ಸಾಮಾನ್ಯ ಸಭೆಯಲ್ಲಿ ೨೦ ವಿಷಯಗಳಿಗೆ ಒಪ್ಪಿಗೆ

KannadaprabhaNewsNetwork |  
Published : Sep 13, 2025, 02:06 AM IST
ರಬಕವಿ-ಬನಹಟ್ಟಿ ನಗರಸಭೆ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಿತು. ಪೌರಾಯುಕ್ತ ರಮೇಶ ಜಾಧವ, ನಗರಾಧ್ಯಕ್ಷೆ ವಿದ್ಯಾ ದಬಾಡಿ, ಉಪಾಧ್ಯಕ್ಷೆ ದೀಪಾ ಗಾಡಿವಡ್ಡರ ವೇದಿಕೆಯಲ್ಲಿದ್ದರು. | Kannada Prabha

ಸಾರಾಂಶ

ರಬಕವಿ ತರಕಾರಿ ಮಾರುಕಟ್ಟೆ ನ.೧೨ ಮತ್ತು ೧೩ ಕಟ್ಟೆಗಳ ಲೀಲಾವಿಗೆ ಸಂಬಧಿತ ವಿರಕ್ತಮಠದ ಜಾಗೆ ತಕರಾರು ಇರುವ ಕಾರಣ ಉಳಿದ ೨೭ ಕಟ್ಟೆಗಳಿಗೆ ಟೆಂಡರ್ ಆಗಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಇಲ್ಲಿನ ನಗರಸಭೆಯ ಸರ್ವ ಸದಸ್ಯರ ಸಾಮಾನ್ಯ ಸಭೆಯು ಪೌರಾಯುಕ್ತ ರಮೇಶ ಜಾಧವ, ನಗರಾಧ್ಯಕ್ಷೆ ವಿದ್ಯಾ ದಬಾಡಿ, ಉಪಾಧ್ಯಕ್ಷೆ ದೀಪಾ ಗಾಡಿವಡ್ಡರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಮಂಡನೆಯಾದ ಒಟ್ಟು ೨೪ ವಿಷಯಗಳು ಪೈಕಿ ೨೦ ವಿಷಯಗಳಿಗೆ ಸರ್ವಸಮ್ಮತ ಅನುಮೋದನೆ ದೊರಕಿತು.

ರಬಕವಿ ತರಕಾರಿ ಮಾರುಕಟ್ಟೆ ನ.೧೨ ಮತ್ತು ೧೩ ಕಟ್ಟೆಗಳ ಲೀಲಾವಿಗೆ ಸಂಬಧಿತ ವಿರಕ್ತಮಠದ ಜಾಗೆ ತಕರಾರು ಇರುವ ಕಾರಣ ಉಳಿದ ೨೭ ಕಟ್ಟೆಗಳಿಗೆ ಟೆಂಡರ್ ಆಗಿದೆ. ಸದ್ಯ ನಗರ ಭೂಮಾಪಕರು ಸ್ಥಳ ಮಾಪನ ಮಾಡಿ, ಖಚಿತಪಡಿಸಿದ ಬಳಿಕ ನಗರಸಭೆ ಮುಂದಿನ ಕ್ರಮ ಕೈಗೊಳ್ಳುವಂತೆ ಸದಸ್ಯ ಯಲ್ಲಪ್ಪ ಕಟಗಿ ವಿರೋಧದ ನಡುವೆ ಸಂಜಯ ತೆಗ್ಗಿ ಮಂಡಿಸಿದ ವಿಷಯಕ್ಕೆ ಸರ್ವ ಸದಸ್ಯರು ಒಪ್ಪಿಗೆ ನೀಡಿದರು. ಒಂದು ವಾರದಲ್ಲಿ ವಿವಾದ ಬಗೆ ಹರಿಯಿಸಲಾಗುತ್ತದೆಂದು ಪೌರಾಯುಕ್ತರು ತಿಳಿಸಿದರು.

ಅಧ್ಯಕ್ಷರ ಅಪ್ಪಣೆ ಮೇರೆಗೆ ಬಂದ ಓ ಶಾಂತಿ ಸಂಸ್ಥೆಯ ಕಟ್ಟಡಕ್ಕೆ ಜಾಗೆ ನೀಡುವ, ಹೊಸ ಬಸ್‌ನಿಲ್ದಾಣದ ಮುಖ್ಯ ರಸ್ತೆಗೆ ಈಗಾಗಲೇ ಈಶ್ವರ ಸಣಕಾಲ ಹೆಸರಿದ್ದು, ರಾಮಪ್ಪ ಚಿಕ್ಕೋಡಿ ಹೆಸರಿಡಲು, ರಬಕವಿ ಪೋಲೀಸ್ ಔಟ್ ಪೋಸ್ಟ್ ಬಳಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಹೆಸರಿಡಲು, ಸಮುದಾಯ ಆರೋಗ್ಯ ಕೇಂದ್ರ ಮುಖ್ಯಸ್ಥರು ಆಶಾ ಕಾರ್ಯಕರ್ತೆಯರ ನೇಮಕಕ್ಕೆ ಬರೆದ ಪತ್ರಕ್ಕೆ ಅವಕಾಶವಿಲ್ಲವೆಂದು ತಿರಸ್ಕರಿಸಲಾಯಿತು.

ಅಂಗವಿಕಲರಿಗೆ ನೀಡುವ ಸೌಲಭ್ಯಗಳು ಎಲ್ಲ ಫಲಾನುಭವಿಗಳಿಗೆ ತಲುಪಬೇಕೆಂದು ಸದಸ್ಯರಾದ ಗೌರಿ ಮಿಳ್ಳಿ, ಚಿದಾನಂದ ಹೊರಟ್ಟಿ ತಿಳಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷರ ಬದಲಾಗಿ ತಲಾ ಓರ್ವ ಅಧ್ಯಕ್ಷರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲು ಸರ್ಕಾರ ಆದೇಶಿಸಿದ ಕಾರಣ ಸದಸ್ಯರು ಸಭೆ ನಡೆಸಿ ನಾಲ್ಕು ತಂಡಗಳ ಕನಿಷ್ಟ ೬ ಮತ್ತು ಗರಿಷ್ಠ ೧೧ ಸದಸ್ಯರ ಹೆಸರುಗಳನ್ನು ನೀಡಬೇಕೆಂದು ಪೌರಾಯುಕ್ತರು ಸದಸ್ಯರಿಗೆ ಸೂಚಿಸಿದರು.

೨೦೨೩-೨೪ನೇ ಸಾಲಿನ ಲೆಕ್ಕಪರಿಶೋಧನಾ ವರದಿಯ ಆಕ್ಷೇಪಿತ ಕಂಡಿಕೆಗಳಿಗೆ ಒಪ್ಪಿಗೆ ಕೇಳಿದ ಸಂದರ್ಭದಲ್ಲಿ ಸದಸ್ಯ ಯಲ್ಲಪ್ಪ ಕಟಗಿ ಅಧಿಕಾರಿಗಳ ಪ್ರಮಾದಕ್ಕೆ ಕಾರಣವೇನೆಂದು ಪ್ರಶ್ನಿಸಿದರು. ಹೆಚ್ಚುವರಿ ಹಣ ಬಿಡುಗಡೆ ಮಾಡಿದ್ದನ್ನು ಸಮಗ್ರವಾಗಿ ವಿಚಾರಿಸಲು ಮುಂದಿನ ಸಭೆಗೆ ಮಂಡಿಸಲು ಸಲಹೆ ನೀಡಿದರು. ನೀರು ಸರಬರಾಜು ವಿಭಾಗದ ೨ರಿಂದ ೧೦ ಎಚ್‌ಪಿ ಮೋಟಾರಗಳ ದುರಸ್ತಿಗೆ ಆರ್ಥಿಕ, ತಾಂತ್ರಿಕ ಬಿಡ್‌ಗೆ ಸದಸ್ಯ ಬಸವರಾಜ ಗುಡೋಡಗಿ, ಯಲ್ಲಪ್ಪ ಕಟಗಿ ವಿರೋಧಿಸಿದಾಗ ಸರ್ಕಾರಿ ಆದೇಶದನ್ವಯ ಮತ್ತು ಸ್ಥಳೀಯ ಆದ್ಯತಾವಾರು ಕೆಲಸ ಗಮನಿಸಿ ಒಂದೇ ಬಿಡ್ ಇದ್ದಾಗ ಅದನ್ನೇ ಮಾನ್ಯ ಮಾಡಬೇಕಾಗುತ್ತದೆಂದು ಕಿರಿಯ ಅಭಿಯಂತರ ಪ್ರಶಾಂತ ಪಾಟೀಲ, ಪೌರಾಯುಕ್ತ ರಮೇಶ ಜಾಧವ ಹೇಳಿಕೆಗೆ ಸಭೆ ಒಪ್ಪಿತು.

ಇದೇ ವೇಳೆ ಏಪ್ರಿಲ್‌ನಿಂದ ಆಗಸ್ಟ್ ವರೆಗೆ ಜಮಾ- ಖರ್ಚಿನ ಬಾಬತ್ತುಗಳಿಗೆ ಅನುಮೋದನೆ, ಸರ್ಕಾರದಿಂದ ಬಂದ ಸುತ್ತೋಲೆ, ೧೫ನೇ ಹಣಕಾಸು, ಎಸ್‌ಎಫ್‌ಸಿ, ಕ್ಯಾಪಿಟಲ್ ಅಸೆಟ್ಸ್, ಎಸ್‌ಇಪಿ, ಟಿಎಸ್‌ಪಿ, ಎಸ್‌ಎಫ್‌ಸಿ ಕುಡಿಯುವ ನೀರಿನ ಯೋಜನೆಗಳ ಟೆಂಡರ್‌ ಮಂಜೂರಾತಿ, ಪೌರಾಯುಕ್ತರ ಕಚೇರಿ ಕೆಲಸಕ್ಕೆ ವಾಹನ ಟೆಂಡರ್, ರಬಕವಿ ರಿ.ಸ.ನಂ.೬೪ರ ವಾಣಿಜ್ಯ ಏಕ ನಿವೇಶನದ ಉದ್ಯಾನವನ ಹಾಗೂ ವಾಹನ ನಿಲುಗಡೆ ಜಾಗೆ ಮರಳಿ ಮಾಲೀಕರಿಗೆ ಹಸ್ತಾಂತರ, ಸ್ಲಂಬೋರ್ಡ್ ಯೋಜನೆಯಡಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ೧೪೦೦೦ಚ.ಮೀ. ಅತಿಕೃಮಿತ ಜಾಗೆಗೆ ಬೇರೆ ಜಾಗ ಮಂಜೂರು ಸೇರಿದಂತೆ ವಿವಿಧ ವಿಷಯಗಳಿಗೆ ಒಪ್ಪಿಗೆ ನೀಡಲಾಯಿತು.

ಸಭೆಯಲ್ಲಿ ವ್ಯವಸ್ಥಾಪಕ ಸುನೀಲ ಬಬಲೇಶ್ವರ, ಕಂದಾಯ ಅಧಿಕಾರಿ ಬಾಬುರಾವ ಕಮತಗಿ, ಹಿರಿಯ ಆರೋಗ್ಯ ನಿರೀಕ್ಷಕಿ ಶೋಭಾ ಹೊಸಮನಿ, ಸುನೀಲ ಬಾಗೇವಾಡಿ, ಅಭಿಯಂತರ ಪ್ರಶಾಂತ ಪಾಟೀಲ, ಮುಖೇಶ ಬನಹಟ್ಟಿ, ಬಸವರಾಜ ಹೊಸೂರ, ಲೆಕ್ಕಾಧಿಕಾರಿ ಮಹಾವೀರ ದೈಗೊಂಡ ಸೇರಿ ಸಿಬ್ಬಂದಿ ಇದ್ದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ