ಕನ್ನಡಪ್ರಭ ವಾರ್ತೆ ಬೆಂಗಳೂರು
ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್’ ನಗರದ ಬಸವನಗುಡಿಯ ವಿದ್ಯಾಪೀಠ ಸರ್ಕಲ್‌ನಲ್ಲಿರುವ ಡೊಂಕಲ ಮೈದಾನದಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ಬಸವನಗುಡಿ ಸಂಭ್ರಮ’ ಅದ್ಧೂರಿಯಾಗಿ ತೆರೆ ಕಂಡಿದೆ.
ಕೊನೆಯ ದಿನವಾದ ಭಾನುವಾರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಾವಿರಾರು ಜನತೆ ಪಾಲ್ಗೊಂಡು ವಾರಾಂತ್ಯವನ್ನು ಸಂಭ್ರಮಿಸಿದರು.
ಬೆಳಗ್ಗೆಯಿಂದಲೇ ವಿವಿಧ ಮನರಂಜನೆ ಕಾರ್ಯಕ್ರಮಗಳು ನಡೆದವು. ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ, ಬೆಂಕಿ ರಹಿತ ಅಡುಗೆ ಸ್ಪರ್ಧೆಯಲ್ಲಿ ಹಲವರು ಪಾಲ್ಗೊಂಡಿದ್ದರು.
ಮಧ್ಯಾಹ್ನದ ಬಳಿಕ ನಡೆದ ‘ಅಡುಗೆ ಮಹಾರಾಣಿ’ ಸ್ಪರ್ಧೆಯ ಫಿನಾಲೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಹಿಳೆಯರು ಗೆದ್ದು ಬೀಗಿದರು. ಬಳಿಕ ನಡೆದ ‘ಸೇವ್ ನೇಚರ್ ಸೇವ್ ವರ್ಲ್ಡ್’ ಪರಿಕಲ್ಪನೆಯ ಚಿತ್ರಕಲಾ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಪಾಲ್ಗೊಂಡು ಕಲಾಕೃತಿ ರಚಿಸಿ ಸಂಭ್ರಮಿಸಿದರು.
ಸಂಜೆ ಸ್ಪರ್ಧೆಗಳ ವಿಜೇತರು ಹಾಗೂ ಬಸವನಗುಡಿಯ ಸಾಧಕರಿಗೆ ಸನ್ಮಾನಿಸಲಾಯಿತು. ವಿಜೇತರಿಗೆ ಸಂಸದ ತೇಜಸ್ವಿ ಸೂರ್ಯ ಬಹುಮಾನ ವಿತರಣೆ ಮಾಡಿದರು. ಚಿಕ್ಕ ವಯಸ್ಸಲ್ಲಿ ತಾವು ನೋಡಿದಂತಹ ಬಸವನಗುಡಿ ಹೇಗಿತ್ತು ಎನ್ನುವುದನ್ನು ಅವರು ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ಈ ಎಲ್ಲ ಕಾರ್ಯಕ್ರಮಗಳನ್ನು ಸಂಭ್ರಮಿಸಿದ ಜನರು ಇಂತಹ ಕಾರ್ಯಕ್ರಮಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ಏರ್ಪಡಿಸಬೇಕು ಎಂದು ಆಶಿಸಿದರು.
ಇಂಡಿಯನ್ ಫೋಕ್ ಮ್ಯೂಸಿಕ್ ಬ್ಯಾಂಡ್ ‘ಜಂಭೆ ಝಲಕ್’ ಬಾಲು ಹಾಗೂ ತಂಡದವರು ನೀಡಿದ ವಾದ್ಯ ವಾದನಕ್ಕೆ ಪ್ರೇಕ್ಷಕರು ಮನಸೋತರು. ಅಷ್ಟೇ ಅಲ್ಲದೆ ನಂತರ ನಡೆದ ನೃತ್ಯ ಹಾಗೂ ಮನರಂಜನಾ ಕಾರ್ಯಕ್ರಮಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.
ಫುಡ್ ಕೋರ್ಟ್‌ನಲ್ಲಿನ ದೇಸಿ ಖಾದ್ಯ ದೋಸೆ, ಪುಳಿಯೊಗರೆ, ಇಡ್ಲಿ, ಅವರೆ ಬೇಳೆ ಉಪ್ಪಿಟ್ಟು, ದೋಸೆ, ಬಜ್ಜಿಗಳನ್ನು ಸವಿದು ಖುಷಿಪಟ್ಟರು. ಅನೇಕರು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿ ಕೊಂಡೊಯ್ದರು.
ನಾನು ಬಸವನಗುಡಿಯ ಹುಡುಗ, ಕಾಲೇಜಿಗೆ ಹೋಗುವಾಗ ಬಸವನಗುಡಿಯ ಚಿಕ್ಕ ಚಿಕ್ಕ ಹೋಟೆಲ್‌ಗಳಲ್ಲಿ ತಿಂಡಿ ಸವಿದಿದ್ದೇನೆ. ಹಾಗೆಯೇ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಒಳ್ಳೆ ಕಾರ್ಯಕ್ರಮ ಹಾಗೂ ನ್ಯೂಸ್ ಕೊಡ್ತಾ ಇದ್ದಾರೆ. -ತೇಜಸ್ವಿ ಸೂರ್ಯ, ಸಂಸದ.