ಪಿಎಚ್‌ಡಿ ಪದವಿ ಪ್ರವೇಶಕ್ಕೂ 371 ಜೆ ಮೀಸಲು ಅನ್ವಯ

KannadaprabhaNewsNetwork |  
Published : Dec 12, 2023, 12:45 AM IST
371 J reservation also applicable for admission to Ph.D | Kannada Prabha

ಸಾರಾಂಶ

ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌ಡಿ ಪದವಿ ಪ್ರವೇಶ ನೀಡುವ ಸಂದರ್ಭದಲ್ಲೂ 371 ಜೆ ವಿಶೇಷ ಸ್ಥಾನಮಾನದಡಿ ಕಲ್ಯಾಣ ಕರ್ನಾಟಕ ಭಾಗದ ವಿವಿಗಳಲ್ಲಿ ಶೇ.70 ಹಾಗೂ ರಾಜ್ಯದ ಇತರ ವಿವಿಗಳಲ್ಲಿ ಶೇ.8 ರಷ್ಟು ಸ್ಥಾನವನ್ನು ಈ ಭಾಗದ (ಕಲ್ಯಾಣ ಕರ್ನಾಟಕ) ವಿದ್ಯಾರ್ಥಿಗಳಿಗೆ ನೀಡಬೇಕು. ಈ ಕುರಿತು ಇದ್ದ ಗೊಂದಲಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಅವರು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ವಿಧಾನ ಪರಿಷತ್‌ ಸದಸ್ಯೆ ಹೇಮಲತಾ ನಾಯಕ ಕೇಳಿದ ಪ್ರಶ್ನೆಗೆ ಸಚಿವರು ಈ ಉತ್ತರ ನೀಡುವ ಮೂಲಕ ಗೊಂದಲ ನಿವಾರಿಸಿದ್ದಾರೆ.

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌ಡಿ ಪದವಿ ಪ್ರವೇಶ ನೀಡುವ ಸಂದರ್ಭದಲ್ಲೂ 371 ಜೆ ವಿಶೇಷ ಸ್ಥಾನಮಾನದಡಿ ಕಲ್ಯಾಣ ಕರ್ನಾಟಕ ಭಾಗದ ವಿವಿಗಳಲ್ಲಿ ಶೇ.70 ಹಾಗೂ ರಾಜ್ಯದ ಇತರ ವಿವಿಗಳಲ್ಲಿ ಶೇ.8 ರಷ್ಟು ಸ್ಥಾನವನ್ನು ಈ ಭಾಗದ (ಕಲ್ಯಾಣ ಕರ್ನಾಟಕ) ವಿದ್ಯಾರ್ಥಿಗಳಿಗೆ ನೀಡಬೇಕು.

ಈ ಕುರಿತು ಇದ್ದ ಗೊಂದಲಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಅವರು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ವಿಧಾನ ಪರಿಷತ್‌ ಸದಸ್ಯೆ ಹೇಮಲತಾ ನಾಯಕ ಕೇಳಿದ ಪ್ರಶ್ನೆಗೆ ಸಚಿವರು ಈ ಉತ್ತರ ನೀಡುವ ಮೂಲಕ ಗೊಂದಲ ನಿವಾರಿಸಿದ್ದಾರೆ.

ಸರ್ಕಾರದಲ್ಲಿಯೇ ದ್ವಂದ್ವ:ವಿವಿಯಲ್ಲಿ 371 ಜೆ ಅಡಿ ಮೀಸಲಾತಿ ನೀಡಲು ಮೀನಮೇಷ ಎಣಿಸಲಾಗುತ್ತಿದೆ. ಒಂದಿಲ್ಲೊಂದು ಕಾರಣ ಮುಂದೆ ಮಾಡಿ ಸಂವಿಧಾನದಡಿ ನೀಡಲಾದ ಮೀಸಲಾತಿಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ವಿವಿ ನೀಡುವ ಪಿಎಚ್‌ಡಿಯಲ್ಲೂ ಮೀಸಲಾತಿ ನೀಡಬೇಕಾಗಿತ್ತು. ಆದರೆ, ಹೈದ್ರಾಬಾದ್ ಕರ್ನಾಟಕ ವಿಶೇಷ ಕೋಶದ ಕರ್ನಾಟಕ ಸರ್ಕಾರದ ಅಧೀನ ಕಾರ್ಯದರ್ಶಿ ವಿ. ಅಕ್ಕಮಹಾದೇವಿ 2020ರ ಫೆಬ್ರವರಿ 14ರಂದು ಪದವಿ, ಸ್ನಾತಕೋತ್ತರ ಪದವಿಗೆ 371 ಜೆ ಮೀಸಲಾತಿ ನೀಡುವಂತೆ ಪಿಎಚ್ಡಿ ಪದವಿಗೂ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟವಾಗಿ ಆದೇಶಿಸಿದ್ದರು.ಇದೇ ಆದೇಶ ಮುಂದಿಟ್ಟುಕೊಂಡು ವಿವಿಗಳು ಪಿಎಚ್‌ಡಿಯಲ್ಲಿ 371 ಜೆ ಮೀಸಲಾತಿ ನೀಡಲಿಲ್ಲ. ಈಗ ವಿಪ ಸದಸ್ಯೆ ಹೇಮಲತಾ ನಾಯಕ ಈ ಕುರಿತು ಪ್ರಶ್ನೆ ಮಾಡಿದ್ದಕ್ಕೆ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಉತ್ತರಿಸಿದ್ದು, 371 ಜೆ ಮೀಸಲಾತಿ ಅನ್ವಯ ಪಿಎಚ್‌ಡಿಗೂ ಸ್ಥಾನ ನಿಗದಿ ಮಾಡಬೇಕು ಎಂದಿದ್ದಾರೆ.

ಪಿಎಚ್‌ಡಿ ಪದವಿ ನೀಡುವಲ್ಲಿ 371 ಜೆ ಮೀಸಲಾತಿ ಉಲ್ಲಂಘನೆಯಾಗಿದೆಯಲ್ಲ, ಇದು ಸರ್ಕಾರದ ಗಮನಕ್ಕೆ ಬಂದಿದೆಯಾ? ಈ ಕುರಿತು ರಾಜ್ಯ ಸರ್ಕಾರ ವಿವಿಗಳಿಗೆ ಯಾವುದೇ ಆದೇಶ ಮಾಡಿಲ್ಲ. 371 ಜೆ ಸ್ಥಾನಮಾನ ನೀಡದಿರಲು ಕಾರಣವೇನು ಎನ್ನುವ ಪ್ರಶ್ನೆ ಉತ್ತರಿಸಿದ ಸಚಿವರು, ರಾಜ್ಯದ ಎಲ್ಲ ವಿವಿಗಳಿಗೆ 2014ರಲ್ಲೇ ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದೆ. ಸ್ಥಳೀಯರಿಗೆ ಶೇ.70 ಪ್ರವೇಶಾತಿ ಮೀಸಲಾತಿ, ರಾಜ್ಯವಾರು ವಿವಿಗಳಲ್ಲಿ ಶೇ.8 ಮೀಸಲಾತಿಗೆ ಅವಕಾಶ ಕಲ್ಪಿಸಬೇಕೆಂದು ಸ್ಪಷ್ಟವಾಗಿ ತಿಳಿಸಲಾಗಿದೆ ಎಂದರು.ಹೀಗಾಗಿ, ಕಲ್ಯಾಣ ಕರ್ನಾಟಕ ಭಾಗದಲ್ಲಿನ ವಿವಿಗಳಲ್ಲಿ ಸ್ಥಳೀಯರಿಗೆ ಪಿಎಚ್ಡಿಗೆ ಶೇ.70 ಸ್ಥಾನಗಳು ಮತ್ತು ಇತರೆ ಭಾಗಗಳ ವಿವಿಗಳಲ್ಲಿ ಶೇ.8 ಸ್ಥಾನಗಳು ಲಭ್ಯವಾಗಲಿವೆ.ಅನ್ಯಾಯಕ್ಕೆ ಯಾರು ಹೊಣೆ?:

ಸರ್ಕಾರದ ಆದೇಶ ಇಷ್ಟು ಸ್ಪಷ್ಟವಾಗಿದ್ದರೂ ಕಳೆದ 10 ವರ್ಷಗಳಿಂದ ಆಗುತ್ತಿರುವ ಅನ್ಯಾಯಕ್ಕೆ ಯಾರು ಹೊಣೆ? ಹೈದ್ರಾಬಾದ್ ಕರ್ನಾಟಕ 371 ಜೆ ಕೋಶದಿಂದಲೇ ಅನ್ಯಾಯವಾದರೆ ಹೇಗೆ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ.

ಹೋರಾಟ ಅನಿವಾರ್ಯ:

371 ಜೆ ಸ್ಥಾನಮಾನದಡಿ ಪಿಎಚ್‌ಡಿಯಲ್ಲಿಯೂ ಮೀಸಲಾತಿಗೆ ಅವಕಾಶ ಇದ್ದರೂ ಇದುವರೆಗೂ ತಪ್ಪಾಗಿ ಅರ್ಥೈಸಿ ಅನ್ಯಾಯ ಮಾಡಲಾಗಿದೆ. ಸರ್ಕಾರಕ್ಕೆ ಈ ಬಗ್ಗೆ ಅರಿವಿಲ್ಲದೆಯೇ ಇಂಥ ತಪ್ಪು ಆಯಿತೆ? ಆಗಿರುವ ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಹೈ-ಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್ ಉಸ್ತಾದ ಹೇಳಿದರು. ಮೀಸಲಾತಿ ದೊರೆಯಲಿ: 371 ಜೆ ಅಡಿ ಪಿಎಚ್‌ಡಿಯಲ್ಲಿ ಮೀಸಲು ಸೌಲಭ್ಯ ಇದ್ದರೂ ಅದನ್ನು ತಪ್ಪಾಗಿ ಅರ್ಥೈಸಿ ಅನ್ಯಾಯ ಮಾಡಲಾಗಿದೆ. ಇದನ್ನು ವಿಧಾನಸಭೆಯಲ್ಲಿ ಪ್ರಶ್ನಿಸಿದಾಗ ಸತ್ಯ ಬೆಳಕಿಗೆ ಬಂದಿದೆ. ಇನ್ನಾದರೂ ಪಿಎಚ್‌ಡಿಗೆ 371 ಜೆ ಮೀಸಲಾತಿ ದೊರೆಯುವಂತಾಗಲಿ ಎಂದು ವಿಪ ಸದಸ್ಯ ಹೇಮಲತಾ ನಾಯಕ ಹೇಳಿದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ