ಚನ್ನಗಿರಿ ತಾಲೂಕು ಕಾಕನೂರು ವಸತಿ ಶಾಲೆಯಲ್ಲಿ ಘಟನೆ। ವಾರ್ಡನ್, ಸಿಬ್ಬಂದಿ ಅಮಾನತಿಗೆ ಶಾಸಕ ಶಿವಗಂಗಾ ಬಸವರಾಜ ಸೂಚನೆ
ಕನ್ನಡಪ್ರಭ ವಾರ್ತೆ ದಾವಣಗೆರೆಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಮಕ್ಕಳು ಭಾನುವಾರ ರಾತ್ರಿ ಊಟ, ಸೋಮವಾರದ ಬೆಳಿಗ್ಗೆ ತಿಂಡಿ ಸೇವಿಸಿದ ನಂತರ 23 ವಿದ್ಯಾರ್ಥಿನಿಯರು ತೀವ್ರ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಶಾಸಕ ಶಿವಗಂಗಾ ವಿ.ಬಸವರಾಜ ಶಾಲೆಗೆ ಭೇಟಿ ನೀಡಿ, ಅಧಿಕಾರಿಗಳು, ವಾರ್ಡನ್ ಹಾಗೂ ಸಿಬ್ಬಂದಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಚನ್ನಗಿರಿ ತಾಲೂಕು ಕಾಕನೂರು ಗ್ರಾಮದಲ್ಲಿ ನಡೆದಿದೆ.
ಕಿತ್ತೂರು ಚನ್ನಮ್ಮ ವಸತಿ ಶಾಲೆಯ ಮಕ್ಕಳನ್ನು ತಕ್ಷಣವೇ ಸಂತೆಬೆನ್ನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳಿಸಿ, ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ನಂತರ ಶಾಲಾ ಮಕ್ಕಳಿಂದ ಊಟ, ಉಪಹಾರ, ಕುಡಿಯುವ ನೀರು, ಸ್ವಚ್ಛತೆ ಬಗ್ಗೆ ಮಕ್ಕಳಿಂದಲೇ ಮಾಹಿತಿ ಪಡೆದ ಶಾಸಕ ಶಿವಗಂಗಾ ಬಸವರಾಜ ನಂತರ ಶಾಲೆಯ ಆಹಾರ ಧಾನ್ಯ ಸಂಗ್ರಹ ಕೊಠಡಿ, ತರಕಾರಿ, ಬೇಳೆ ಕಾಳು, ಕುಡಿಯುವ ನೀರು, ಅಡುಗೆ ಪಾತ್ರೆ, ಅಡುಗೆ ಮನೆ ಹೀಗೆ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ ಆಹಾರ, ವಸತಿ ಶಾಲೆ ಕುಡಿಯುವ ನೀರಿನ ಮಾದರಿಯ ಪರೀಕ್ಷೆಗೆ ಕಳಿಸಿ. ಮಕ್ಕಳ ಆರೋಗ್ಯ, ಜೀವದ ವಿಚಾರದಲ್ಲಿ ಇಂತಹ ಅಸಡ್ಡೆ ಸಹಿಸಲಾಗದು ಎಂದು ಅಧಿಕಾರಿ, ವಾರ್ಡನ್, ಸಿಬ್ಬಂದಿಗೆ ಶಾಸಕ ಬಸವರಾಜ ಎಚ್ಚರಿಸಿದರು.ವಾರ್ಡನ್ , ಸಿಬ್ಬಂದಿಯ ಅಮಾನತುಗೊಳಿಸಿ:
ವಸತಿ ಶಾಲೆಯ ಮಕ್ಕಳಿಗೆ ಕಳಪೆ ಆಹಾರ, ಉಪಹಾರ ನೀಡುತ್ತಿರುವ ವಿಚಾರವನ್ನು ಮಕ್ಕಳಿಂದ ಮಾಹಿತಿ ಪಡೆದ ಶಾಸಕ ಶಿವಗಂಗಾ ಬಸವರಾಜ ಶಾಲೆಯ ಅಡುಗೆ ಮನೆ ಸ್ಥಿತಿಗತಿ ಗಮನಿಸಿ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಮಕ್ಕಳ ಅನಾರೋಗ್ಯಕ್ಕೆ ಕಾರಣರಾದ ವಸತಿ ಶಾಲೆಯ ವಾರ್ಡನ್ ಹಾಗೂ ಸಿಬ್ಬಂದಿಯ ತಕ್ಷಣವೇ ಅಮಾನತುಗೊಳಿಸಲು ತಾಲೂಕು ಸಮಾಜ ಕಲ್ಯಾಣಾಧಿಕಾರಿಗೆ ಸೂಚಿಸಿದರು.ಅವಧಿ ಮುಗಿದ, ಹಾಳಾದ ಆಹಾರ ಪದಾರ್ಥಗಳನ್ನು ಅಡುಗೆ, ಉಪಹಾರಕ್ಕೆ ಬಳಸಿರುವ ನೀವು ನಿಮ್ಮ ಮನೆಯಲ್ಲಿ, ಮಕ್ಕಳು, ಕುಟುಂಬದವರೂ ಹೀಗೆ ಊಟ ಮಾಡುತ್ತೀರಾ? ಸ್ವಚ್ಛತೆ ಎಂಬುದೇ ಇಲ್ಲಿ ಮರೀಚಿಕೆಯಾಗಿದೆ. ನಿಮ್ಮ ಮನೆಗಳಲ್ಲೂ ಇದೇ ವಾತಾವರಣ ಇಟ್ಟುಕೊಂಡಿದ್ದೀರಾ? ಯಾವುದೇ ಹಳ್ಳಿಯಿಂದ ವಿದ್ಯೆ ಅರಸಿ, ವಸತಿ ಶಾಲೆಗೆ ದಾಖಲಾದ ಮಕ್ಕಳ ವಿಚಾರದಲ್ಲಿ ಇಂತಹ ಅಸಡ್ಡೆ, ನಿರ್ಲಕ್ಷ್ಯ ನಾವಂತೂ ಸಹಿಸಲ್ಲ ಎಂದು ತಾಕೀತು ಮಾಡಿದರು.
ಅಡುಗೆ ಮನೆಯೇ ಸ್ವಚ್ಛವಾಗಿಲ್ಲ:ಸರ್ಕಾರ ಮಕ್ಕಳ ಶಿಕ್ಷಣ, ವಸತಿಗೆ ಪೂರಕ ಸೌಲಭ್ಯ ಕಲ್ಪಿಸುತ್ತಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಕ್ರಮ ಕೈಗೊಂಡಿದೆ. ಆದರೆ, ನಿಮ್ಮಂತಹ ಅಧಿಕಾರಿ, ಸಿಬ್ಬಂದಿಯಿಂದ ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತದೆ. ಅಡುಗೆ ಮನೆ ಸ್ವಚ್ಛವಾಗಿಲ್ಲ. ಕುಡಿಯುವ ನೀರು ಇಲ್ಲ. ಕೊಳೆತ ಸೊಪ್ಪು, ತರಕಾರಿ ಬಳಸಿ, ಆಹಾರ ಸಿದ್ಧಪಡಿಸುತ್ತಿದ್ದಾರಲ್ರೀ? ವಿದ್ಯಾರ್ಥಿಗಳಿಗೆ ಹಾಸಿಗೆ, ಹೊದಿಕೆ, ಎಣ್ಣೆ, ಬಿಸಿ ನೀರೂ ನೀಡುತ್ತಿಲ್ಲ. ಇಲ್ಲಿನ ವಾರ್ಡನ್, ಅಡುಗೆ ಸಿಬ್ಬಂದಿ ಎಲ್ಲರನ್ನೂ ಅಮಾನತುಪಡಿಸಿ, ತಮಗೆ ವರದಿ ನೀಡಬೇಕು ಎಂದು ಹೇಳಿದರು.
......ಇಲಾಖೆ ಅಧಿಕಾರಿಯಾಗಿ ನೀವೇನು ಮಾಡುತ್ತಿದ್ದೀರಿ?
ಮಕ್ಕಳ ಪರಿಸ್ಥಿತಿ ನೋಡಿದೆ ಕಣ್ಣಲ್ಲಿ ನೀರು ಬರುತ್ತದೆ. ಈ ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಂದರೆ ನಾನಂತೂ ಸಹಿಸಲ್ಲ. ಸಮಾಜ ಕಲ್ಯಾಣ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ, ನಿಮ್ಮಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತೇನೆ. ನಿಮ್ಮ ನಿರ್ಲಕ್ಷ್ಯವೂ ಇಷ್ಟೆಲ್ಲ ಅನಾಹುತಕ್ಕೆ ಕಾರಣ. ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿಯಾಗಿ ನೀವೇನು ಮಾಡುತ್ತಿದ್ದೀರಿ? ಪ್ರಾಮಾಣಿಕವಾಗಿ ನಿಮ್ಮ ಕೆಲಸ ಮಾಡದಿದ್ದರೆ, ಯಾರನ್ನು ನಂಬಬೇಕು ಎಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್ ಗೆ ಶಾಸಕ ಬಸವರಾಜ ಶಿವಗಂಗಾ ತರಾಟೆಗೆ ತೆಗೆದುಕೊಂಡರು. ಇನ್ನು ಮುಂದೆ ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ನೀಡಿ, ಶಾಲೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ಮಕ್ಕಳಿಗೆ ನಿತ್ಯವೂ ಶುದ್ಧ ನೀರು, ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ ಮಾಡಿ ಎಂದು ಶಾಸಕ ಶಿವಗಂಗಾ ಸೂಚಿಸಿದರು......................ಟಿಎಚ್‌ಒ ಮೊಬೈಲ್ ಸ್ವಿಚ್ ಆಫ್ : ಶಿವಗಂಗಾ ಕಿಡಿ
ಕಾಕನೂರು ವಸತಿ ಶಾಲೆಯ ಮಕ್ಕಳ ಆರೋಗ್ಯದ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗೆ ಶಾಸಕ ಶಿವಗಂಗಾ ವಿ.ಬಸವರಾಜ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು ಮತ್ತಷ್ಟು ಕೋಪ ತರಿಸಿತು. ತಾಲೂಕು ಆರೋಗ್ಯಾಧಿಕಾರಿ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಕರೆ ಮಾಡಿದ ಶಾಸಕರು ಕಾಕನೂರು ವಸತಿ ಶಾಲೆಯ ಮಕ್ಕಳು ಕಲುಷಿತ ಆಹಾರ ಸೇವಿಸಿ, ಅನಾರೋಗ್ಯಕ್ಕೆ ತುತ್ತಾಗಿದ್ದು, ಈ ಎಲ್ಲಾ ಮಕ್ಕಳಿಗೆ ಪ್ರಥಮಾದ್ಯತೆಯ ಮೇಲೆ ಉತ್ತಮ ಚಿಕಿತ್ಸೆ ನೀಡಬೇಕು. ಪ್ರತಿ ಗಂಟೆಗೊಮ್ಮೆ ಮಕ್ಕಳ ಆರೋಗ್ಯದ ಬಗ್ಗೆ ತಮಗೆ ಮಾಹಿತಿ ನೀಡಲು ಡಿಎಚ್‌ಒಗೆ ಸೂಚನೆ ನೀಡಿದರು.