ಚಿಕ್ಕಮಗಳೂರಿನ ಹೊರವಲಯದಲ್ಲಿ ಬೀಡುಬಿಟ್ಟ 25 ಕಾಡಾನೆಗಳು

KannadaprabhaNewsNetwork | Published : Jan 30, 2024 2:03 AM

ಸಾರಾಂಶ

ಬೇಲೂರು ತಾಲೂಕಿನಿಂದ ಕೆ.ಆರ್.ಪೇಟೆ ಮಾರ್ಗವಾಗಿ ಜಿಲ್ಲೆಗೆ ಪ್ರವೇಶಿಸಿರುವ ಸುಮಾರು 25 ಕಾಡಾನೆಗಳ ಹಿಂಡು ಸೋಮವಾರ ಬೆಳಿಗ್ಗೆ ಚಿಕ್ಕಮಗಳೂರು ಹೊರ ವಲಯದಲ್ಲಿರುವ ಅಂಬರ್ ವ್ಯಾಲಿ ಶಾಲೆ ಪ್ರದೇಶದ ಸಮೀಪದಲ್ಲಿ ಬೀಡು ಬಿಟ್ಟಿದ್ದವು.

- ಕದ್ರಿಮಿದ್ರಿ, ಮೂಗ್ತಿಹಳ್ಳಿ ಸುತ್ತಮುತ್ತ ಗ್ರಾಮಗಳ ಜನರಲ್ಲಿ ಆತಂಕ । 10 ಶಾಲಾ- ಕಾಲೇಜುಗಳಿಗೆ ರಜೆ, ಮುಂಜಾಗ್ರತೆಯಾಗಿ 12 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ, 100 ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನೆರೆಯ ಬೇಲೂರು ತಾಲೂಕಿನಿಂದ ಕೆ.ಆರ್.ಪೇಟೆ ಮಾರ್ಗವಾಗಿ ಜಿಲ್ಲೆಗೆ ಪ್ರವೇಶಿಸಿರುವ ಸುಮಾರು 25 ಕಾಡಾನೆಗಳ ಹಿಂಡು ಸೋಮವಾರ ಬೆಳಿಗ್ಗೆ ಚಿಕ್ಕಮಗಳೂರು ಹೊರ ವಲಯದಲ್ಲಿರುವ ಅಂಬರ್ ವ್ಯಾಲಿ ಶಾಲೆ ಪ್ರದೇಶದ ಸಮೀಪದಲ್ಲಿ ಬೀಡು ಬಿಟ್ಟಿದ್ದವು. ಇದೇ ಮೊದಲ ಬಾರಿಗೆ ಇಷ್ಟು ಸಂಖ್ಯೆಯಲ್ಲಿ ಕಾಡಾನೆಗಳನ್ನು ಕಂಡಿರುವ ಜನರು ಆತಂಕಗೊಂಡಿದ್ದಾರೆ. ಬೀಡು ಬಿಟ್ಟಿರುವ ಕಾಡಾನೆಗಳು ಯಾವುದೇ ಕ್ಷಣದಲ್ಲಾದರೂ ಸ್ಥಳದಿಂದ ಹೊರಬರುವ ಸಾಧ್ಯತೆ ಇರುವುದರಿಂದ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ದಲ್ಜಿತ್‌ಕುಮಾರ್ ಸೋಮವಾರ ಬೆಳಿಗ್ಗೆಯಿಂದಲೇ ಜಾರಿಗೆ ಬರುವಂತೆ ಮೂಗ್ತಿಹಳ್ಳಿ, ಕದ್ರಿಮಿದ್ರಿ, ಶ್ರೀನಿವಾಸ ನಗರ, ಆದಿಶಕ್ತಿನಗರ, ಕೆಸವಿನಮನೆ, ಮತ್ತಾವರ, ನಲ್ಲೂರು, ರಾಂಪುರ, ಗವನಹಳ್ಳಿ, ತೇಗೂರು, ದಂಬದ ಹಳ್ಳಿ ಹಾಗೂ ದುಮ್ಮಿಗೆರೆ ಗ್ರಾಮಗಳಿಗೆ ಅನ್ವಯವಾಗುವಂತೆ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಈ ಆದೇಶ ಜ. 30ರ ಬೆಳಿಗ್ಗೆ 10 ಗಂಟೆವರೆಗೆ ಚಾಲ್ತಿಯಲ್ಲಿ ಇರಲಿದೆ. ಆನೆಗಳ ಹಿಂಡು ಕಾಣಿಸಿಕೊಳ್ಳುತ್ತಿದ್ದಂತೆ ಮೂಗ್ತಿಹಳ್ಳಿ, ಆದಿಶಕ್ತಿನಗರ, ಸಿರಗಾಪುರ, ಮೂಗ್ತಿಹಳ್ಳಿ, ದಂಬದಹಳ್ಳಿ, ಮಳಲೂರು, ನಲ್ಲೂರು, ತೇಗೂರು ಸೇರಿದಂತೆ ಸುತ್ತಮುತ್ತ ಇರುವ ಸರ್ಕಾರಿ ಶಾಲೆಗಳು ಹಾಗೂ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಬೀಡು ಬಿಟ್ಟಿರುವ ಆನೆಗಳು ಸ್ಥಳದಿಂದ ತೆರಳಿದರೆ ರಜೆ ಮುಂದುವರೆಸುವ ಬಗ್ಗೆ ಮಂಗಳವಾರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಚಿಕ್ಕಮಗಳೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಎಲ್ಲಿಂದ ಬಂದವು: ಬೇಲೂರು ತಾಲೂಕಿನಿಂದ ಚಿಕ್ಕಮಗಳೂರು ತಾಲೂಕಿನ ಕೆ.ಆರ್. ಪೇಟೆಗೆ ಕಳೆದ ಮೂರು ದಿನಗಳ ಹಿಂದೆ ಸುಮಾರು 25 ಕಾಡಾನೆಗಳು ಬಂದವು. ಈ ತಂಡದಲ್ಲಿ ಅರಣ್ಯ ಇಲಾಖೆ ಕಾಲರ್ ಐಡಿ ಅಳವಡಿಸಿರುವ ಬೀಟಮ್ಮ ಆನೆ, ಮೈಸೂರು ದಸರಾ ಮಹೋತ್ಸವದಲ್ಲಿ ಅಂಬಾರಿ ಹೋರುವ ಅರ್ಜುನನ್ನು ಕಾರ್ಯಾಚಾರಣೆ ವೇಳೆಯಲ್ಲಿ ಸಾಯಿಸಿದ ದೈತ್ಯಕಾರದ ಭೀಮ ಆನೆ, 4 ಮರಿ ಆನೆಗಳು ಇದ್ದು, ಇವುಗಳು ಅಂಬರ್ ವ್ಯಾಲಿ ಶಾಲೆ ಹಿಂಭಾಗ ದಲ್ಲಿರುವ ಇನ್ ಫ್ಯಾಂಟ್‌ ಸ್ಕೂಲ್ ರಸ್ತೆಯಲ್ಲಿರುವ ಕುರುಚಲು ಕಾಡಿನಲ್ಲಿ ಬೀಡು ಬಿಟ್ಟಿವೆ. ಸೋಮವಾರ ಬೆಳ್ಳಂಬೆಳಿಗ್ಗೆ ಸಾರ್ವಜನಿಕರು ಆನೆಗಳ ಸಂಚಾರವನ್ನು ಕಣ್ಣಾರೆ ಕಂಡಿದ್ದಾರೆ. ಮುಂಜಾಗ್ರತೆಯಾಗಿ ಶಾಲೆ ಗಳಿಗೆ ರಜೆ ನೀಡಿರುವ ಜತೆಗೆ ಮನೆಗಳಿಂದ ಹೊರಗೆ ಬರದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಮೈಕ್‌ನಲ್ಲಿ ಪ್ರಚುರ ಪಡಿಸಲಾಯಿತು. ಸೋಮವಾರ ಸಂಜೆ ನಂತರ ಕಾರ್ಯಾಚರಣೆ ಮುಂದುವರೆಸಲಾಗಿದ್ದು, ಈ ಆನೆಗಳು ಬಂದ ದಾರಿಯಲ್ಲಿ ಅಂದರೆ, ಕೆ.ಆರ್.ಪೇಟೆ ಮಾರ್ಗವಾಗಿ ಬೇಲೂರು ತಾಲೂಕಿಗೆ ಎಂಟ್ರಿ ಕೊಟ್ಟರೆ ಯಾವುದೇ ಆತಂಕ ಇಲ್ಲ, ಆದರೆ, ಅವುಗಳು ಮತ್ತಾವರದ ಕಡೆಗೆ ಪ್ರಯಾಣ ಬೆಳೆಸಿದರೆ ಜಿಲ್ಲೆಯ ಮಲೆನಾಡಿನಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಲಿದೆ. ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಸುಮಾರು 100 ಮಂದಿ ಅರಣ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಚಿಕ್ಕಮಗಳೂರು ಡಿಎಫ್‌ಒ ರಮೇಶ್‌ಬಾಬು ತಿಳಿಸಿದ್ದಾರೆ. ಕಾಡಾನೆಗಳ ಸಂಚಾರ ಇರುವುದರಿಂದ ಮೂಗ್ತಿಹಳ್ಳಿ, ಕದ್ರಿಮಿದ್ರಿ, ಶ್ರೀನಿವಾಸ ನಗರ, ಆದಿಶಕ್ತಿನಗರ, ಕೆಸವಿನಮನೆ, ಮತ್ತಾವರ, ನಲ್ಲೂರು, ರಾಂಪುರ, ಗವನಹಳ್ಳಿ, ತೇಗೂರು, ದಂಬದಹಳ್ಳಿ ಮತ್ತು ದುಮ್ಮಿಗೆರೆ ಗ್ರಾಮಸ್ಥರು ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---- ಬಾಕ್ಸ್ -----ಆನೆಗಳಿಂದ ಹಾನಿ, ಪರಿಹಾರ ನೀಡಲು ರೈತ ಸಂಘ ಆಗ್ರಹಚಿಕ್ಕಮಗಳೂರು: ತಾಲೂಕಿನ ಗಡಿ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಮಾಡಿರುವ ಬೆಳೆಹಾನಿಗೆ ರೈತರಿಗೆ ಸ್ಥಳದಲ್ಲಿಯೇ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಮಹೇಶ್ ಆಗ್ರಹಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 3 ದಿನಗಳಿಂದಲೂ 25 ರಿಂದ 30 ಕಾಡಾನೆಗಳ ಗುಂಪು ಅಂಬಳೆ ಹೋಬಳಿ ಕೆ.ಆರ್.ಪೇಟೆ, ಮತ್ತಿಕೆರೆ, ಮಾವಿನಕೆರೆ, ಬಾಣಾವರ, ಗಂಜಲಗೋಡು, ಹಳುವಳ್ಳಿ, ಹಾದಿಹಳ್ಳಿ ಗ್ರಾಮಗಳ ಹತ್ತಿರ ಓಡಾಡುತ್ತಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ ಎಂದರು. ಮಾವಿನಕೆರೆ ಗ್ರಾಮದ ರೈತ ಎಸ್‌.ಕೆ. ಕುಮಾರ್ ಅವರ 1.5 ಎಕರೆ ಪ್ರದೇಶದಲ್ಲಿ ಬೆಳೆದ ಕಾಫಿ ತೋಟಕ್ಕೆ ನುಗ್ಗಿದ ಆನೆ ಹಿಂಡು ಸುಮಾರು ಒಂದು ಸಾವಿರ ಗಿಡಗಳನ್ನು ಕಿತ್ತುಹಾಕಿರುವುದಲ್ಲದೆ ತಂತಿಬೇಲಿ ಕಂಬಗಳನ್ನೆಲ್ಲಾ ಕಿತ್ತು ಬಿಸಾಕಿ ಅಪಾರ ನಷ್ಟವಾಗಿದೆ. ಹಳುವಳ್ಳಿ ಗ್ರಾಮದ ಇಂದ್ರೇಶ್, ಮೋಹನ್ ಗೌಡ, ಸಂತೋಷ್, ಎಂಬ ರೈತರು ಬೆಳೆದ 3 ಭತ್ತದ ಬಣವೆಗಳನ್ನು ಸಂಪೂರ್ಣ ತಿಂದು ಖಾಲಿ ಮಾಡಿವೆ. ಈ ಬಣವೆಯಿಂದ ಸುಮಾರು 40 ಕ್ವಿಂಟಲ್ ಭತ್ತದ ಜೊತೆಗೆ ರೈತರ ದನಗಳ ಮೇವಿಗಾಗಿ ಬಳಸುತ್ತಿದ್ದ ಹುಲ್ಲನ್ನು ಧ್ವಂಸಗೊಳಿಸಿವೆ. ಈ ಬಗ್ಗೆ ಅರಣ್ಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ಪರಿಹಾರ ನೀಡುವುದಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದರು. ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ಆನೆಗಳ ಓಡಾಟದಿಂದ ಸಂಜೆ ರಾತ್ರಿ ಜನಗಳು ವಾಹನಗಳು ಓಡಾವುದೇ ಕಷ್ಟವಾಗಿದೆ. ಜನರ ಪ್ರಾಣಾಪಾನಿ ಆಗುವುದಕ್ಕಿಂತ ಮುಂಚೆ ಸರ್ಕಾರ ಹಾಗೂ ಅರಣ್ಯ ಇಲಾಖೆ ಆನೆಗಳ ಸ್ಥಳಾಂತರಕ್ಕೆ ತುರ್ತಾಗಿ ಕ್ರಮ ವಹಿಸಬೇಕು. ಆನೆಗಳು ಕಾಡಿನಿಂದ ಹೊರ ಬರದಂತೆ ಆನೆ ಕಾರಿಡಾರ್ ನಿರ್ಮಾಣ ಮಾಡಬೇಕು ಹಾಗೂ ಆನೆಗಳಿಂದ ಹಾನಿ ಯಾಗಿರುವ ರೈತರಿಗೆ ನಷ್ಟಕ್ಕೆ ಸರಿದೂಗುವ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಇಲಾಖೆ ಎದುರು ಅನಿರ್ಧಿಷ್ಟಾವದಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ನಾರಾಯಣ ರಾಜ್‌ ಅರಸ್, ಎಂ.ಬಿ ಚಂದ್ರಶೇಖರ್ ಇದ್ದರು.---- 29 ಕೆಸಿಕೆಎಂ5, 6ಚಿಕ್ಕಮಗಳೂರಿನ ಅಂಬರ್ ವ್ಯಾಲಿ ಶಾಲೆಯ ಬಳಿ ಸೋಮವಾರ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು.

Share this article