ತುಂಗಭದ್ರಾ ಜಲಾಶಯದಲ್ಲಿ 20 ಟಿಎಂಸಿ ನೀರು ಸಂಗ್ರಹ

KannadaprabhaNewsNetwork | Published : Jul 9, 2024 12:49 AM

ಸಾರಾಂಶ

ಜಲಾಶಯಕ್ಕೆ ಕಳೆದ ನಾಲ್ಕಾರು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ಬರುತ್ತಿದೆ.

ಹೊಸಪೇಟೆ: ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ಒಳಹರಿವು ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ಡ್ಯಾಂನ ಒಡಲಿನಲ್ಲಿ ಸೋಮವಾರ 20.851 ಟಿಎಂಸಿ ನೀರು ಸಂಗ್ರಹವಾಗಿದೆ.

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಲಕ್ಷಾಂತರ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಸೋಮವಾರ 30,388 ಕ್ಯುಸೆಕ್‌ ನೀರು ಹರಿದು ಬಂದಿದೆ.

ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಕಳೆದ ನಾಲ್ಕಾರು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ಬರುತ್ತಿದೆ. ಶಿವಮೊಗ್ಗ ಜಿಲ್ಲೆಯ ತುಂಗಾ ಜಲಾಶಯ ಈಗಾಗಲೇ ಭರ್ತಿಯಾದ್ದರಿಂದ ಅಲ್ಲಿಂದ ಹೆಚ್ಚುವರಿ ನೀರು ಹರಿದು ಬಂದು ಜಲಾಶಯ ಸೇರುತ್ತಿದೆ. ಹೀಗಾಗಿ ಟಿಬಿ ಡ್ಯಾಂನಲ್ಲಿ ನೀರಿನ ಸಂಗ್ರಹ ಹೆಚ್ಚಳವಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಸೇರಿ ನಾಲ್ಕು ಜಿಲ್ಲೆಗಳ 3.5 ಲಕ್ಷ ಹೆಕ್ಟೇರ್‌ ಪ್ರದೇಶ ಹಾಗೂ ಆಂಧ್ರಪ್ರದೇಶದ ಅನಂತಪುರ, ಕರ್ನೂಲ್, ಕಡಪ, ತೆಲಂಗಾಣದ ಮಹಬೂಬ್ ನಗರ ಜಿಲ್ಲೆಗಳ 2.46 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಗಳಿಗೆ ತುಂಗಭದ್ರಾ ಜಲಾಶಯ ನೀರು ಉಣಿಸಲಿದೆ. ತುಂಗಭದ್ರಾ ಎಡದಂಡೆ ಮೇಲ್ಪಟ್ಟ ಕಾಲುವೆ ಹಾಗೂ ಬಲದಂಡೆ ಮೇಲ್ಪಟ್ಟ ಕಾಲುವೆಗಳ ಮೂಲಕ ಮೂರು ರಾಜ್ಯಗಳಿಗೆ ನೀರು ಹರಿಯಲಿದೆ. ಬತ್ತ, ಬಾಳೆ, ಕಬ್ಬು, ಮೆಕ್ಕೆಜೋಳ, ಹತ್ತಿ ಬೆಳೆಗಳನ್ನು ರೈತರು ಪ್ರಮುಖವಾಗಿ ಬೆಳೆಯುತ್ತಿದ್ದಾರೆ.

ತುಂಗಭದ್ರಾ ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿಯಷ್ಟಿದ್ದು, ಈಗ ಜಲಾಶಯದಲ್ಲಿ 20.851 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ 3.081 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಕಳೆದ 10 ವರ್ಷದ ಸರಾಸರಿ 24.497 ಟಿಎಂಸಿಯಷ್ಟಿದ್ದು, ಜಲಾಶಯದಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿರುವುದರಿಂದ ರೈತರ ಮೊಗದಲ್ಲೂ ಹರ್ಷ ಮೂಡಿದೆ.

Share this article