ಶಿಕ್ಷಣ ಸಬಲೀಕರಣಕ್ಕೆ ₹20 ಕೋಟಿ ವೆಚ್ಚದ ಯೋಜನೆ

KannadaprabhaNewsNetwork | Published : Jul 7, 2024 1:21 AM

ಸಾರಾಂಶ

ನಗರದ ಗುರುಭವನದ ಪಕ್ಕ ನಿರ್ಮಿಸಿರುವ ನೂತನ ಬಿಇಒ ಕಚೇರಿಯನ್ನು ಸಚಿವ ಡಿ.ಸುಧಾಕರ್ ಉದ್ಘಾಟನೆ ಮಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನಲ್ಲಿ ಶಿಕ್ಷಣ ವ್ಯವಸ್ಥೆಯ ಸಬಲೀಕರಣಕ್ಕೆ ವಿವಿಧ ಮೂಲಗಳಿಂದ ಸುಮಾರು ₹20 ಕೋಟಿ ವೆಚ್ಚದಲ್ಲಿ ಅಂಗನವಾಡಿ ಹಾಗೂ ಸರ್ಕಾರಿ ಶಾಲೆಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ತಿಳಿಸಿದರು.

ನಗರದ ಗುರು ಭವನದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಬಿಇಒ ಕಚೇರಿಯ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ದೇಶದ ಭವಿಷ್ಯವು ಶಿಕ್ಷಣದ ಮೇಲೆ ನಿಂತಿದೆ. ನಮ್ಮ ಸರ್ಕಾರ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಸಿಂಹಪಾಲು ನೀಡಿದ್ದು, ಉತ್ತಮ ಶಿಕ್ಷಣ ನಿಡುವ ಮೂಲಕ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಶಿಕ್ಷಕರ ಮತ್ತು ಸರ್ಕಾರದ ಮೇಲಿದೆ ಎಂದರು.

ಶಿಕ್ಷಕರು ಬದ್ಧತೆ ಮತ್ತು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಿದೆ. ಮಕ್ಕಳಿಗೆ ಕಲಿಸುವ ವಿಚಾರದಲ್ಲಿ ಯಾವುದೇ ಉದಾಸೀನ ತೋರಬಾರದು. ಶಿಕ್ಷಣಕ್ಕೆ ಸಹಾಯ ಹಾಗೂ ಸಹಕಾರ ಎಂದಿನಂತೆ ಇರುತ್ತದೆ ಎಂದು ತಿಳಿಸಿದರು.

ಹಿಂದಿನ ಆಡಳಿತ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿದ್ದು, ಸಾಕಷ್ಟು ಶಾಲಾ ಕಾಲೇಜು ಕಟ್ಟಡಗಳು ಹಾಗೂ ಬಿಸಿಯೂಟದ ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಇದೀಗ ಗುರುಭವನದ ಆಧುನೀಕರಣಕ್ಕೆ ಎರಡು ಕೋಟಿ ಅನುದಾನ ನೀಡಲಾಗುವುದು. 7ನೇ ವೇತನ ಆಯೋಗ ಜಾರಿಗೆ ತರಲು ಕಳೆದ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗಿದ್ದು ಮುಖ್ಯಮಂತ್ರಿಗಳು ಸಹ ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.

ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರವು ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭಿಸುತ್ತಿರುವ ಹಿನ್ನೆಲೆ ಹೊಸದಾಗಿ ನಿರ್ಮಿಸುವ ಅಂಗನವಾಡಿ ಕೇಂದ್ರಗಳನ್ನು ಸರ್ಕಾರಿ ಶಾಲಾವರಣದಲ್ಲಿಯೇ ನಿರ್ಮಿಸಲು ಆದ್ಯತೆ ನೀಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ಬಿಇಒ ಸಿ.ಎಂ.ತಿಪ್ಪೇಸ್ವಾಮಿ, ನಗರಸಭೆ ಸದಸ್ಯ ವೈಪಿಡಿ ದಾದಾಪೀರ್, ಉಪನಿರ್ದೇಶಕ ಎಂ.ನಾಸಿರುದ್ದೀನ್, ಚಿತ್ರದುರ್ಗ ಬಿಇಒ ನಾಗಭೂಷಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಶಿವಕುಮಾರ್, ಪ್ರಾ.ಶಾ.ಶಿ.ಸಂ ಅಧ್ಯಕ್ಷೆ ಎಂ.ಸಿ.ನಾಗರತ್ನಮ್ಮ, ವಿ.ಭಾಗ್ಯ, ನಾಗ್ಯಾನಾಯ್ಕ್, ಈ.ತಿಪ್ಪೇರುದ್ರಪ್ಪ, ಸಿ.ಮಹೇಶ್ವರರೆಡ್ಡಿ, ರವೀಂದ್ರನಾಯ್ಕ್, ಸಿ.ಶಿವಾನಂದ, ಶಶಿಧರ್, ಹರೀಶ್ ಮುಂತಾದವರು ಹಾಜರಿದ್ದರು.

ಸಂಸದ ಕಾರಜೋಳರನ್ನು ಕಾಟಾಚಾರಕ್ಕೆ ಆಹ್ವಾನ:

ನಗರದ ನೂತನ ಬಿಇಒ ಕಚೇರಿಯ ಉದ್ಘಾಟನೆಗೆ ಸಂಸದ ಗೋವಿಂದ ಕಾರಜೋಳರನ್ನು ಕಾಟಾಚಾರಕ್ಕೆ ಆಹ್ವಾನಿಸಲಾಗಿದೆ ಎಂದು ಭಾರತೀಯ ಜನತಾ ಪಾರ್ಟಿ ಮತ್ತು ಜಾತ್ಯಾತೀತ ಜನತಾದಳದ ನೇತೃತ್ವದಲ್ಲಿ ನೂತನ ಬಿಇಒ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಮಾಜಿ ಉಪಮುಖ್ಯಮಂತ್ರಿ, ಹಿರಿಯ ದಲಿತ ನಾಯಕರು ಹಾಗೂ ಸಂಸದರು ಆಗಿರುವ ಗೋವಿಂದ ಕಾರಜೋಳರವರಿಗೆ ಪೂರ್ವಭಾವಿಯಾಗಿ ಸಮಾಲೋಚನೆ ನಡೆಸಿ ಸಮಯ ತೆಗೆದುಕೊಳ್ಳದೆ ಕನಿಷ್ಟ ಪಕ್ಷ ಒಂದೆರಡು ದಿನಗಳ ಮುಂಚಿತವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸದೇ ಶನಿವಾರದ ಕಾರ್ಯಕ್ರಮಕ್ಕೆ ಶುಕ್ರವಾರ ಸಂಜೆ ಕರೆ ಮಾಡಿ ಆಹ್ವಾನಿಸಿದ್ದು ಖಂಡನೀಯ ಎಂದು ಪ್ರತಿಭಟಿಸಲಾಯಿತು. ಬಿಜೆಪಿ ಅಧ್ಯಕ್ಷ ವಿಶ್ವನಾಥ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶಂಕರಮೂರ್ತಿ, ಮುಖಂಡರಾದ ಜೆಬಿ ರಾಜು, ಜಲ್ದಪ್ಪ, ಚಿದಾನಂದ, ತಿರುಮಲೇಶ್, ಚಂದ್ರಹಾಸ, ಹರೀಶ್ ಕುಮಾರ್, ನಾಗೇಂದ್ರಪ್ಪ, ಜನಾರ್ಧನ್, ಚಿತ್ತಯ್ಯ ಪಾರ್ಥಯಾದವ್, ರಾಜೇಂದ್ರ ಗೌಡ ಮುಂತಾದವರು ಉಪಸ್ಥಿತರಿದ್ದರು.

ಸಂಸದರ ಆಪ್ತ ಸಹಾಯಕರಿಗೆ ಆಹ್ವಾನ:

ನೀಡಿಕೆಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿಯವರು ಸ್ಪಷ್ಟನೆ ನೀಡಿ ಸದರಿ ಕಾರ್ಯಕ್ರಮದ ಶಿಷ್ಟಾಚಾರದಲ್ಲಿ ಯಾವುದೇ ಲೋಪವಾಗದಂತೆ ಆಹ್ವಾನಿಸಲಾಗಿತ್ತು. ಸಂಸದರ ಆಪ್ತ ಸಹಾಯಕರ ಮೂಲಕ ಕಾರ್ಯಕ್ರಮದ ದಿನಾಂಕವನ್ನು ಗಮನಕ್ಕೆ ತರಲಾಗಿತ್ತು. ಆನಂತರ ನಾನೇ ಖುದ್ದಾಗಿ ಆಹ್ವಾನಿಸಲು ಹೋದಾಗ ಅವರು ಪ್ರವಾಸದಲ್ಲಿ ಇರುವುದರಿಂದ ಅವರ ಆಪ್ತ ಸಹಾಯಕರಿಗೆ ಆಹ್ವಾನ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆದರೆ ಈ ವಿಷಯ ತಿಳಿಯದ ಕೆಲವರು ಸಂಸದರನ್ನು ಆಹ್ವಾನಿಸಿಲ್ಲ ಎಂದು ಪ್ರತಿಭಟನೆ ನಡೆಸಿದ್ದಾರೆ ಎಂದರು.

Share this article