371(ಜೆ) ತಿದ್ದುಪಡಿಯಾಗಿ ಹತ್ತು ವರ್ಷಗಳು ಕಳೆದರೂ ಅನ್ಯಾಯ ಮುಂದುವರಿಕೆ

KannadaprabhaNewsNetwork | Published : Jul 17, 2024 12:45 AM

ಸಾರಾಂಶ

371ಜೆ ಸಮರ್ಪಕ ಅನುಷ್ಠಾನ ಏನು? ಏಕೆ? ಹೇಗೆ? ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಎಸ್. ಪನ್ನರಾಜ್ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಕಲ್ಯಾಣ ಕರ್ನಾಟಕಕ್ಕೆ 371ನೇ (ಜೆ) ಸಂವಿಧಾನದಲ್ಲಿ ತಿದ್ದುಪಡಿಯಾಗಿ ಜಾರಿಗೆ ಬಂದು ಹತ್ತು ವರ್ಷಗಳಾದವು. ಆದರೆ, ಅದರ ಅನುಷ್ಠಾನದಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಹೈದರಾಬಾದ್ ಕರ್ನಾಟಕದ ಹೋರಾಟ ಸಮಿತಿಯ ಅಧ್ಯಕ್ಷ ಎಸ್. ಪನ್ನರಾಜ್ ಬೇಸರ ವ್ಯಕ್ತಪಡಿಸಿದರು.

ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರ ವಿಭಾಗಗಳು ಆಯೋಜಿಸಿದ್ದ ‘371 (ಜೆ) ಸಮರ್ಪಕ ಅನುಷ್ಠಾನ ಏನು? ಏಕೆ? ಹೇಗೆ? ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಹಳ ಮುಖ್ಯವಾಗಿ ಶಿಕ್ಷಣ, ಉದ್ಯೋಗ ಆರೋಗ್ಯ ಕ್ಷೇತ್ರಗಳಲ್ಲಿ ಆಗುವ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಆರಂಭದಲ್ಲಿ ಹೈದರಾಬಾದ್ ಕರ್ನಾಟಕದ ವ್ಯಾಪ್ತಿಗೆ ಐದು ಜಿಲ್ಲೆಗಳನ್ನು ಮಾತ್ರ ಸೇರಿಸಲಾಗಿತ್ತು. ನಂತರ ಹೋರಾಟದ ಪ್ರತಿಫಲವಾಗಿ ಬಳ್ಳಾರಿಯನ್ನು ಸೇರಿಸಲಾಯಿತು. ಈ ಹೊತ್ತಿಗೂ ಕೆಲವು ಜಿಲ್ಲೆಯವರಿಗೆ ಬಳ್ಳಾರಿಯನ್ನು 371 ನೇ(ಜೆ) ವ್ಯಾಪ್ತಿಗೆ ಸೇರಿಸಿರುವುದು ಇಷ್ಟವಿಲ್ಲ. ಇದರ ವಿರುದ್ಧವು ಹೋರಾಟಗಳಾದವು ಎಂದು ನೆನಪಿಸಿಕೊಂಡರು.

ಅಭಿವೃದ್ಧಿ ಕಲ್ಪನೆಯನ್ನು ಸಂವಿಧಾನದ ಹಕ್ಕಾಗಿ ಸೇರಿಸಿದ ಶ್ರೇಯಸ್ಸು ಹಿರಿಯ ರಾಜಕೀಯ ಮುತ್ಸದ್ಧಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಲ್ಲುತ್ತದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಮಿತಿಗೆ ಕೇಂದ್ರ ಸರ್ಕಾರದಿಂದ ಇದುವರೆಗೂ ಸಮರ್ಪಕವಾಗಿ ಹಣ ಬಿಡುಗಡೆಯಾಗದೆ ಇರುವುದು ದುರಂತದ ಸಂಗತಿ ಎಂದು ವಿಷಾದಿಸಿದರು.

ಪ್ರಸ್ತುತ ಅನುಷ್ಠಾನದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ನಾವೆಲ್ಲರೂ ಧ್ವನಿ ಎತ್ತದಿದ್ದರೆ ಈ ಭಾಗದ ಜನ ಸಾಕಷ್ಟು ಅವಕಾಶಗಳಿಂದ ವಂಚಿತರಾಗುತ್ತಾರೆ ಎಂದು ಎಚ್ಚರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಹೊನ್ನೂರಾಲಿ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಗಬೇಕಿದ್ದ 371ನೇ ಜೆ ಯಶಸ್ಸಿನ ಹಿಂದೆ ಅನೇಕ ಹೋರಾಟಗಳಿವೆ. ಇದು ಸಾಮಾಜೀಕರಣ ಮತ್ತು ನಮ್ಮ ಪ್ರಜ್ಞೆಯ ಭಾಗವಾಗಿ ಮುಂದುವರಿಯಬೇಕು. ಇಂತಹ ವಿಷಯದ ಬಗೆಗೆ ವಿದ್ಯಾರ್ಥಿಗಳಲ್ಲಿ ಅರಿವನ್ನುಂಟು ಮಾಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ರೂಪಿಸಿದ್ದೇವೆ ಎಂದರು.

ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಹ್ಲಾದ್ ಚೌದ್ರಿ, "ವ್ಯವಸ್ಥಿತವಾಗಿ ಹೋರಾಟವನ್ನು ಮಾಡದಿದ್ದರೆ ನಾವು ಹಲವು ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ " ಎಂದು ಎಚ್ಚರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಎಚ್.ಕೆ. ಮಂಜುನಾಥ ರೆಡ್ಡಿ ಅವರು, ವಿದ್ಯಾರ್ಥಿಗಳು ಜನಪರ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಈ ಭಾಗಕ್ಕಾಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರಾಧ್ಯಾಪಕರಾದ ಡಾ.ಹುಚ್ಚುಸಾಬ್ , ಘಂಟೆಪ್ಪ ಶೆಟ್ಟಿ ಹಾಜರಿದ್ದರು. ಅಧ್ಯಾಪಕರಾದ ದಸ್ತಗೀರಸಾಬ್ ದಿನ್ನಿ, ಟಿ.ದುರುಗಪ್ಪ, ಗುರುರಾಜ, ರುದ್ರಮುನಿ, ಸಿದ್ದೇಶ್, ಶ್ರೀನಿವಾಸ್ ,ನೇತ್ರಾವತಿ, ರುದ್ರಮ್ಮ, ಸುಜಾತ, ವೀರೇಶ , ತಿಪ್ಪೇರುದ್ರ ,ಶ್ರೀನಿವಾಸ ಮುಂತಾದವರು ಉಪಸ್ಥಿತರಿದ್ದರು.

Share this article