣ ಮಠದ ಬಳಿಯ ಮನೆಯೊಂದರಲ್ಲಿ ಸಿಲಿಂಡರ್‌ ಸ್ಫೋಟದಿಂದ ಅಗ್ನಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.

Share this article