ಕಡೂರು-ಬೀರೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದರಾಜನಾಯ್ಕ ಮಾಹಿತಿ
ಕನ್ನಡಪ್ರಭ ವಾರ್ತೆ, ಕಡೂರುಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತಾಲೂಕಿನ ಕಡೂರು ಶೈಕ್ಷಣಿಕ ವಲಯದ 2,608 ಮಕ್ಕಳು, ಬೀರೂರು ಶೈಕ್ಷಣಿಕ ವಲಯದ 1,290 ಮಕ್ಕಳು ಸೇರಿ 3,898 ಮಕ್ಕಳು ಪರೀಕ್ಷೆ ಎದುರಿಸಲಿದ್ದಾರೆ ಎಂದು ಕಡೂರು-ಬೀರೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದರಾಜನಾಯ್ಕ ತಿಳಿಸಿದರು.
ಮಾರ್ಚ್ 25 ರಿಂದ ರಾಜ್ಯಾದ್ಯಂತ ಆರಂಭವಾಗಲಿರುವ ಎಸ್ಎಸ್ಎಲ್ ಸಿ ಪರೀಕ್ಷೆ-1ರ ವೇಳಾಪಟ್ಟಿ ಏಪ್ರಿಲ್ 6 ಕ್ಕೆ ಮುಕ್ತಾಯವಾಗಲಿದೆ. ಕಡೂರು ಶೈಕ್ಷಣಿಕ ವಲಯದಲ್ಲಿ 10 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಕಡೂರು ಪಟ್ಟಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಿಜಿಎಸ್ ಕಡೂರು, ವೇದಾವತಿ ಬಾಲಿಕ ಪ್ರೌಢಶಾಲೆ ಉಳಿದಂತೆ 7 ಕೇಂದ್ರಗಳನ್ನು ಗ್ರಾಮಾಂತರ ಪ್ರದೇಶಗಳಾದ ಸಿಂಗಟಗೆರೆ, ಚೌಳಹಿರಿಯೂರು, ಪಂಚನಹಳ್ಳಿ, ಹೋಚಿಹಳ್ಳಿ, ಹೇಮಗಿರಿ, ಗಿರಿಯಾಪುರ ಮತ್ತು ಯಗಟಿ ಗ್ರಾಮದಲ್ಲಿ ತೆರೆಯಲಾಗಿದೆ.ಕಡೂರು ಶೈಕ್ಷಣಿಕ ವಲಯದಲ್ಲಿ 2,471 ಮಕ್ಕಳಲ್ಲಿ ಬಾಲಕರು 1,334, ಬಾಲಕಿಯರು 1,145 ಮಕ್ಕಳು, ಪುನರಾವರ್ತಿತ ಮತ್ತು ಖಾಸಗಿ ಅಭ್ಯರ್ಥಿಗಳು 137 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಬೀರೂರು ಶೈಕ್ಷಣಿಕ ವಲಯದಲ್ಲಿ 5 ಪರೀಕ್ಷಾ ಕೇಂದ್ರಗಳಲ್ಲಿ 623 ಬಾಲಕರು, 609 ಬಾಲಕಿಯರು ಹಾಗೂ 58 ಖಾಸಗಿ ಅಭ್ಯರ್ಥಿಗಳು ಸೇರಿ ಒಟ್ಟು 1,232 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಬೀರೂರು ಕೆಎಲ್ ಕೆ ಸರ್ಕಾರಿ ಪ್ರೌಢಶಾಲೆ ಲಿಂಗದ ಹಳ್ಳಿ ಸರ್ಕಾರಿ ಪ್ರೌಢಶಾಲೆ, ಸಖರಾಯಪಟ್ಟಣ, ದೇವನೂರು ಮತ್ತು ಜೋಡಿಹೋಚಿಹಳ್ಳಿಯಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.ಯಾವುದೇ ಪರೀಕ್ಷಾ ಅಕ್ರಮಗಳು ನಡೆಯದಂತೆ ಅಗತ್ಯಕ್ರಮ ಕೈಗೊಳ್ಳದಂತೆ ಸೂಚನೆ ನೀಡಲಾಗಿದೆ. ಮುಖ್ಯ ಅಧೀಕ್ಷಕರು, ಪ್ರಶ್ನೆ ಪತ್ರಿಕೆ ಅಭಿರಕ್ಷಕರು, ಸ್ಥಾನಿಕ ಜಾಗೃತದಳ ಅಧಿಕಾರಿಗಳು, ಮೊಬೈಲ್ ಸ್ವಾಧೀನಾಧಿಕಾರಿಗಳು ಮುಖ್ಯವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು..
18ಕೆಕೆಡಿಯು1.ಬಿಇಓ-ಸಿದ್ದರಾಜನಾಯ್ಕ