ಅಣ್ಣಿಗೇರಿಗೆ ಹೆಚ್ಚುವರಿಯಾಗಿ 2 ಸಾವಿರ ನಿವೇಶನ

KannadaprabhaNewsNetwork | Published : Dec 16, 2023 2:00 AM

ಸಾರಾಂಶ

ಅಣ್ಣಿಗೇರಿ ಪಟ್ಟಣದ ಬಡ ಜನರ ಬಹುದಿನದ ಕನಸು ಇಂದು ನನಸಾಗಿದೆ. ಯಾರಿಂದ ಈ ಕಾರ್ಯ ಆರಂಭವಾಗಿದೆಯೋ ಅವರಿಂದಲೇ ಈ ಕಾರ್ಯ ಅಂತ್ಯವಾಗುತ್ತಿರುವುದು ನನಗೆ ತುಂಬಾ ಸಂತೋಷದಾಯವಾಗಿದೆ. ಅಧಿಕಾರ ಬಂದ 7 ತಿಂಗಳಲ್ಲೇ ಇಂತಹ ಬಹುದೊಡ್ಡ ಕಾರ್ಯ ಮಾಡಿರುವುದು ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಅಣ್ಣಿಗೇರಿ

ಪಟ್ಟಣದಲ್ಲಿ ಯಾರೂ ಸ್ವಂತ ಸೂರಿಲ್ಲದೇ ಜೀವನ ಸಾಗಿಸಬಾರದು ಎಂಬ ಉದ್ದೇಶವನ್ನಿಟ್ಟುಕೊಂಡು 2015ರಲ್ಲೆ ಸುಮಾರು 18 ಎಕರೆ 26 ಗುಂಟೆ ಭೂಮಿ ಖರೀದಿಸಿ 8 ವರ್ಷಗಳ ನಂತರ ಇಂದು ಸ್ಥಳೀಯ ಪುರಸಭೆ ವ್ಯಾಪ್ತಿಗೆ ಒಳಪಡುವ ಫಲಾನುಭವಿಗಳಿಗೆ ನಿವೇಶನದ ಹಕ್ಕುಪತ್ರ ವಿತರಣೆ ಮಾಡುತ್ತಿರುವ ಜನಸೇವಕ ಹಾಗೂ ಶಾಸಕ ಎನ್.ಎಚ್. ಕೋನರಡ್ಡಿ ಕಾರ್ಯ ಶ್ಲಾಘನೀಯ ಎಂದು ವಸತಿ, ವಕ್ಫ್‌ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ ಅಹ್ಮದ ಖಾನ್ ಹೇಳಿದರು.

ಪಟ್ಟಣದಲ್ಲಿ ವಸತಿ ಹಾಗೂ ನಗರಾಭಿವೃದ್ದಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ರಾಜೀವ ಗಾಂಧಿ ವಸತಿ ನಿಗಮ ಬೆಂಗಳೂರ, ಜಿಲ್ಲಾಡಳಿತ ಧಾರವಾಡ ಹಾಗೂ ಪುರಸಭೆ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು

ಪಟ್ಟಣದ ಬಡ ಜನರ ಬಹುದಿನದ ಕನಸು ಇಂದು ನನಸಾಗಿದೆ. ಯಾರಿಂದ ಈ ಕಾರ್ಯ ಆರಂಭವಾಗಿದೆಯೋ ಅವರಿಂದಲೇ ಈ ಕಾರ್ಯ ಅಂತ್ಯವಾಗುತ್ತಿರುವುದು ನನಗೆ ತುಂಬಾ ಸಂತೋಷದಾಯವಾಗಿದೆ. ಅಧಿಕಾರ ಬಂದ 7 ತಿಂಗಳಲ್ಲೇ ಇಂತಹ ಬಹುದೊಡ್ಡ ಕಾರ್ಯ ಮಾಡಿರುವುದು ರಾಜ್ಯದಲ್ಲಿಯೇ ಮಾದರಿಯಾಗಿದೆ. ಈ ಹಿಂದೆ ಆಡಳಿತ ನಡೆಸಿದ್ದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಒಂದು ಮನೆಯನ್ನು ವಿತರಣೆ ಮಾಡದೇ ಇರುವುದು ದುರದೃಷ್ಟಕರ. ಬಡವರ ಬಗ್ಗೆ ಅಪಾರ ಪ್ರೀತಿ ಹೊಂದಿದ ರಾಜ್ಯದ ಸಿಎಂ ಸಿದ್ಧರಾಮಯ್ಯ ಅವರ ಕಾರ್ಯ ಅವಿಸ್ಮರಣೀಯವಾಗಿದೆ. ನೂತನವಾಗಿ ನಿರ್ಮಾಣಗೊಂಡ ಆಶ್ರಯ ಬಡಾವಣೆಯಲ್ಲಿ ವಾಸಿಸುವ ಎಲ್ಲ ಫಲಾನುಭವಿಗಳಿಗೆ ಸುಸಜ್ಜಿತವಾದ ಮನೆ ನಿರ್ಮಿಸಿ ಕೊಡುವ ಜವಾಬ್ದಾರಿ ನನ್ನ ಮೇಲಿದೆ ಎಂದರು.

ಶೀಘ್ರದಲ್ಲೇ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. 2024ರ ಡಿಸೆಂಬರ್‌ ಅಂತ್ಯದ ವರೆಗೆ

ಪಟ್ಟಣದಲ್ಲಿ ಹೆಚ್ಚುವರಿಯಾಗಿ 2 ಸಾವಿರ ನಿವೇಶನಗಳನ್ನು ಒದಗಿಸಿ ಕೋಡುತ್ತೇನೆ ಎಂದು ಭರವಸೆ ನೀಡಿದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹಕ್ಕುಪತ್ರ ವಿತರಣಾ ಕಾರ್ಯವನ್ನು ನನ್ನ ಸಹೋದರನಂತಿರುವ ಸಚಿವ ಜಮೀರಅಹ್ಮದ ಖಾನ್ ಅವರಿಂದ ವಿತರಣೆ ಮಾಡುತ್ತಿರುವುದು ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ. ಮೊದಲ ಹಂತದಲ್ಲಿ 297 ಫಲಾನುಭವಿಗಳಿಗೆ ಮಾತ್ರ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ಮುಂದಿನ ಒಂದು ತಿಂಗಳೊಳಗಾಗಿ ಬಾಕಿ ಉಳಿದ ಎಲ್ಲ ಹಕ್ಕು ಪತ್ರಗಳನ್ನು ಇದೇ ವೇದಿಕೆಯಲ್ಲೇ ವಿತರಣೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಪಟ್ಟಣದಲ್ಲಿನ ವಸತಿ ರಹಿತ ಎಲ್ಲ ಬಡ ವರ್ಗದ ಕುಟುಂಬಗಳಿಗೆ ಮನೆ ನೀಡುವುದು ನನ್ನ ಆದ್ಯ

ಕರ್ತವ್ಯವಾಗಿದ್ದರಿಂದ ಹೆಚ್ಚುವರಿಯಾಗಿ 24 ಎಕರೆ ಭೂಮಿ ಖರೀದಿಸಲು ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅರ್ಜಿ ಸಲ್ಲಿಸಿದ ಎಲ್ಲ ಜನರಿಗೂ ವಸತಿ ಸೌಲಭ್ಯ ನೀಡೇ ನೀಡುತ್ತೇನೆ ಎಂದರು.

ಸ್ಥಳೀಯ ದಾಸೋಹ ಮಠದ ಶಿವಕುಮಾರ ಮಹಾಸ್ವಾಮೀಜಿ ಹಾಗೂ ಕಮಲಾಪೂರ ದರ್ಗಾದ ಸಜ್ಜಾದ ಹುಸೇನ ಖಾದ್ರಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ, ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ, ಪುರಸಭೆ ಅಧ್ಯಕ್ಷೆ ಮೆಹಬೂಬಿ ನವಲಗುಂದ, ಉಪಾಧ್ಯಕ್ಷೆ ಜಯಲಕ್ಷ್ಮೀ ಜಕರಡ್ಡಿ, ಪದ್ಮಶ್ರೀ ಪುರಸ್ಕೃತ ಎ.ಐ. ನಡಕಟ್ಟಿನ, ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಪುರಸಭೆ ಸರ್ವ ಸದಸ್ಯರು, ಫಲಾನುಭವಿಗಳು ಉಪಸ್ಥಿತರಿದ್ದರು.

Share this article