ಆ.15ಕ್ಕೆ ಲಾಲ್‌ಬಾಗ್‌ನಲ್ಲಿ 216ನೇ ಫಲಪುಷ್ಪ ಪ್ರದರ್ಶನ

KannadaprabhaNewsNetwork | Published : Jul 9, 2024 12:51 AM

ಸಾರಾಂಶ

ರಾಜ್ಯ ತೋಟಗಾರಿಕೆ ಇಲಾಖೆ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಈ ಬಾರಿಯ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌’ ಪರಿಕಲ್ಪನೆಯಲ್ಲಿ 216ನೇ ಫಲಪುಷ್ಪ ಪ್ರದರ್ಶನ ಆಯೋಜಿಸಲು ಸಿದ್ಧತೆ ನಡೆಸಿದೆ.

ಫಲಪುಶ್ಪ ಪ್ರದರ್ಶನ ಪೋಟೋ ಬಳಸಿಸಂಪತ್‌ ತರೀಕೆರೆಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ತೋಟಗಾರಿಕೆ ಇಲಾಖೆ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಈ ಬಾರಿಯ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌’ ಪರಿಕಲ್ಪನೆಯಲ್ಲಿ 216ನೇ ಫಲಪುಷ್ಪ ಪ್ರದರ್ಶನ ಆಯೋಜಿಸಲು ಸಿದ್ಧತೆ ನಡೆಸಿದೆ.

ಜನವರಿಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ‘ಕಾಯಕಯೋಗಿ ಬಸವಣ್ಣ ಮತ್ತು ವಚನ ಸಾಹಿತ್ಯ’ ವಿಷಯಾಧಾರಿತವಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಿ ತೋಟಗಾರಿಕೆ ಇಲಾಖೆ ಯಶಸ್ವಿಯಾಗಿತ್ತು. ಈ ಬೆನ್ನಲ್ಲೇ ಡಾ.ಬಿ.ಆರ್‌.ಅಂಬೇಡ್ಕರ್‌ ಜೀವನ ಸಾಧನೆ ಪರಿಕಲ್ಪನೆಯಲ್ಲಿ 216ನೇ ಫಲಪುಷ್ಪ ಪ್ರದರ್ಶನ ಆಯೋಜಿಸುವ ಮೂಲಕ ಸಂವಿಧಾನ ಶಿಲ್ಪಿಗೆ ಗೌರವ ಸಮರ್ಪಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.

ಈ ಬಾರಿ ಯಾವ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಬೇಕೆಂಬುದರ ಕುರಿತು ಚರ್ಚೆಗಳು ನಡೆಸಲಾಗಿದ್ದು, ಸುಮಾರು 25ಕ್ಕೂ ಹೆಚ್ಚು ವಿಷಯಗಳನ್ನು ಮಂಡನೆ ಮಾಡಲಾಗಿತ್ತು. ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಇಲಾಖೆ ಕಾರ್ಯದರ್ಶಿ, ಶಮ್ಲಾ ಇಕ್ಬಾಲ್‌, ನಿರ್ದೇಶಕ ರಮೇಶ್‌ ಸೇರಿದಂತೆ ಇತರ ಅಧಿಕಾರಿಗಳನ್ನೊಳಗೊಂಡ ಸಮಿತಿಯು ಸಭೆ ನಡೆಸಿ ಅಂತಿಮವಾಗಿ ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ವಿಷಯಾಧಾರಿತವಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸುವ ಬಗ್ಗೆ ತೀರ್ಮಾನಕೈಗೊಂಡಿತು.

50 ತಜ್ಞರ ಸಭೆ:

ಸೋಮವಾರ ಅಂಬೇಡ್ಕರ್‌ ಬಗ್ಗೆ ತಿಳಿದುಕೊಂಡಿರುವ ಸ್ಕಾಲರ್ಸ್‌, ಪರಿಣಿತರು, ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಅಂಬೇಡ್ಕರ್‌ ಅವರ ಬಗ್ಗೆ ಅಧ್ಯಯನ ನಡೆಸಿದವರು ಸೇರಿದಂತೆ ಸುಮಾರು 50 ತಜ್ಞರ ಸಭೆ ನಡೆಸಲಾಗಿದೆ. ಸಭೆಯಲ್ಲಿ ಅಂಬೇಡ್ಕರ್‌ ಅವರ ಹುಟ್ಟು, ಬೆಳವಣಿಗೆ, ಸಂದೇಶ, ಸಾಧನೆಗಳನ್ನು ಸಮಾಜಕ್ಕೆ ಹೇಗೆ ಬಿಂಬಿಸಬಹುದು ಎಂಬುದರ ಕುರಿತು ಸಮಗ್ರವಾಗಿ ಚರ್ಚಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ಕಾರ್ಯದರ್ಶಿ (ಪಾರ್ಕ್ಸ್‌ ಆ್ಯಂಡ್‌ ಗಾರ್ಡನ್ಸ್‌) ಡಾ.ಎಂ.ಜಗದೀಶ್‌ ಅವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಅಂಬೇಡ್ಕರ್‌ ಜೀವನ, ಸಾಧನೆ ಪರಿಕಲ್ಪನೆ:

ತಜ್ಞರು ನೀಡಿರುವ ಸಲಹೆಗಳ ಆಧಾರದಲ್ಲಿ ಪರಿಕಲ್ಪನೆ(ಕಾನ್ಸೆಫ್ಟ್‌) ಮಾಡಲಿದ್ದು ಅಂಬೇಡ್ಕರ್‌ ಅವರ ಪ್ರತಿಮೆಗಳು, ಛಾಯಚಿತ್ರಗಳು, ಪುತ್ಥಳಿಗಳನ್ನು ಫಲಪುಷ್ಪ ಪ್ರದರ್ಶನದಲ್ಲಿ ಬಳಕೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ. ಇನ್ನು ಗಾಜಿನ ಮನೆಯಲ್ಲಿ ಅಂಬೇಡ್ಕರ್‌ ಅವರ ಮನೆತನ, ಹುಟ್ಟು, ಬಾಲ್ಯ, ಶಿಕ್ಷಣ, ರಾಜಕೀಯ, ಸಾಧನೆ, ಸಂವಿಧಾನದ ಮಹತ್ವ, ಸಮಾಜದಲ್ಲಿ ಅಂಬೇಡ್ಕರ್‌ ಅವರು ಎದುರಿಸಿದ ಸ್ಥಿತಿಗತಿ, ವೈವಾಹಿಕ ಜೀವನ, ಸಂದೇಶ ಎಲ್ಲವನ್ನೂ ಪ್ರದರ್ಶಿಸಲು ಅಗತ್ಯ ತಯಾರಿ ನಡೆಸಿಕೊಳ್ಳಲಾಗುತ್ತಿದೆ.

ಈ ಕುರಿತು ಇನ್ನೂ 3 ತಜ್ಞರನ್ನೊಳಗೊಂಡ ಸಭೆಗಳನ್ನು ನಡೆಸುವುದು ಬಾಕಿಯಿದ್ದು, ಡಾ.ಅಂಬೇಡ್ಕರ್‌ ಅವರ ವಿಷಯಾಧಾರಿತ ಫಲಪುಷ್ಪ ಪ್ರದರ್ಶನದ ಕುರಿತು ಸಂಪೂರ್ಣ ಪರಿಕಲ್ಪನೆ ಸಿದ್ಧಗೊಳ್ಳಲಿದೆ. ಗಾಜಿನಮನೆಯಲ್ಲಿ ಅಂಬೇಡ್ಕರ್‌ ಅವರನ್ನು ಸಾರ್ವಜನಿಕರಿಗೆ ಹೇಗೆ ತೋರಿಸಬೇಕು, ಭಾರತ ಸಂವಿಧಾನ (ಪುಸ್ತಕ) ಮಾದರಿ ಸೇರಿದಂತೆ ಇತರೆ ಕಲಾಕೃತಿಗಳನ್ನು ಇಡುವ ಹಾಗೂ ಪುಷ್ಪಗಳಿಂದ ಯಾವ ಯಾವ ಕಲಾಕೃತಿಗಳನ್ನು ರಚಿಸಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಬಹುತೇಕ ಪ್ರತಿಮೆಗಳ ಕೆಳಭಾಗದಲ್ಲಿ ಪುಷ್ಪಗಳಿಂದ ಅಲಂಕರಿಸಲಾಗುವುದು ಎಂದು ಡಾ.ಜಗದೀಶ್‌ ತಿಳಿಸಿದರು. ಈವರೆಗಿನ ದಾಖಲೆ

2022 ಆಗಸ್ಟ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌ ಸ್ಮರಣಾರ್ಥ ನಡೆದಿದ್ದ 212ನೇ ಫಲಪುಷ್ಪ ಪ್ರದರ್ಶನಕ್ಕೆ ಬರೋಬ್ಬರಿ 9.5 ಲಕ್ಷಕ್ಕೂ ಹೆಚ್ಚು ವೀಕ್ಷಕರು ಆಗಮಿಸಿದ್ದು ದಾಖಲೆಯಾಗಿತ್ತು. 2024 ಜನವರಿಯ ಗಣರಾಜ್ಯೋತ್ಸವದ ಪುಷ್ಪ ಪ್ರದರ್ಶನದಲ್ಲಿ ಸಂಗ್ರಹವಾದ ಟಿಕೆಟ್‌ ಮೊತ್ತವೂ ಕೇವಲ 10 ದಿನಗಳಲ್ಲಿ 3.98 ಕೋಟಿ ರು. ಆಗಿದ್ದು ಅದುವರೆಗಿನ ದಾಖಲೆಯನ್ನು ಅಳಿಸಿ ಹಾಕಿತ್ತು. ಹಾಗೆಯೇ ಈ ಬಾರಿಯ ಅಂಬೇಡ್ಕರ್‌ ವಿಷಯಾಧಾರಿತ ಫಲಪುಷ್ಪ ಪ್ರದರ್ಶನವು ಹಿಂದಿನ ಎಲ್ಲ ದಾಖಲೆ ಮುರಿಯುವಂತೆ ರೂಪಿಸಿ, ಸರ್ವರನ್ನೂ ಸೆಳೆಯುವಂತೆ ಮಾಡುವ ಗುರಿಯನ್ನು ತೋಟಗಾರಿಕೆ ಇಲಾಖೆ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article