ಗುಡಿಗೆರೆ ಗ್ರಾಮದಲ್ಲಿ 2 ಗಂಡಾನೆಗಳು ಪ್ರತ್ಯಕ್ಷ

KannadaprabhaNewsNetwork | Published : Aug 9, 2024 12:34 AM

ಸಾರಾಂಶ

ಆನೆಗಳನ್ನು ಓಡಿಸಲು ಹುಣಸೂರಿನ ಅರಣ್ಯ ಇಲಾಖೆ ತಂಡವನ್ನು ಕರೆಸಿಕೊಂಡಿರುವ ಮದ್ದೂರು ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಬೇರೆಡೆ ಕದಲದಂತೆ 20 ಕ್ಕೂ ಹೆಚ್ಚು ಮಂದಿ ಸಿಬ್ಬಂದಿಯಿಂದ ಕಾವಲು ಇರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಗುಡಿಗೆರೆ ಗ್ರಾಮಕ್ಕೆ 2 ಗಂಡಾನೆಗಳು ಆಗಮಿಸಿದ್ದು ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟಿವೆ.

ಕಳೆದ ಕೆಲ ದಿನಗಳ ಹಿಂದೆ ಕಾರ್ಕಹಳ್ಳಿಯಲ್ಲಿ ಕಾಣಿಸಿಕೊಂಡಿದ್ದ ಆನೆಗಳನ್ನು ಕಾಡಿನತ್ತ ಓಡಿಸಲು ಕಾರ್ಯಾಚರಣೆ ರೂಪಿಸಿದ್ದರು. ಆದರೆ, ರಾತ್ರಿ ವೇಳೆ ಕಾರ್ಯಚರಣೆ ನಡೆಸಿದ್ದರಿಂದ ದಿಕ್ಕು ತಪ್ಪಿ ಮಂಡ್ಯ ತಾಲೂಕಿನ ತಗ್ಗಹಳ್ಳಿ ಪುರದ ಬಳಿ ಕಾಣಿಸಿಕೊಂಡಿದ್ದವು. ಅಲ್ಲಿಯೂ ಸಹ ಮಂಡ್ಯ ಹಾಗೂ ಮದ್ದೂರು ತಾಲೂಕಿನ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡಿನತ್ತ ಓಡಿಸಲು ಯತ್ನಿಸಿದ್ದರು. ಆದರೆ, ಆನೆಗಳು ತಾವು ಹೋದ ಮಾರ್ಗದಲ್ಲಿ ವಾಪಸ್ಸು ಆಗಮಿಸಿ ಗುಡಿಗೆರೆ ಬಳಿ ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟಿವೆ.

ಆನೆಗಳನ್ನು ಓಡಿಸಲು ಹುಣಸೂರಿನ ಅರಣ್ಯ ಇಲಾಖೆ ತಂಡವನ್ನು ಕರೆಸಿಕೊಂಡಿರುವ ಮದ್ದೂರು ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಬೇರೆಡೆ ಕದಲದಂತೆ 20 ಕ್ಕೂ ಹೆಚ್ಚು ಮಂದಿ ಸಿಬ್ಬಂದಿಯಿಂದ ಕಾವಲು ಇರಿಸಿದ್ದಾರೆ.

ಸಂಜೆ ವೇಳೆ ಕಾರ್ಯಾಚರಣೆ ನಡೆಸಿ ಆನೆಗಳನ್ನು ಕಬ್ಬಾಳು ಅರಣ್ಯ ಪ್ರದೇಶಕ್ಕೆ ಅಟ್ಟಲಾಗುವುದೆಂದು ಮದ್ದೂರು ವಲಯ ಅರಣ್ಯಾಧಿಕಾರಿ ಗವಿಯಪ್ಪ ತಿಳಿದ್ದಾರೆ.

ನಾಳೆ ನಗರ, ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯಮಂಡ್ಯ:

ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಫೀಡರ್‌ಗಳ ನಿರ್ವಹಣೆಯನ್ನು ಆಗಸ್ಟ್ 10 ರಂದು ಹಮ್ಮಿಕೊಂಡಿರುವುದರಿಂದ ಅಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ನಗರ ಪ್ರದೇಶಗಳಾದ ಸುಭಾಷ್‌ನಗರ, ಆಶೋಕ ನಗರ, ವಿ.ವಿ.ರೋಡ್, ಹೊಸಹಳ್ಳಿ, ವಿನಾಯಕ ಬಡಾವಣೆ, ನೂರು ಅಡಿ ರೋಡ್, ನೆಹರು ನಗರ, ಹೊಸಹಳ್ಳಿ, ದ್ವಾರಕನಗರ, ಗಾಂಧಿನಗರ, ಎನ್ ಜಿಒ ಲೇಔಟ್, ಶ್ರೀ ರಾಮ ನಗರ, ಕಾವೇರಿ ನಗರ 1-2 ನೇ ಹಂತ, ಚಂದ್ರ ದರ್ಶನ, ಚಾಮುಂಡೇಶ್ವರಿ ನಗರ, ಅನ್ನಪೂರ್ಣೇಶ್ವರಿ ನಗರ, ಶಂಕರನಗರ, ಇಂಡುವಾಳು, ಕಿರಗಂದೂರು, ಕಲ್ಲಹಳ್ಳಿ. ಕ್ಯಾತುಂಗೆರೆ ಸುತ್ತ ಮುತ್ತಲಿನ ಪ್ರದೇಶಗಳು. ಗ್ರಾಮಾಂತರ ಪ್ರದೇಶಗಳಾದ ಕಾರಸವಾಡಿ, ಮಂಗಲ, ಹನಿಯಂಬಾಡಿ, ಚೀರನಹಳ್ಳಿ, ಹೆಬ್ಬಕವಾಡಿ, ಕೊತ್ತತ್ತಿ, ಮೊತ್ತಹಳ್ಳಿ, ಬೇವಿನಹಳ್ಳಿ, ಹುಲ್ಲುಕೆರೆ, ಎ. ಹುಲಿಕೆರೆ, ಬಿ.ಹುಲಿಕೆರೆ ಮತ್ತು ಐ.ಪಿ ಮಾರ್ಗಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮಂಡ್ಯ ಸೆಸ್ಕ್, ಕಾ ಮತ್ತು ಪಾ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

Share this article