ಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಇದೇ ಮೊದಲ ಬಾರಿಗೆ ಕಲ್ಯಾಣದ 7 ಜಿಲ್ಲೆಗಳ ಯುವಕರಿಗೆ ಕಲಿಕೆಯ ಜೊತೆಗೇ ಕೌಶಲ್ಯ ತರಬೇತಿ ಕೊಟ್ಟು, ಅವರಿಗೆ ನೌಕರಿ ಗ್ಯಾರಂಟಿ ನೀಡುವ ವಿನೂತನವಾದಂತಹ ಉದ್ಯೋಗ ಆವಿಷ್ಕಾರ ಯೋಜನೆ ರೂಪಿಸಿದೆ.ಮಂಗಳವಾರ ಮಂಡಳಿಯ ಅಧ್ಯಕ್ಷ ಡಾ. ಅಜಯ್ ಧರ್ಮಸಿಂಗ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯೋಜನೆಯ ರೂಪರೇಷೆಗಳನ್ನು ಮಾಧ್ಯಮಗಳಿಗೆ ನೀಡಿದರು.
ಈಗಾಗಲೇ ಅಕ್ಷರ ಹಾಗೂ ಆರೋಗ್ಯ ರಂಗದಲ್ಲಿನ ಆವಿಷ್ಕಾರಗಳಿಂದಾಗಿ ಕಲ್ಯಾಣದ ಜಿಲ್ಲೆಗಳಲ್ಲಿ ಅದಾಗಲೇ ಕೆಲಸಗಳು ಶುರುವಾಗಿವೆ. ಇದೀಗ ಯುವಕರಿಗೆ ಮುಖ್ಯವಾಗಿ ಬೇಕಾಗಿರುವ ಉದ್ಯೋಗ ಒದಗಿಸಲು ಕೆಕೆಆರ್‌ಡಿಬಿ ಮುಂದಾಗಿದೆ. ಈ ಯೋಜನೆಗಾಗಿ 2024-25ರ ಸಾಲಿನಲ್ಲಿ 10 ಕೋಟಿ ರು. ಮೀಸಲಿಟ್ಟಿದೆ ಎಂದರು.ಕಲಿಕೆ ಜೊತೆ ಕೌಶಲ್ಯ ಇದೊಂದು ಪ್ರಾಯೋಗಿಕ ಕಾರ್ಯಕ್ರಮವಾಗಿದೆ. ಇದರಡಿಯಲ್ಲಿ 25 ಸಾವಿರದಷ್ಟು ಬಿಎ, ಬಿಕಾಂ ಹಾಗೂ ಬಿಎಸ್‌ಸಿ ವಿದ್ಯಾರ್ಥಿಗಳನ್ನು ಅವರ ಪದವಿ ದಿನ 5ನೇ ಸೆಮಿಸ್ಟರ್‌ನಿಂದಲೇ ಅವರನ್ನು ಸಂಪರ್ಕಿಸಿ ಆಯ್ಕೆಮಾಡಿ ಕಲಿಕೆಯೊಂದಿಗೆ ಕೌಶಲ್ಯ ತರಬೇತಿ ನೀಡಿ, ಉದ್ಯೋಗವಕಾಶಗಳನ್ನು ಒದಗಿಸುವುದೇ ತಮ್ಮ ಗುರಿ ಎಂದರು.
ಈ ಕಾರ್ಯಕ್ರಮದಲ್ಲಿ ತಜ್ಞರಿಂದ ತರಬೇತಿ ಮಾರ್ಗದರ್ಶನ ನೀಡಲಾಗುತ್ತದೆ. ತರಬೇತಾದವರಿಗೆಲ್ಲರಿಗೂ ಸಣ್ಣ ಉದ್ದಿಮೆಗಳಲ್ಲಿ ಉದ್ಯೋಗ ಒದಗಿಸುವ ಪ್ರಯತ್ನ ಮಾಡುತ್ತೇವೆ. ಉದ್ದಿಮೆ ಸಂಪರ್ಕವೂ ಒದಗಿಸಲಾಗುತ್ತಿದೆ. ಐಟಿ, ಸಾಫ್ಟ ಸ್ಕಿಲ್, ಕ್ಯಾಡ್, ಡಾಟಾ ಅನಲೈಸಿಸ್, ಕ್ಲೌಡ್, ಟ್ಯಾಲಿ ಇತರೆಲ್ಲ ರಂಗಗಳಲ್ಲಿ ತರಬೇತಿ ಇವರಿಗೆ ನೀಡಲಾಗುತ್ತಿದೆ.ಕೆಕೆಆರ್‌ಡಿಬಿ ಯ ಉದ್ಯೋಗ ಆವಿಷ್ಕಾರಕ್ಕೆ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಸಿಡಾಕ್ ಕೈಜೋಡಿಸುತ್ತಿವೆ. ಈ ಸಂಸ್ಥೆಗಳಿಂದಲೇ ಫಲಾನುಭವಿಗಳ ಆಯ್ಕೆ, ತರಬೇತಿ ಎಲ್ಲವೂ ನಡೆಯಲಿದೆ. ಕಲ್ಯಾಣದ 7 ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಯಲ್ಲಿ 150 ಜನರಂತೆ ತರಬೇತಿ ತರಗತಿ ರೂಪಿಸಲಾಗುತ್ತದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಯುವಕರು, ಮಹಿಳೆಯರ ಔದ್ಯಮಿಕ ಸಬಲೀಕರಣದೊಂದಿಗೆ ಶುರುವಾಗಿರುವ ಯೋಜನೆಗೆ ಯುವ ಪದವೀಧರರ ಸಹಕಾರ ಕೋರಿದ ಡಾ. ಅಜಯ್ ಸಿಂಗ್ ಕೇಂದ್ರ ವಾರ್ಷಿಕ 2 ಕೋಟಿ ಉದ್ಯೋಗ ನೀಡುವ ಮಾತನ್ನಾಡಿ ವಿಫಲವಾಗಿದೆ. ನಾವು ಮಾತನಾಡದೆ ಕೆಲಸ ಮಾಡುತ್ತಿದ್ದೇವೆ ಎಂದರು.ಈಗಾಗಲೇ ತಾವು ಇನ್‌ಫೋಸಿಸ್, ಐಬಿಂ, ಸಿಸ್ಕೋ, ಟೆಕ್ ಮಹೀಂದ್ರಾ ಸೇರಿದಂತೆ ಐಟಿ ದಿಗ್ಗಜ ಕಂಪನಿಗಳೊಂದಿಗೆ ಸಂಪರ್ಕದಲ್ಲಿರೋದಾಗಿ ಹೇಳಿದ ಡಾ. ಅಜಯ್ ಸಿಂಗ್ ಕಲಿಕೆಯಲ್ಲೇ ಕೌಶಲ್ಯ ತರಬೇತಾದವರಿಗೆ ಶೇ. 90 ರಷ್ಟು ಉದ್ಯೋಗವಕಾಶ ಲಭ್ಯವಾಗುವಂತೆ ಪ್ರಯತ್ನಿಸಲಾಗುತ್ತಿದೆ ಎಂದರು.
ಕೌಶಲ್ಯಾಭಿವೃದ್ಧಿ ನಿಗಮದ ನಿರ್ದೇಶಕ ಕಷ್ಣಕುಮಾರ್ ಮಾತನಾಡುತ್ತ ಕೆಕೆಆರ್‌ಡಿಬಿಯ ಅನುದಾನದಲ್ಲಿ ಕಲ್ಯಾಣದ 7 ಜಿಲ್ಲೆಗಳ ಯುವಕರ ಆಯ್ಕೆ, ಕಲಿಕೆ ಜೊತೆಯಲ್ಲೇ ಕೌಶಲ್ಯ ತರಬೇತಿಗೆ ಯೋಜನೆ ಸಿದ್ಧವಾಗಿದೆ. ಇದರಿಂದ ಯುವಕರಿಗೆ ಅನುಕೂಲವಾಗಲಿದೆ ಎಂದರು.6.66 ಕೋಟಿ ರಾಜ್ಯದ ಜನಸಂಖ್ಯೆಯಲ್ಲಿ ಶೇ.45 (2.99 ಕೋಟಿ) ಉದ್ಯೋಗಿಗಗಳು, ಇದರಲ್ಲಿ ಔಪಚಾರಿಕ ವಲಯದಲ್ಲಿ 24.74, ಅಪಚಾರಿಕ ವಲಯದಲ್ಲಿ ಶೇ.44.6, ಕೃಷಿಯೇತರ ವಲಯದಲ್ಲಿ ಶೇ.28.66ರಷ್ಟು ಮಂದಿ ಇದ್ದಾರೆ. ವಾರ್ಷಿಕ 1.30 ಲಕ್ಷದಷ್ಟು ಯುವಕರು ಉದ್ಯೋಗಾಕಾಂಕ್ಷಿಗಳಾಗಿ ಹೊರಬರುತ್ತಿದ್ದಾರೆ. 7ನೇ ತರಗತಿಯಿಂದ ಹಿಡಿದು ಬಿಟೆಕ್, ಎಂಟೆಕ್‌ವರೆಗಿನ ಯುವಕರನ್ನು ಕಲಿಕೆ, ಕೌಶಲ್ಯದಡಿ ತರಬೇತಿಗೆ ಒಳಪಡಿಸಲು ಕೆಕೆಆರ್‌ಡಿಬಿ ಮುಂದಾಗಿದೆ. ಮೈ ಇಂಡಿಯಾ ಸ್ಕಿಲ್ ವರದಿ ಪ್ರಕಾರ ದೇಶದಲ್ಲಿ 42,343 ಕಾಲೇಜುಗಳು, 897 ಎಐಸಿಟಿಇ ಮಾನ್ಯತೆ ಪಡೆದ ಕಾಲೇಜುಗಳಿವೆ. ವರ್ಡ್ ಇಕನಾಮಿಕ್ ಫೋರಂ ಅನುಸಾರ ದೇಶದಲ್ಲಿ ವಾರ್ಷಿಕ 1.3 ಕೋಟಿ ಜನತೆ ಉದ್ಯೋಗಾಕಾಂಕ್ಷಿಗಳಾಗಿದ್ದಾರೆಂದು ಡಾ. ಅಜಯ್ ಸಿಂಗ್ ಅಂಕಿ- ಸಂಖ್ಯೆ ಮಾಹಿತಿ ನೀಡಿದರು.