ಜಿಲ್ಲೆಯಲ್ಲಿ 35 ದತ್ತಿಗಳು ಸ್ಥಾಪನೆಯಾಗಿವೆ

KannadaprabhaNewsNetwork | Published : Jan 11, 2025 12:45 AM

ಸಾರಾಂಶ

1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾದಾಗಿನಿಂದ ಹಿಡಿದು ಇಲ್ಲಿಯವರೆಗೂ ಆಸಕ್ತ ಕನ್ನಡಿಗರು ತಮಗಿಷ್ಟವಾದ ವಿಷಯದಲ್ಲಿ ಉಪನ್ಯಾಸ ನೀಡಲು ದತ್ತಿ ದಾನಿಗಳಿಂದ ಪರಿಷತ್ತು 3 ಸಾವಿರ ದತ್ತಿಗಳನ್ನು ಸ್ಥಾಪಿಸಿದೆ. ಅದರಲ್ಲಿ 35 ದತ್ತಿಗಳು ತುಮಕೂರು ಜಿಲ್ಲೆಯಲ್ಲಿ ಸ್ಥಾಪನೆಗೊಂಡಿವೆ. ಅದನ್ನು ಮತ್ತಷ್ಟು ಹೆಚ್ಚಿಸಲು ದಾನಿಗಳು ಮುಂದೆ ಬರಬೇಕಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ನುಡಿದರು.

ಕನ್ನಡಪ್ರಭ ವಾರ್ತೆ, ತುಮಕೂರು1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾದಾಗಿನಿಂದ ಹಿಡಿದು ಇಲ್ಲಿಯವರೆಗೂ ಆಸಕ್ತ ಕನ್ನಡಿಗರು ತಮಗಿಷ್ಟವಾದ ವಿಷಯದಲ್ಲಿ ಉಪನ್ಯಾಸ ನೀಡಲು ದತ್ತಿ ದಾನಿಗಳಿಂದ ಪರಿಷತ್ತು 3 ಸಾವಿರ ದತ್ತಿಗಳನ್ನು ಸ್ಥಾಪಿಸಿದೆ. ಅದರಲ್ಲಿ 35 ದತ್ತಿಗಳು ತುಮಕೂರು ಜಿಲ್ಲೆಯಲ್ಲಿ ಸ್ಥಾಪನೆಗೊಂಡಿವೆ. ಅದನ್ನು ಮತ್ತಷ್ಟು ಹೆಚ್ಚಿಸಲು ದಾನಿಗಳು ಮುಂದೆ ಬರಬೇಕಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ನುಡಿದರು.ಅವರು ತುಮಕೂರು ನಗರದ ರೇಣುಕಾ ವಿದ್ಯಾಪೀಠ ಪರವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕ.ಸಾ.ಪ. ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.ಸ್ವಾತಂತ್ರ್ಯ ಹೋರಾಟಗಾರ ಆರ್.ಎಸ್.ಆರಾಧ್ಯ ದತ್ತಿ ಉಪನ್ಯಾಸ ನೀಡಿದ ಇತಿಹಾಸ ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ, ಆರಂಭದಿಂದ ಕೊನೆಯವರೆಗೂ ಬ್ರಿಟಿಷ್ ಆಡಳಿತದ ವಿರುದ್ಧ ಯಾವುದೇ ರೀತಿಯ ಬಂಡಾಯಗಳಾಗಲೀ ಅಥವಾ ಹಿಂಸಾತ್ಮಕ ಹೋರಾಟಗಳಾಗಲೀ ನಡೆಯದೆ ಮಹಾತ್ಮ ಗಾಂಧೀಜಿಯವರ ನಿರ್ದೇಶನದಂತೆ ಚಳುವಳಿಗಳನ್ನು ಸಂಘಟಿಸಿರುವುದು ಈ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ವಿಶೇಷವಾಗಿದೆ ಎಂದರು.ಹಿಂಸಾತ್ಮಕ ಚಳುವಳಿಗಳನ್ನು ಮಾಡಿದರೆ ತಮ್ಮದೇ ಮಹಾರಾಜರ ವಿರುದ್ಧವೇ ಮಾಡಿದಂತಾಗುತ್ತದೆ ಎಂದು ನಂಬಿದ್ದ ತುಮಕೂರಿನ ಜನತೆ ಆರ್.ಎಸ್.ಆರಾಧ್ಯರಂತಹ ಯುವ ಹೋರಾಟಗಾರರ ಮುಂದಾಳತ್ವದಲ್ಲಿ ಅಸ್ಪೃಶ್ಯತೆಯ ವಿರುದ್ಧ ಹಾಗೂ ಪಾನ ನಿರೋದ ಸ್ವದೇಶಿ ಚಳುವಳಿಯಲ್ಲಿ ಪಾಲ್ಗೊಂಡರು. ಅನೇಕ ಬಾರಿ ಜೈಲುವಾಸ ಅನುಭವಿಸಿ ಬಂದಿದ್ದ ಆರ್.ಎಸ್.ಆರಾಧ್ಯ 1947ರಲ್ಲಿ ಮೈಸೂರು ಚಲೋ ಚಳುವಳಿಯನ್ನು ಸಂಘಟಿಸಿ ಅಹಿಂಸಾತ್ಮಕವಾಗಿ ಹೋರಾಟ ನಡೆಯುತ್ತಿದ್ದಾಗ ಏಕಾಏಕಿ ರೊಚ್ಚಿಗೆದ್ದ ಗುಂಪಿನ ಮೇಲೆ ಪೊಲೀಸರು ಗುಂಡು ಹಾರಿಸಿ ಮೂರುಜನ ಮರಣ ಹೊಂದಿದ್ದು ಈ ಜಿಲ್ಲೆಯ ಹೋರಾಟದಲ್ಲಿ ಕಪ್ಪುಚುಕ್ಕೆಯಾಗಿ ಉಳಿದಿದೆ ಎಂದರು.ಜಿಲ್ಲಾ ಲೇಖಕಿಯರ ಸಮ್ಮೇಳನ ದತ್ತಿ ಉಪನ್ಯಾಸದಲ್ಲಿ ಮಹಿಳಾ ಸಾಹಿತ್ಯ ಪರಂಪರೆ ಕುರಿತು ಉಪನ್ಯಾಸ ನೀಡಿದ ಸಿ.ಎಸ್.ಶ್ವೇತಾ, ಮಹಿಳಾ ಸಾಹಿತ್ಯ ಪರಂಪರೆಯ ಆರಂಭ ಹನ್ನೆರಡನೇ ಶತಮಾನದ ಅಕ್ಕಮಹಾದೇವಿ ನೇತೃತ್ವದ 35 ಜನ ವಚನಕಾರ್ತಿಯರು, ಅಲ್ಲಿಂದ ಇಲ್ಲಿಯವರೆಗೂ ಸಾವಿರಾರು ಮಹಿಳೆಯರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರೂ ಆ ಸಾಹಿತ್ಯದ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯದೇ ಇರುವುದು ವಿಷಾದನೀಯ ಎಂದರು.ತುಮಕೂರು ಜಿಲ್ಲೆಯಲ್ಲಿ ಹಾಗಲವಾಡಿ ರಾಜವಂಶಕ್ಕೆ ಸೇರಿ 17ನೇ ಶತಮಾನದಲ್ಲಿ ಜೀವಿಸಿದ್ದ ಮುದಿಯಪ್ಪನಾಯಕನ ಮಗಳು ಈ ಜಿಲ್ಲೆಯ ಮಹಿಳಾ ಸಾಹಿತ್ಯದ ಮೊದಲಿಗಳಾಗಿದ್ದು, ಅವಳು ಸ್ವರ ವಚನಗಳನ್ನು ರಚಿಸುವ ಮೂಲಕ ಮಹಿಳಾ ಸಾಹಿತ್ಯಕ್ಕೆ ತಿರುವನ್ನು ನೀಡಿದಳು. ಸ್ವಾತಂತ್ರ್ಯೋತ್ತರದ ಈ ಜಿಲ್ಲೆಯಲ್ಲಿ ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಾದಂಬರಿ, ಹಾಸ್ಯ, ಕಥೆ, ಕವನ, ವಿಮರ್ಶೆ, ಜೀವನಚರಿತ್ರೆ ಮೊದಲಾದ ಕ್ಷೇತ್ರಗಳಲ್ಲಿ ಸಾಹಿತ್ಯ ರಚನೆ ಮಾಡುತ್ತಿರುವುದು ಹರ್ಷದಾಯಕ ಸಂಗತಿ ಎಂದರು.ರೇಣುಕಾವಿದ್ಯಾಪೀಠ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಚಿದಾನಂದ್ ಅಧ್ಯಕ್ಷತೆ ವಹಿಸಿದ್ದರು. ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ಉಪಸ್ಥಿತರಿದ್ದರು. ತುಮಕೂರು ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

Share this article