ಕನ್ನಡಪ್ರಭ ವಾರ್ತೆ ರಾಯಚೂರು
ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಡಿ.7, 8, ಮತ್ತು 9 ರಂದು ಕೃಷಿ ಮೇಳವನ್ನು ಆಯೋಜಿಸಿದ್ದು, ಹವಾಮಾನ ವೈಪರೀತ್ಯಕ್ಕೆ ಸುಸ್ಥಿರ ಕೃಷಿ ಎಂಬ ಶೀರ್ಷಿಕೆಯಡಿ ಮೂರು ದಿನಗಳ ಕಾಲ ನಡೆಯಲಿರುವ ಮೇಳದಲ್ಲಿ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳು ಹಾಗೂ ಆವಿಷ್ಕಾರಗಳ ಕುರಿತು ರೈತರಿಗೆ ಸಂಪೂರ್ಣ ಮಾಹಿತಿ ಒದಗಿಸಿಕೊಡಲಾಗುವುದು ಎಂದು ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ತಿಳಿಸಿದರು.ವಿವಿ ಆವರಣದಲ್ಲಿರುವ ಅಂತಾರಾಷ್ಟ್ರೀಯ ಅತಿಥಿ ಗೃಹದಲ್ಲಿ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಕೃಷಿ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳು, ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್, ನಬಾರ್ಡ್, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಕೃಷಿ ಪರಿಕರಗಳ ಮಾರಾಟ ಸಂಘಗಳು ಮತ್ತು ಸರ್ಕಾರೇತರ ಸಂಸ್ಥೆಗಳ ಉತ್ತಮ ಸಹಯೋಗದೊಂದಿಗೆ ಆಯೋಜಿಸಿರುವ ಕೃಷಿಮೇಳದ ಮೊದಲ ದಿನ ಕಾರ್ಯಕ್ರಮವನ್ನು ಗದಗ ಮುಂಡರಗಿ ತಾಲೂಕಿನ ಕಪ್ಪತಗುಡ್ಡದ ನಂದಿವೇರಿ ಸಂಸ್ಥಾನ ಮಠದ ಶಿವಕುಮಾರ ಸ್ವಾಮೀಜಿಗಳು ಗೋ ಪೂಜೆಯನ್ನು ನೆರವೇರಿಸು ವುದರ ಮುಖಾಂತರ ಉದ್ಘಾಟಿಸಲಿದ್ದು, ನಂತರ ವೇದಿಕೆ ಕಾರ್ಯಕ್ರಮದಲ್ಲಿ ಆಶೀರ್ವಚನವನ್ನು ನೀಡಲಿದ್ದಾರೆ ಎಂದರು.ಮೇಳದ ಎರಡನೇ ದಿನವಾದ ಡಿ.8ರಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಜೀವನೋಪಾಯ ಇಲಾಖೆಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಉದ್ಘಾಟಿಸಲಿದ್ದು, ವಸ್ತು ಪ್ರದರ್ಶನವನ್ನು ಕೃಷಿ ಸಚಿವ ಹಾಗೂ ವಿವಿ ಸಹ ಕುಲಾಧಿಪತಿ ಎನ್.ಚಲುವರಾಯಸ್ವಾಮಿ ಅವರು ನೆರವೇರಿಸಲಿದ್ದಾರೆ. ವಿವಿಧ ಇಲಾಖೆಗಳ ಸಚಿವರು,ಶಾಸಕರು, ಎಂಎಲ್ಸಿ, ಆಡಳಿತ ಮಂಡಳಿ ಸದಸ್ಯರು, ಜನಪ್ರತಿನಿಧಿಗಳು, ರೈತ ಮುಖಂಡರು, ಅಧಿಕಾರಿ ವರ್ಗದವರು ಭಾಗವಹಿಸಲಿದ್ದಾರೆ ಎಂದರು.ಮೇಳಕ್ಕೆ ಭೇಟಿ ನೀಡುವ ರೈತರು ‘ಸುಸ್ಥಿರ ಕೃಷಿ’ ಪರಿಕಲ್ಪನೆಯನ್ನು ಅಳವಡಿಸಿ ಸಮಗ್ರವಾಗಿ ಅಭಿವೃದ್ಧಿ ಹೊಂದಲು ಪ್ರೇರಣಾದಾಯಕ ವಾಗಬಲ್ಲ ಈ ಮೇಳವು ಅತ್ಯಂತ ವೈಶಿಷ್ಟ್ಯವಾಗಿದೆ. ಸಮಗ್ರ ಕೃಷಿಯಲ್ಲಿ ಅತ್ಯುತ್ತಮ ಸಾಧನೆಗೈದ ಪ್ರಗತಿಪರ ರೈತರನ್ನು ಆಹ್ವಾನಿಸಲಾ ಗುತ್ತಿದ್ದು, ಅವರೊಂದಿಗೆ ಸಾವಯವ ಹಾಗೂ ನೈಸರ್ಗಿಕ ಕೃಷಿ, ಸಿರಿಧಾನ್ಯಗಳ ಉತ್ಪಾದನೆ ಮತ್ತು ಸಂಸ್ಕರಣೆ, ‘ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ರೈತರಿಂದ ಸುಧಾರಣೆಗೊಂಡ ಕೌಶಲ್ಯಪೂರ್ಣ ಕ್ರಮಗಳ ಪದ್ಧತಿಗಳು, ಹೈನುಗಾರಿಕೆ, ಮೀನುಗಾರಿಕೆ ಮತ್ತು ಕೃಷಿ ಯಾಂತ್ರೀಕರಣ, ನೀರಾವರಿ, ಜಲಸಂರಕ್ಷಣೆ, ಹವಾಮಾನ ವೈಪರೀತ್ಯಗಳ ಬಗ್ಗೆ ವೈವಿದ್ಯ ಅನುಭವಗಳನ್ನು ರೈತರಿಂದ ರೈತರಿಗಿನ ಕಾರ್ಯಕ್ರಮದಡಿ ಗೋಷ್ಠಿಗಳಲ್ಲಿ ಭಾಗವಹಿಸುವ ಮೂಲಕ ಪಡೆಯಬಹುದಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಅತ್ಯುತ್ತಮ ಸಾಧನೆಗೈದ 7 ಶ್ರೇಷ್ಠ ಕೃಷಿಕರನ್ನು ಹಾಗೂ 7 ಶ್ರೇಷ್ಠ ಕೃಷಿ ಮಹಿಳೆಯರನ್ನು ಗುರುತಿಸಿ ಈ ಕೃಷಿ ಮೇಳದಲ್ಲಿ ಪ್ರಶಸ್ತಿ ಫಲಕದೊಂದಿಗೆ ಗೌರವಿಸಿ ಸನ್ಮಾನಿಸಲಾಗುವುದು.ಮೇಳದಲ್ಲಿ ಸುಧಾರಿತ ತಂತ್ರಜ್ಞಾನಗಳ ಪ್ರಸ್ತುತಿಗಳು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ 240 ಸುಸಜ್ಜಿತ ಮಳಿಗೆಗಳಲ್ಲಿ ಅನಾವರಣ ಗೊಳ್ಳಲಿವೆ. ಕಲ್ಯಾಣ ಕರ್ನಾಟಕ ಹಾಗೂ ರಾಜ್ಯದ ಇತರೆ ಭಾಗಗಳಿಂದ ಸುಮಾರು 3 ರಿಂದ 4 ಲಕ್ಷ ರೈತಬಾಂಧವರು ಈ ಕೃಷಿ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.ವಿವಿಯ ಸಂಶೋಧನಾ ನಿರ್ದೇಶಕ ಡಾ.ಬಿ.ಕೆ ದೇಸಾಯಿ ಮಾತನಾಡಿ, ಕೃಷಿ ವಿಜ್ಞಾನಗಳ ವಿವಿಯಲ್ಲಿ ಹಲವಾರು ಆವಿಷ್ಕಾರಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ 54 ಹೊಸ ತಳಿಯ ಬೀಜಗಳನ್ನು ಸಂಶೋಧನೆ ಮಾಡಲಾಗಿದೆ. ಇ-ಸ್ಯಾಪ್ ತಂತ್ರಜ್ಞಾನವನ್ನು ಪ್ರಥಮವಾಗಿ ರಾಯಚೂರು ವಿವಿಯಲ್ಲಿ ಅವಿಷ್ಕಾರಗೊಳಿಸಲಾಗಿದೆ. ಈ ತಂತ್ರಜ್ಞಾನವನ್ನು ರಾಜ್ಯದ ಎಲ್ಲ ಕೃಷಿ ವಿವಿಗಳ ಅಳವಡಿಸಿಕೊಳ್ಳಲಾಗುತ್ತಿದೆ. ಸಿರಿಧಾನ್ಯ ಮೇಳದ ನಡೆಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸಿರಿಧಾನ್ಯ ಅಭಿವೃದ್ಧಿಗಾಗಿ 25 ಕೋಟಿ ಅನುದಾನ ಕಲ್ಪಿಸಿದೆ. ಪ್ರಯೋಗಾಲಯದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ವಿವಿ ವಿಸ್ತರಣಾಧಿಕಾರಿ ಡಾ.ಎನ್.ಶಿವಶಂಕರ್, ಸ್ನಾತಕೋತ್ತರ ಡೀನ್ ಡಾ.ಗುರುರಾಜ ಸುಂಕದ, ಡಾ.ಬಸವರಾಜ ಹುಲ್ಗೂರು ಸೇರಿ ವಿವಿಧ ವಿಭಾಗಗಳ ಮುಖ್ಯಸ್ಥರು, ಅಧಿಕಾರಿ, ಸಿಬ್ಬಂದಿ ವರ್ಗದವರು ಇದ್ದರು.