ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಟಾನ ಪ್ರಾಧಿಕಾರ ಸಭೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ನೋಂದಾಯಿಸಿದ ಸುಮಾರು 26.60 ಲಕ್ಷ ಮಹಿಳೆಯರಿಗೆ ಆರ್ಥಿಕ ಸಬಲತೆಗಾಗಿ ಪ್ರತಿ ತಿಂಗಳು 52.50 ಕೋಟಿ ರು.ಗಳನ್ನು ಸರ್ಕಾರ ಖಾತೆಗೆ ಜಮಾವಣೆ ಮಾಡುತ್ತಿದೆ ಎಂದು ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಹೇಳಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಶುಕ್ರವಾರ ನಡೆದ ರಾಜ್ಯ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಟಾನ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯಸರ್ಕಾರ ರಚನೆಗೊಂಡ ಬಳಿಕ 2023 ರ ಆಗಸ್ಟ್ ಮಾಹೆಯಿಂದ 2024 ರ ಮೇ ಮಾಹೆವರೆಗೆ ಚಿಕ್ಕಮಗಳೂರು, ಕಡೂರು, ಕೊಪ್ಪ, ಶೃಂಗೇರಿ, ಮೂಡಿಗೆರೆ, ಕಳಸ, ತರೀಕೆರೆ, ಅಜ್ಜಂಪುರ ಹಾಗೂ ನ.ರಾ.ಪುರ ತಾಲೂಕಿನಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಒಟ್ಟು 497 ಕೋಟಿ ಹಣ ಖಾತೆಗೆ ಸಂದಾಯವಾಗಿದೆ ಎಂದರು.ಜಿಲ್ಲೆಯಲ್ಲಿ ಒಟ್ಟು 280937 ರೇಷನ್ ಕಾರ್ಡ್‌ಗಳಿವೆ. ಇವುಗಳಲ್ಲಿ 266343 ಮಂದಿ ಕಾರ್ಡ್‌ದಾರರು ನೋಂದಣಿ ಮಾಡಿಸಿದ್ದು ಈ ಪೈಕಿ 260250 ಮಹಿಳೆಯರ ಖಾತೆಗೆ ಪ್ರತಿ ತಿಂಗಳು 52.50 ಕೋಟಿ ರು. ಹಣವನ್ನು ಜಮಾವಣೆ ಮಾಡಿ ಶೇ. 95 ರಷ್ಟು ಪ್ರಗತಿ ಸಾಧಿಸಿದೆ ಎಂದು ಹೇಳಿದರು.ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನೇತೃತ್ವದಲ್ಲಿ ಕುಟುಂಬದ ಯಜಮಾನಿಗೆ ಗೃಹಲಕ್ಷ್ಮೀ ಯೋಜನೆ ಒದಗಿಸಿ ಆರ್ಥಿಕ ಸಬಲರಾಗಿಸಿದ್ದಾರೆ. ಅಲ್ಲದೇ ಸಣ್ಣಪುಟ್ಟ ಖರ್ಚು, ಮಕ್ಕಳ ವಿದ್ಯಾಭ್ಯಾಸ ಹಾಗೂ ಇನ್ನಿತರೆ ಉಳಿತಾಯಕ್ಕೆ ಕಾಂಗ್ರೆಸ್ ಸರ್ಕಾರ ಭದ್ರ ಬುನಾದಿ ಹಾಕಿಕೊಟ್ಟಿದೆ ಎಂದು ತಿಳಿಸಿದರು.ಈ ನಡುವೆ ಕೆಲವು ಮಹಿಳೆಯರಿಗೆ ಖಾತೆಗೆ ಹಣ ಜಮಾವಣೆಗೊಂಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದು ಇದಕ್ಕೆ ಮೂಲಕಾರಣ ಮಹಿಳೆಯರ ಹೆಸರಿನಲ್ಲಿ ಜಿಎಸ್‌ಟಿ, ಐಟಿ ಹೊಂದಿರುತ್ತಾರೆ ಅಥವಾ ತೆರಿಗೆ ಪಾವತಿಸದೇ ಸ್ಥಗಿತ ಗೊಳಿಸಿರುವ ಕಾರಣಗಳಿಂದ ಗೃಹಲಕ್ಷ್ಮೀ ಯೋಜನೆ ಲಭ್ಯವಾಗುತ್ತಿಲ್ಲ ಎಂದು ಹೇಳಿದರು.ಗೃಹಲಕ್ಷ್ಮೀ ಯೋಜನೆ ಪಡೆಯದ ಅನೇಕ ಮಹಿಳೆಯರು ಈ ರೀತಿಯ ಸಮಸ್ಯೆಯಲ್ಲಿ ಸಿಲುಕಿದ್ದು ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ 735 ಮಂದಿಗೆ ತಡೆಯಾಗಿತ್ತು. ಈ ವರ್ಷದಲ್ಲಿ 332 ಮಂದಿ ನಿಂತಿದೆ. ಹೀಗಾಗಿ ಗೃಹಲಕ್ಷ್ಮೀ ವಂಚಿತರು ಜಿಎಸ್‌ಟಿ ಅಥವಾ ಐಟಿ ಪ್ರಾಧಿಕಾರದಿಂದ ಐಟಿ ಪಾವತಿದಾರರಲ್ಲ ಎಂಬ ಪ್ರಮಾಣ ಪತ್ರ ಸಿಡಿಪಿಒ ಕಚೇರಿಗೆ ತಲುಪಿಸಿ ದರೆ ಮುಂದಿನ ತಿಂಗಳಿಂದ ಯೋಜನೆ ಸೌಲಭ್ಯ ಪಡೆಯಬಹುದು ಎಂದರು.ಅದೇ ರೀತಿ ಜಿಲ್ಲೆಯಲ್ಲಿ ದಾಖಲೆ ಪ್ರಕಾರ 381 ಮಂದಿ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಈ ಪೈಕಿ ಜಿಲ್ಲಾಧಿಕಾರಿಯಿಂದ ಗುರುತಿನ ಚೀಟಿ ಹೊಂದಿರುವ ಫಲಾನುಭವಿಗಳು ಸಿಡಿಪಿಒ ಅರ್ಜಿ ಸಲ್ಲಿಸಿದರೆ ಗೃಹಲಕ್ಷ್ಮೀ ಸೌಲಭ್ಯ ಪಡೆಯ ಬಹುದು ಎಂದು ಹೇಳಿದರು.ಅರ್ಜಿ ಸಲ್ಲಿಕೆಗೆ ಗ್ರಾಮ ಒನ್, ಸೇವಾ ಒನ್ ಕೇಂದ್ರಗಳಲ್ಲಿ ತಾಂತ್ರಿಕ ದೋಷದಿಂದ ಸಮಸ್ಯೆಯಿರುವ ಕಾರಣ ಪ್ರತಿ ಗ್ರಾಪಂನ ಬಾಪೂಜಿ ಕೇಂದ್ರವನ್ನು ಪ್ರಾರಂಭಿಸಿದರೆ ಸುಗಮವಾಗಲಿದೆ. ಈ ನಿರ್ಣಯಗಳನ್ನು ರಾಜ್ಯಮಟ್ಟದಲ್ಲಿ ತೀರ್ಮಾನಿಸುವ ಕಾರಣ ಅಧಿಕಾರಿ ವೃಂದ ಹಾಗೂ ಪ್ರಾಧಿಕಾರದ ಆಡಳಿತ ರಾಜ್ಯ ಮಾಹಿತಿ ತಲುಪಿಸುವ ಕಾರ್ಯಕ್ಕೆ ಮುಂದಾಗುತ್ತೇವೆ ಎಂದರು.ಸಭೆಯಲ್ಲಿ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷರಾದ ಸಮೀವುಲ್ಲಾ, ಹೇಮಾವತಿ, ಸದಸ್ಯ ಬಸವರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪಿ.ಲೋಕೇಶಪ್ಪ, ಅಧಿಕಾರಿಗಳಾದ ಎಂ.ಪಿ.ದೇವಾನಂದ್, ಪಂಚಾಕ್ಷರಿ ಹಾಜರಿದ್ದರು.5 ಕೆಸಿಕೆಎಂ 6ಚಿಕ್ಕಮಗಳೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಉಪಾಧ್ಯಕ್ಷ ಸಮೀವುಲ್ಲಾ, ಪಿ. ಲೋಕೇಶಪ್ಪ, ದೇವಾನಂದ್, ಹೇಮಾವತಿ ಇದ್ದರು.