ಬಳ್ಳಾರಿಯಲ್ಲಿ 24 ಮತದಾನ ಕೇಂದ್ರ ಸ್ಥಾಪನೆ

KannadaprabhaNewsNetwork | Published : Jun 1, 2024 12:47 AM

ಸಾರಾಂಶ

ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರದಲ್ಲಿ 4 ಮತಗಟ್ಟೆ ಕೇಂದ್ರಗಳಿವೆ. 2,568 ಪುರುಷರು, 1,170 ಮಹಿಳೆಯರು ಸೇರಿ ಒಟ್ಟು 3,738 ಪದವೀಧರ ಮತದಾರರಿದ್ದಾರೆ.

ಬಳ್ಳಾರಿ: ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಗೆ ಜೂ.3ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ 24 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ ಸಂಬಂಧ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿ ಅವರು ಮಾತನಾಡಿದರು.

ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರದಲ್ಲಿ 4 ಮತಗಟ್ಟೆ ಕೇಂದ್ರಗಳಿವೆ. 2,568 ಪುರುಷರು, 1,170 ಮಹಿಳೆಯರು ಸೇರಿ ಒಟ್ಟು 3,738 ಪದವೀಧರ ಮತದಾರರಿದ್ದಾರೆ. ಸಿರುಗುಪ್ಪ ಕ್ಷೇತ್ರದಲ್ಲಿ 4 ಮತಗಟ್ಟೆ ಕೇಂದ್ರಗಳಿದ್ದು, 2,522 ಪುರುಷರು, 921 ಮಹಿಳೆಯರು ಸೇರಿ ಒಟ್ಟು 3,443 ಪದವೀಧರ ಮತದಾರರಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ 5 ಮತಗಟ್ಟೆ ಕೇಂದ್ರಗಳಿದ್ದು, ಇಲ್ಲಿ 3,098 ಪುರುಷರು, 2,030 ಮಹಿಳೆಯರು ಮತ್ತು 1 ಇತರೆ ಸೇರಿ ಒಟ್ಟು 5,129 ಪದವೀಧರ ಮತದಾರರಿದ್ದಾರೆ. ಬಳ್ಳಾರಿ ನಗರ ಕ್ಷೇತ್ರದಲ್ಲಿ 7 ಮತಗಟ್ಟೆ ಕೇಂದ್ರಗಳಿದ್ದು, ಇಲ್ಲಿ 4,552 ಪುರುಷರು, 3,681 ಮಹಿಳೆಯರು ಮತ್ತು 2 ಇತರೆ ಸೇರಿ ಒಟ್ಟು 8,235 ಪದವೀಧರ ಮತದಾರರಿದ್ದಾರೆ. ಸಂಡೂರು ಕ್ಷೇತ್ರದಲ್ಲಿ 4 ಮತಗಟ್ಟೆ ಕೇಂದ್ರಗಳಿದ್ದು, 2,241 ಪುರುಷರು, 1,396 ಮಹಿಳೆಯರು ಮತ್ತು 1 ಇತರೆ ಸೇರಿ ಒಟ್ಟು 3,638 ಪದವೀಧರ ಮತದಾರರು ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 24 ಮತದಾನ ಕೇಂದ್ರಗಳಿದ್ದು, 24,183 ಪದವೀಧರ ಮತದಾರರಿದ್ದಾರೆ ಎಂದು ಅವರು ವಿವರಿಸಿದರು.

ಚುನಾವಣೆಯನ್ನು ಅಚ್ಚುಕಟ್ಟಾಗಿ ನಡೆಸಲು ಪಿಆರ್‌ಒ, ಎಪಿಆರ್‌ಒ, ಪಿಒ ಮತ್ತು ಮೈಕ್ರೋ ಅಬ್ಸರ್ವಸ್ ಸೇರಿದಂತೆ ಒಟ್ಟು 140 ಚುನಾವಣೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಈಗಾಗಲೇ ಎರಡು ಹಂತದ ತರಬೇತಿ ನೀಡಲಾಗಿದೆ. 6 ಮತಗಟ್ಟೆ ಕೇಂದ್ರಗಳಲ್ಲಿ ವಿಡಿಯೋಗ್ರಾಫಿ ಮತ್ತು 18 ಮತಗಟ್ಟೆ ಕೇಂದ್ರಗಳಲ್ಲಿ ವೆಬ್‍ಕಾಸ್ಟಿಂಗ್ ಅಳವಡಿಸಿ ನೇರವಾಗಿ ವೀಕ್ಷಿಸಲಾಗುವುದು ಎಂದು ಡಿಸಿ ಅವರು ತಿಳಿಸಿದರು.

ಜೂ.2ರಂದು ಆಯಾ ತಾಲೂಕು ತಹಶೀಲ್ದಾರ ಕಚೇರಿಗಳಲ್ಲಿ ಮಸ್ಟರಿಂಗ್ ಕಾರ್ಯ ನಡೆಯಲಿದೆ. ಮಸ್ಟರಿಂಗ್ ನಂತರ ಮತದಾನ ಸಿಬ್ಬಂದಿ ಮತಪೆಟ್ಟಿಗೆ ಮತ್ತು ಮತದಾನ ಸಾಮಗ್ರಿಗಳೊಂದಿಗೆ ನಿಗದಿಪಡಿಸಿದ ಮತಗಟ್ಟೆಗಳಿಗೆ ತೆರಳುವರು. ಜೂನ್ 3 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾನ ಮುಕ್ತಾಯವಾದ ಬಳಿಕ ಆಯಾ ತಾಲೂಕು ತಹಶೀಲ್ದಾರರ ಕಚೇರಿಯಲ್ಲಿ ಡಿ-ಮಸ್ಟರಿಂಗ್ ಕಾರ್ಯವನ್ನು ಕೈಗೊಂಡು, ಬಳ್ಳಾರಿಯ ತಹಶೀಲ್ದಾರರ ಕಚೇರಿಗೆ ಎಲ್ಲಾ ಮತದಾನ ಕೇಂದ್ರಗಳ ಮತಪೆಟ್ಟಿಗೆ ಮತ್ತು ದಾಖಲಾತಿಗಳನ್ನು ತೆಗೆದುಕೊಂಡು ಸಂಗ್ರಹಿಸಿಡಲಾಗುವುದು ಎಂದು ಹೇಳಿದರು.

ನೋಂದಾಯಿತ ಪದವೀಧರ ಮತದಾರರಿಗೆ ಈಗಾಗಲೇ ಮತಗಟ್ಟೆ ಕೇಂದ್ರ ಮಾಹಿತಿ, ಮತದಾನದ ದಿನ ವಿವರ ಸೇರಿ ಕ್ಯೂಆರ್ ಕೋಡ್ ಒಳಗೊಂಡ ಮತದಾರ ಚೀಟಿಗಳನ್ನು ವಿತರಿಸಲಾಗಿದೆ ಮತ್ತು ಸಂಬಂಧಪಟ್ಟ ಮತದಾರರ ಮೊಬೈಲ್ ಸಂಖ್ಯೆಗೂ ಎಸ್‍ಎಂಎಸ್ ಮೂಲಕ ಮಾಹಿತಿ ರವಾನಿಸಲಾಗಿದೆ ಎಂದರು.

ಜಿಲ್ಲಾಧಿಕಾರಿಗಳ ಕಚೇರಿ- ದೂ.08392-277100, ಬಳ್ಳಾರಿ ತಹಶೀಲ್ದಾರರ ಕಚೇರಿ- ದೂ.08392-297472, ಸಂಡೂರು ತಹಶೀಲ್ದಾರರ ಕಚೇರಿ- ದೂ.08395-260241, ಸಿರುಗುಪ್ಪ ತಹಶೀಲ್ದಾರರ ಕಚೇರಿ- ದೂ.08396-220238, ಕುರುಗೋಡು ತಹಶೀಲ್ದಾರರ ಕಚೇರಿ- ದೂ.08393-200014, ಕಂಪ್ಲಿ ತಹಶೀಲ್ದಾರರ ಕಚೇರಿ- ದೂ.08394-295554 ಗೆ ನೋಂದಣಿಯಾಗಿರುವ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಬಗ್ಗೆ ಮಾಹಿತಿ ಪಡೆಯಲು ಮತ್ತು ಮತದಾನ ಕೇಂದ್ರಗಳ ಮಾಹಿತಿ ಪಡೆಯಲು ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.

ಈ ವೇಳೆ ಎಎಸ್ಪಿ ಕೆ.ಪಿ. ರವಿಕುಮಾರ್, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

Share this article