ಸಣ್ಣ ಕೈಗಾರಿಕೆಗಳ ಶೇ. 25 ಉತ್ಪನ್ನ ಕೇಂದ್ರದಿಂದ ಖರೀದಿ: ಸಚಿವೆ ಕರಂದ್ಲಾಜೆ

KannadaprabhaNewsNetwork | Published : May 17, 2025 1:24 AM
Follow Us

ಸಾರಾಂಶ

ಜೆಮ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡ ಕೌಶಲ್ಯಭರಿತ ಉತ್ಪಾದನೆಗಳಿಗೆ ಕೇಂದ್ರ ಸರ್ಕಾರ ಹೆಚ್ಚು ಆದ್ಯತೆ ನೀಡಲಿದೆ. ಇದರಲ್ಲಿ ಶೇ. 4ರಷ್ಟು ಎಸ್ಸಿ-ಎಸ್ಟಿ, ಶೇ. 3ರಷ್ಟು ಮಹಿಳೆ ಕೈಗಾರಿಕೋದ್ಯಮಿಗಳ ಉತ್ಪಾದನೆ ಖರೀದಿಸಲು ಮೀಸಲಿರಿಸಲಾಗಿದೆ.

ಹುಬ್ಬಳ್ಳಿ: ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿ ದೇಶಾದ್ಯಂತ ಮಾರುಕಟ್ಟೆ ಒದಗಿಸುವ ಜತೆಗೆ ಶೇ. 25ರಷ್ಟು ಉತ್ಪಾದನೆಯನ್ನು ಖರೀದಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಸಣ್ಣ ಕೈಗಾರಿಕೋದ್ಯಮಿಗಳು ಜೆಮ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು ಇದರ ಲಾಭ ಪಡೆದುಕೊಳ್ಳಬೇಕು ಎಂದು ಅತೀ ಸಣ್ಣ, ಸಣ್ಣ ಮತ್ತು ಮಧ್ಯ ಕೈಗಾರಿಕೆಗಳ ಕೇಂದ್ರದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕರೆ ನೀಡಿದರು.

ಸೈನ್ಯದಲ್ಲಿ ಬಳಕೆಯಾಗುವ ಶಸ್ತ್ರಾಸ್ತ್ರಗಳ ತಯಾರಿಕೆಗೆ ಎಂಎಸ್‌ಎಂಇ (ಸೂಕ್ಷ್ಮ ಸಣ್ಣ ಮಧ್ಯಮ ಉದ್ಯಮ)ಗಳ ಕೊಡುಗೆ ಬಹಳಷ್ಟಿದೆ ಎಂದು ಇದೇ ವೇಳೆ ತಿಳಿಸಿದರು.

ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ನಗರದಲ್ಲಿ ಮೂರು ದಿನಗಳ ವರೆಗೆ ನಡೆಯಲಿರುವ‘ಐಮೆಕ್ಸ್-2025’ಇಂಡಸ್ಟ್ರೀ ಮತ್ತು ಮ್ಯಾನ್ಯುಫ್ಯಾಕ್ಚರಿಂಗ್ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಜೆಮ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡ ಕೌಶಲ್ಯಭರಿತ ಉತ್ಪಾದನೆಗಳಿಗೆ ಕೇಂದ್ರ ಸರ್ಕಾರ ಹೆಚ್ಚು ಆದ್ಯತೆ ನೀಡಲಿದೆ. ಇದರಲ್ಲಿ ಶೇ. 4ರಷ್ಟು ಎಸ್ಸಿ-ಎಸ್ಟಿ, ಶೇ. 3ರಷ್ಟು ಮಹಿಳೆ ಕೈಗಾರಿಕೋದ್ಯಮಿಗಳ ಉತ್ಪಾದನೆ ಖರೀದಿಸಲು ಮೀಸಲಿರಿಸಲಾಗಿದೆ. ಆದರೆ, ಶೇ. 1.5ನಷ್ಟು ಮಹಿಳಾ ಕೈಗಾರಿಕೋದ್ಯಮಿಗಳು ಪೋರ್ಟಲ್‌ನಲ್ಲಿ ನೋಂದಣಿಯಾಗಿದ್ದಾರೆ. ಸಾಕಷ್ಟು ಸಣ್ಣ ಕೈಗಾರಿಕೆಯಲ್ಲಿರುವ ಮಹಿಳಾ ಉದ್ಯಮಿಗಳು ಇದರಿಂದ ದೂರ ಉಳಿದಿದ್ದು, ಜೆಮ್ ಪೋರ್ಟಲ್ ಬಗ್ಗೆ ಹೆಚ್ಚು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಸಣ್ಣ ಕೈಗಾರಿಕೆಗಳು ತನ್ನ ಬೆಳವಣಿಗೆಯಲ್ಲಿ ಎದುರಿಸುತ್ತಿರುವ ಕೊರತೆ ನೀಗಿಸಲು ಕೇಂದ್ರ ಸರ್ಕಾರವು ಸಣ್ಣ ಕೈಗಾರಿಕೋದ್ಯಮಿಗಳಿಗೆ ಮತ್ತು ಕಾರ್ಮಿಕರಿಗೆ ಅಗತ್ಯ ತರಬೇತಿ ನೀಡಲು ಬೆಂಗಳೂರಿನ ಪಿಣ್ಯಾ ಕೈಗಾರಿಕಾ ವಲಯದಲ್ಲಿ ಅತ್ಯಾಧುನಿಕ ಎನ್‌ಐಸಿ ಸ್ಥಾಪಿಸಲಾಗುತ್ತಿದೆ ಎಂದರು.

ಭಾರತದ ಆಹಾರ ಉತ್ಪನ್ನಗಳಿಗೆ ಜಗತ್ತಿನಾದ್ಯಂತ ಹೆಚ್ಚಿನ ಬೇಡಿಕೆ ಇದೆ. ಇದರ ಲಾಭ ಪಡೆದು ಸಣ್ಣ ಕೈಗಾರಿಕೆಗಳು ಎಕ್ಸಪೋರ್ಟ್ ಕ್ವಾಲಿಟಿ ಉತ್ಪನ್ನ ತಯಾರಿಸಲು ಆದ್ಯತೆ ನೀಡಬೇಕು. ಆಯಾ ದೇಶಕ್ಕೆ ತಕ್ಕೆಂತೆ ಉತ್ಪನ್ನಗಳ ಉತ್ಪಾದನೆಗೆ ಒತ್ತು ನೀಡುವಂತೆಯೂ ಅವರು ಉದ್ಯಮಿಗಳಿಗೆ ಕರೆ ನೀಡಿದರು.

ಆಪರೇಷನ್‌ ಸಿಂದೂರ:

ಇದೇ ವೇಳೆ ಆಪರೇಷನ್‌ ಸಿಂದೂರ್‌ ದಾಳಿ ವೇ‍ಳೆ ನಿಖರ ದಾಳಿ ಮಾಡಲು ಬಳಸಿದ ಶಸ್ತ್ರಾಸ್ತ್ರಗಳ ತಯಾರಿಕೆಗೆ ಎಂಎಸ್‌ಎಂಇಗಳ ಕೊಡುಗೆ ಬಹಳಷ್ಟಿದೆ. ಇದರಿಂದ ಭಾರತದ ಶಕ್ತಿ ಏನೆಂದು ವಿಶ್ವಕ್ಕೆ ತಿಳಿಸಿದ್ದು, ಮುಂಬರುವ ದಿನಗಳಲ್ಲಿ ಭಾರತೀಯ ಶಸ್ತ್ರಾಸ್ತ್ರಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಲಿದೆ ಎಂದರು.

ಐಮೆಕ್ಸ್ -2025 ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕೈಗಾರಿಕೆಗಳ ಬೆಳವಣಿಗೆ ಮತ್ತು ಹೆಚ್ಚು ಹೂಡಿಕೆದಾರರ ಬರಲು ಅಗತ್ಯ ಸೌಕರ್ಯ ಇರಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ₹100 ಲಕ್ಷ ಕೋಟಿ ಮೂಲಸೌಕರ್ಯ ಕಲ್ಪಿಸಲು ವ್ಯಯಿಸುತ್ತಿದೆ. ಆ ಮೂಲಕ ಕೈಗಾರಿಕೆ, ವಾಣಿಜ್ಯ, ವ್ಯಾಪಾರಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಇದರ ಪರಿಣಾಮದಿಂದ ಹೂಡಿಕೆದಾರರಿಂದ ದೇಶದಲ್ಲಿ 6.67 ಬಿಲಿಯನ್ ಡಾಲರ್ ಹೂಡಿಕೆಯಾಗಿದೆ. ಅನ್ಯ ರಾಷ್ಟ್ರಗಳಲ್ಲಿ ಲಾಜಿಸ್ಟಿಕ್ ಶುಲ್ಕ ಶೇ. 6 ರಿಂದ 7ರಷ್ಟಿದ್ದರೆ, ಭಾರತದಲ್ಲಿ ಶೇ. 12ರಷ್ಟು ಲಾಜಿಸ್ಟಿಕ್ ಶುಲ್ಕವಿದೆ. ಹೀಗಾಗಿ, ಗತಿಶಕ್ತಿ ಯೋಜನೆಯಡಿ ರೈಲು, ಜಲ, ರಸ್ತೆ ಮಾರ್ಗವನ್ನು ಸೂಕ್ತವಾಗಿ ಜೋಡಿಸಿ ಲಾಜಿಸ್ಟಿಕ್ ಶುಲ್ಕ ಕಡಿಮೆಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷ ಗಿರೀಶ ನಲವಡಿ, ಡಿಐಸಿ ಜಂಟಿ ನಿರ್ದೇಶಕ ಶಿವಪುತ್ರಪ್ಪ, ಬಿ.ಎಸ್. ಜವಳಗಿ, ರಮೇಶ ಪಾಟೀಲ, ಶಂಕರ ಹಿರೇಮಠ, ಜೆ.ಸಿ. ಮಠದ, ಅಶೋಕ ಕನ್ನೂರ, ಅಶೋಕ ಕಲಬುರ್ಗಿ, ಅನೀಲಕುಮಾರ ಜೈನ್, ಭರತ ಕುಲಕರ್ಣಿ, ರಮೇಶ ಯಾದವಾಡ ಸೇರಿದಂತೆ ಇತರರು ಇದ್ದರು.

ಭಾರತ 2026-27ಕ್ಕೆ 3ನೇ ಆರ್ಥಿಕ ಶಕ್ತಿ: ಹಿಂದೆ ಮೊಬೈಲ್‌ ಮಾರುಕಟ್ಟೆಗೆ ಬಂದ ಸಂದರ್ಭದಲ್ಲಿ ಅಮೆರಿಕಾದಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೀಗ ಅದೇ ಮೊಬೈಲ್ ತಯಾರಿಕೆಯಲ್ಲಿ ಭಾರತ ಸಾಧನೆ ಮಾಡಿದ್ದು, ಭಾರತದಿಂದ ಅಮೆರಿಕಾಕ್ಕೆ ₹84,294 ಕೋಟಿ ರಫ್ತು ಆಗಿದೆ. 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಮಾರ್ಕೆಟಿಂಗ್ ಸೆಕ್ಟರ್‌ನಲ್ಲಿ ದೊಡ್ಡ ಅವಕಾಶವಿದ್ದು, ಕೈಗಾರಿಕೋದ್ಯಮ ಇಲ್ಲಿ ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಬೇಕು. ಇದೆಲ್ಲದರ ಪರಿಣಾಮ ದೇಶದ ಆರ್ಥಿಕ ಶಕ್ತಿ ಬೀರುತ್ತಿದ್ದು, 2026-27ಕ್ಕೆ ಭಾರತ ವಿಶ್ವದ 3ನೇ ಅತೀದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಎಂಎಸ್‌ಎಂಇಯಿಂದ 26 ಕೋಟಿ ಜನರಿಗೆ ಉದ್ಯೋಗ: ಎಂಎಸ್‌ಎಂಇ ಕ್ಷೇತ್ರದಲ್ಲಿ 26 ಕೋಟಿ ಜನ ಉದ್ಯೋಗ ಪಡೆದಿದ್ದಾರೆ. ಕೃಷಿ ಕ್ಷೇತ್ರದ ನಂತರ ಅತೀ ಹೆಚ್ಚು ಉದ್ಯೋಗ ನೀಡಿದ ಕ್ಷೇತ್ರ ಎಂಎಸ್‌ಎಂಇ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ದೇಶದಲ್ಲಿ 7 ಕೋಟಿ ಎಂಎಸ್‌ಎಂಇಗಳಿದ್ದು, ಈಗಾಗಲೇ ಉದ್ಯಮ ಪೋರ್ಟಲ್‌ನಲ್ಲಿ 6.36 ಕೋಟಿ ಸಣ್ಣ ಕೈಗಾರಿಕೋದ್ಯಮಿಗಳು ನೋಂದಣಿಯಾಗಿದ್ದಾರೆ. ದೇಶದ ಒಟ್ಟು ಜಿಡಿಪಿಯಲ್ಲಿ ಶೇ.30ರಷ್ಟು ಜಿಡಿಪಿ ಎಂಎಸ್‌ಎಂಇಯಿಂದ ಸಿಗುತ್ತಿದ್ದರೆ, ಉತ್ಪಾದನಾ ಕ್ಷೇತ್ರದಲ್ಲಿ ಶೇ.45ರಷ್ಟು, ರಫ್ತಿನಲ್ಲಿ ಶೇ. 40ರಷ್ಟು ಸಾಧನೆಯನ್ನು ಎಂಎಸ್‌ಎಂಇ ಮಾಡಿದೆ ಎಂದು ಕೇಂದ್ರದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.