ಕನ್ನಡಪ್ರಭ ವಾರ್ತೆ ಹನೂರು ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಆಗಮಿಸಿದ್ದ 7 ಲಕ್ಷ ಭಕ್ತಾದಿಗಳಿಂದ ಆರು ದಿನಗಳ ಅವಧಿಯಲ್ಲಿ 3.24 ಕೋಟಿ ಆದಾಯ ಹರಿದು ಬಂದಿದೆ.
ವಿವಿಧ ಸೇವೆಗಳಿಂದ ಆದಾಯ: ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಎಣ್ಣೆ ಮಜ್ಜನ ಅಮಾವಾಸ್ಯೆ, ಮಹಾರಥೋತ್ಸವದ ದಿನಗಳಲ್ಲಿ ಹೆಚ್ಚಿನ ಭಕ್ತಾದಿಗಳು ಆಗಮಿಸಿ ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ ಹುಲಿ ವಾಹನ ,ರುದ್ರಾಕ್ಷಿ ಮಂಟಪೋತ್ಸವ ಬಸವ ಮಂಟಪ, ಲಾಡು ಮಾರಾಟ, ವಿವಿಧ ಸೇವೆಗಳು ಅಕ್ಕಿ ಸೇವೆ, ಮಿಶ್ರ ಪ್ರಸಾದ, ಪುದುವಟ್ಟು, ಮಾಹಿತಿ ಕೇಂದ್ರ ಹಾಗೂ ತಾಳಬೆಟ್ಟ ಭವನಗಳಿಂದ, ಪಾರ್ಕಿಂಗ್, ಕಲ್ಲುಸಕ್ಕರೆ ,ತೀರ್ಥ, ಬ್ಯಾಗ್ ವಿವಿಧ ಮೂಲಗಳ ಮಾರಾಟದಿಂದ 3,24,17,268 ರೂ ಕ್ಷೇತ್ರ ಅಭಿವೃದ್ಧಿಗೆ ಆದಾಯ ಬಂದಿದೆ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಾಹಿತಿ ಬಿಡುಗಡೆಗೊಳಿಸಿದ್ದಾರೆ.ಉತ್ಸವಗಳಿಂದ ಬಂದ ಆದಾಯ:
ಐದು ದಿನಗಳ ಅವಧಿಯಲ್ಲಿ ಮಲೆ ಮಹದೇಶ್ವರನಿಗೆ ಹರಕೆ ಹೊತ್ತ ಭಕ್ತಾದಿಗಳಿಂದ ಹಮ್ಮಿಕೊಳ್ಳಲಾಗಿದ್ದ 1787 ಬಾರಿ ಚಿನ್ನದ ರಥೋತ್ಸವ, 88 ಬಾರಿ ಬೆಳ್ಳಿ ರಥೋತ್ಸವ, 1500 ಬಾರಿ ಬಸವ ವಾಹನ, 9492 ಬಾರಿ ಹುಲಿ ವಾಹನ, 569 ಬಾರಿ ರುದ್ರಾಕ್ಷಿ ವಾಹನದ ಹರಕೆ ಸೇವೆಗಳಿಂದ 90,25,725 ರು. ಆದಾಯ ಬಂದಿದೆ.ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಮುಕ್ತಾಯ:
ಮಾ.7ರಿಂದ ಮಾ. 11ರವರೆಗೆ ನಡೆದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಯಾವುದೇ ತೊಂದರೆಯಾಗದಂತೆ ಯಶಸ್ವಿಯಾಗಿ ಹಲವು ಉತ್ಸವ ವಿಶೇಷತೆಗಳೊಂದಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳು ಪೂರ್ಣಗೊಂಡಿದೆ. ಮಹಾಶಿವರಾತ್ರಿಗೆ ಈ ಬಾರಿ ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ದೇವಸ್ಥಾನದ ಆವರಣ, ಮುಖ್ಯದ್ವಾರ ಜಡೇಕಲ್ಲು ಮಂಟಪ ಸೇರಿದಂತೆ ಇನ್ನಿತರ ಕಡೆ ವಿನೂತನ ಮಾದರಿಯಲ್ಲಿ ವಿಶೇಷವಾಗಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಧಾನ್ಯಗಳು ದೇವಾಲಯದ ಒಳಭಾಗದಲ್ಲಿ ವಿವಿಧ ಬಗೆಯ ಫಲ ಪುಷ್ಪಗಳಿಂದ ಆಕರ್ಷಣೀಯವಾಗಿ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಯಶಸ್ವಿಯಾಗಿ ನಡೆದ ಜಾತ್ರೆ ಮಹೋತ್ಸವ:15 ದಿನಗಳಿಂದ ನೂತನ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು ಮಲೆಮದೇಶ್ವರ ಬೆಟ್ಟದಲ್ಲಿ ಮೊಕ್ಕಂ ಹೂಡಿ ಅಧಿಕಾರಿಗಳು ಸಿಬ್ಬಂದಿ ಜೊತೆ ಸಭೆ ನಡೆಸಿ ಭಕ್ತರಿಗೆ ಬೇಕಾದ ಶುದ್ಧ ಕುಡಿಯುವ ನೀರು, ವಿಶೇಷ ದಾಸೋಹ ನೆರಳಿನ ವ್ಯವಸ್ಥೆ ಸೇರಿದಂತೆ, ಮಾತೃಕುಟೀರ ರಂಗಮಂದಿರದಲ್ಲಿ ಜಾನಪದ ಕಾರ್ಯಕ್ರಮಗಳು ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಿದ್ದರು. ಇದಲ್ಲದೆ ಖುದ್ದು ಸರತಿ ಸಾಲು, ಹಿರಿಯ ನಾಗರಿಕರಿಗೆ ಪ್ರತ್ಯಕ ದೇವರ ದರ್ಶನ ವ್ಯವಸ್ಥೆ ಲಾಡು ಮಾರಾಟ ಕೇಂದ್ರ ರಂಗ ಮಂದಿರ ಜನಸಂದಣಿ ಇರುವ ಕಡೆ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡು, ನಿರಂತರವಾಗಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದ್ದರಿಂದ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಜರುಗಿದೆ. ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಮುಗಿದಿದ್ದು ಮುಂದಿನ ತಿಂಗಳು ಬರುವ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಮಲೆ ಮಹದೇಶ್ವರ ಬೆಟ್ಟಕ್ಕೆ ರಾಜ್ಯದಿಂದ, ನಾನಾ ಜಿಲ್ಲೆಗಳಿಂದ ಹಾಗೂ ನೆರೆಯ ತಮಿಳುನಾಡಿನ ಭಕ್ತಾದಿಗಳು ಹೆಚ್ಚಾಗಿ ಆಗಮಿಸುವ ನಿರೀಕ್ಷೆ ಇರುವುದರಿಂದ ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.
ಪವಾಡ ಪುರುಷ ಮಲೆ ಮಹದೇಶ್ವರ ಕ್ಷೇತ್ರವನ್ನು ಉತ್ತಮ ರೀತಿಯಲ್ಲಿ ವಿನೂತನ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಧಾರ್ಮಿಕ ಸ್ಥಳವನ್ನಾಗಿ ಮಾಡಲು ಯೋಜನೆ ಹಾಕಿಕೊಂಡಿದ್ದೇನೆ. ಸಿಎಂ, ಉಸ್ತುವಾರಿ ಸಚಿವರು ಶಾಸಕರು ಹಾಗೂ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಮಾರ್ಗದರ್ಶನದಲ್ಲಿ. ಇಲ್ಲಿನ ಅಧಿಕಾರಿ ಸಿಬ್ಬಂದಿ ಸಹಕಾರದೊಂದಿಗೆ ಶ್ರೀ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡಯುವ ನಿಟ್ಟಿನಲ್ಲಿ ಸ್ವಚ್ಛತೆಗೂ ಆದ್ಯತೆ ನೀಡಲಾಗುವುದು. ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳು ಪ್ಲಾಸ್ಟಿಕ್ ತ್ಯಜಿಸಿ ಶ್ರೀ ಕ್ಷೇತ್ರವನ್ನು ಉಳಿಸಿ ಸ್ವಚ್ಛತೆಗೆ ಆದ್ಯತೆ ನೀಡಿ.ಎ.ಈ. ರಘು, ಕಾರ್ಯದರ್ಶಿ, ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಅಭಿವೃದ್ಧಿ ಪ್ರಾಧಿಕಾರ