18 ಸಾವಿರ ಮನೆಗಳಿಗೆ 24 ಗಂಟೆ ಕುಡಿಯುವ ನೀರು: ಟಿ.ಬಿ.ಜಯಚಂದ್ರ

KannadaprabhaNewsNetwork | Published : Jan 4, 2024 1:45 AM

ಸಾರಾಂಶ

ರಂಗನಾಥ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸಹಕಾರ ರತ್ನ ಎಸ್.ಎನ್. ಕೃಷ್ಣಯ್ಯ ಅವರ ತೃತೀಯ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ನೂತನ ಸ್ವಾಗತ ಕಮಾನು ಹಾಗೂ ಶಾಲಾ ಚಟುವಟಿಕೆ ಪುಸ್ತಕಗಳ ಕೊಡುಗೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಶಿರಾ

ನಗರದ ಸುಮಾರು 18 ಸಾವಿರ ಮನೆಗಳಿಗೆ ದಿನದ 24 ಗಂಟೆಯೂ ಕುಡಿಯುವ ನೀರು ಒದಗಿಸುವ ಉದ್ದೇಶಕ್ಕೆ ಸರ್ಕಾರ ಸುಮಾರು 85 ಕೋಟಿ ರು. ಅನುದಾನ ನೀಡಿದ್ದು, ಇಂದು ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಹೇಳಿದರು.

ಬುಧವಾರ ರಂಗನಾಥ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸಹಕಾರ ರತ್ನ ಎಸ್.ಎನ್. ಕೃಷ್ಣಯ್ಯ ಅವರ ತೃತೀಯ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಶಾಲೆಗೆ ಕೊಡುಗೆ ನೀಡಿದ್ದ ನೂತನ ಸ್ವಾಗತ ಕಮಾನು ಹಾಗೂ ಶಾಲಾ ಚಟುವಟಿಕೆ ಪುಸ್ತಕಗಳ ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶಿರಾ ತಾಲೂಕು ಮುಂಬರುವ ದಿನಗಳಲ್ಲಿ ಶಿಕ್ಷಣ, ಕೈಗಾರಿಕೆ, ಉದ್ಯೋಗ, ರಸ್ತೆ, ಕುಡಿಯುವ ನೀರು ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದಲಿದ್ದು, ಇದಕ್ಕೆ ಬೇಕಾದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದ ಅವರು ದಿ. ಎಸ್.ಎನ್. ಕೃಷ್ಣಯ್ಯ ಅವರು ಸಮಾಜಮುಖೀಯಾಗಿದ್ದರು. ಅವರ ಮಾರ್ಗದರ್ಶನವನ್ನು ನಾವು ಅನುಸರಿಸಬೇಕು. ಶಿರಾ ತಾಲೂಕಿನ ಅಭಿವೃದ್ಧಿ ವಿಷಯದಲ್ಲಿ ಅನೇಕ ಸಲಹೆಗಳನ್ನು ನೀಡುತ್ತಿದ್ದರು. ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಸೇವೆ ಸಲ್ಲಿಸಿ ಸಹಕಾರಿ ರತ್ನ ಪ್ರಶಸ್ತಿ ಪಡೆದಿದ್ದರು. ಅವರ ಹೆಸರಿನಲ್ಲಿ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ನಾಡೋಜ ಬರಗೂರು ರಾಮಚಂದ್ರಪ್ಪ ಮಾತನಾಡಿ, ಈ ದೇಶದ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸುವುದಕ್ಕಾಗಿ ಕಷ್ಟ ಅನುಭವಿಸಿದ ಮಹಾನ್ ಸಾಧಕಿ ಸಾವಿತ್ರ ಬಾಯಿ ಪುಲೆ ಅವರ ಜಯಂತಿ ದಿನವಾದ ಜನವರಿ ೩ ರನ್ನು ರಾಷ್ಟ್ರೀಯ ಮಹಿಳಾ ದಿನವನ್ನಾಗಿ ಘೋಷಿಸಬೇಕು ಎಂದು ಹೇಳಿ ಶಿಕ್ಷಣ ಸಂಸ್ಥೆ ಚಿಕ್ಕದು ದೊಡ್ಡದು ಎಂಬುದಕ್ಕಿಂತ ಹೇಗೆ ಶಿಕ್ಷಣ ದೊರಕುತ್ತಿದೆ ಎಂಬುದು ಮುಖ್ಯ. ಎಸ್.ಎನ್. ಕೃಷ್ಣಯ್ಯ ಅವರ ನೆನಪಿಗಾಗಿ ಸಮಾಜಮುಖಿ ಕಾರ್ಯವನ್ನು ಸಾವಿತ್ರ ಬಾಯಿಪುಲೆ ಜನ್ಮ ಜಯಂತಿಯಂದು ಮಾಡುತ್ತಿರುವುದು ವಿಶೇಷ. ಎಸ್.ಎನ್. ಕೃಷ್ಣಯ್ಯ ಅವರು ಸಹಕಾರಿ ಕ್ಷೇತ್ರದಲ್ಲಿ, ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅವರಿಗೆ ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಇತ್ತು. ಕಲೆ ಸಾಹಿತ್ಯಕ್ಕೆ ಸಂಬಂದಪಟ್ಟ ಕಾರ್ಯಕ್ರಮದಲ್ಲಿ ಎಸ್.ಎನ್. ಕೃಷ್ಣಯ್ಯನವರು ಹೆಚ್ಚು ಭಾಗವಹಿಸುತ್ತಿದ್ದರು. ಅಂತಹವರ ಸ್ಮರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಸಂತಷ ತಂದಿದೆ ಎಂದರು.

ಪ್ರಾಸ್ತವಿಕ ನುಡಿಗಳನ್ನಾಡಿದ ಎಸ್.ಎನ್.ಕೃಷ್ಣಯ್ಯ ಫೌಂಡೆಷನ್ನ ರೂಪೇಶ್ ಕೃಷ್ಣಯ್ಯ, ನಮ್ಮ ತಂದೆ ಎಸ್.ಎನ್.ಕೃಷ್ಣಯ್ಯ ಅವರು ಸಹಕಾರ ಕ್ಷೇತ್ರದಲ್ಲಿ ರಾಷ್ಟ್ರ, ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ್ದರೂ ಸಹ ಶಿಕ್ಷಣ ಕ್ಷೇತ್ರದಲ್ಲಿ ಅವರಿಗೆ ಹೆಚ್ಚು ಆಸಕ್ತಿ ಇತ್ತು. ಯುವಕರನ್ನು ಹೆಚ್ಚು ಪ್ರೋತ್ಸಾಹಿಸುತ್ತಿದ್ದರು. ಅವರ ಆಶಯದಂತೆ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದು ಹೀಗೆ ಮುಂದುವರೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ಕೃಷ್ಣಪ್ಪ, ಬಿ.ಆರ್.ಸಿ. ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗಂಗಾಧರ್, ನಗರಸಭಾ ಸದಸ್ಯೆ ಗಿರಿಜ ವಿಜಯಕುಮಾರ್, ಕಸಾಪ ಅಧ್ಯಕ್ಷ ಪಾಂಡುರಂಗಯ್ಯ, ಕನಕ ಬ್ಯಾಂಕ್ ಅಧ್ಯಕ್ಷ ಎಸ್.ಎಲ್. ರಂಗನಾಥ್, ಎಸ್.ಎಸ್. ಕೃಷ್ಣಯ್ಯ ಫೌಂಡೇಷನ ಎಸ್.ಬಿ. ವಿಜಯಕುಮಾರ್, , ನಿವೃತ್ತ ಪ್ರಾಂಶುಪಾಲ ಡಿ.ಎಸ್. ಕೃಷ್ಣಮೂರ್ತಿ, ನವೋದಯ ಯುವ ವೇದಿಕೆಯ ಜಯರಾಮಕೃಷ್ಣ, ಮುಖ್ಯ ಶಿಕ್ಷಕ ಬಿ.ಟಿ. ರಂಗನಾಥ್, ಶಿಕ್ಷಕರಾದ ಸುಮಾ, ದಸಂಸ ಸಂಚಾಲಕ ಟೈರ್ ರಂಗನಾಥ್, ಮಾಜಿ ನಗರಸಭಾ ಸದಸ್ಯ ಬಸವರಾಜು, ವಿ.ಎಸ್. ಚಲಪತಿ, ಅಶೋಕ್ ಕುಮಾರ್, ಪಿ.ಎಚ್. ಮಹೇಂದ್ರಪ್ಪ ಸೇರಿದಂತೆ ಹಲವರು ಹಾಜರಿದ್ದರು.

Share this article