ಸಂದೀಪ್ ವಾಗ್ಲೆ
ಕನ್ನಡಪ್ರಭ ವಾರ್ತೆ ಮಂಗಳೂರುದಶಕದ ಹಿಂದೆ ಕರಾವಳಿಯ ಗ್ರಾಮಾಂತರದಲ್ಲಿ ಮಾತ್ರವಲ್ಲ, ನಗರ ಪ್ರದೇಶಗಳಲ್ಲೂ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ ದನ- ಕರುಗಳು ಈಗ ಕಾಣಸಿಗುವುದೇ ಅಪರೂಪ. ಯಾಕೆಂದರೆ ಹತ್ತೇ ವರ್ಷಗಳಲ್ಲಿ ದ.ಕ. ಜಿಲ್ಲೆಯ ಗೋ ಸಂತತಿ ಶೇ.40ಕ್ಕೂ ಅಧಿಕ ಕ್ಷೀಣಿಸಿದೆ!
ಹೌದು. ಕರಾವಳಿ ಜಿಲ್ಲೆಯಲ್ಲೀಗ ಗೋವು ಸಾಕುವ ಆಸಕ್ತಿ ಗಣನೀಯವಾಗಿ ತಗ್ಗಿದೆ. ಆದರೆ ಗೋ ಹೆಸರಿನ ರಾಜಕಾರಣ ಮಾತ್ರ ಹೆಚ್ಚಾಗುತ್ತಲೇ ಇದೆ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಪ್ರತಿ 5 ವರ್ಷಗಳಿಗೊಮ್ಮೆ ಜಾನುವಾರು ಗಣತಿ ಮಾಡುತ್ತದೆ. ಅದರ ಅಂಕಿ ಅಂಶಗಳ ಪ್ರಕಾರ ದ.ಕ. ಜಿಲ್ಲೆಯಲ್ಲಿ 2007ರಲ್ಲಿದ್ದ ಜಾನುವಾರು (ಹಸು, ಎಮ್ಮೆ)ಗಳ ಸಂಖ್ಯೆ 2019ರ ವೇಳೆಗೆ ಶೇ.40ರಷ್ಟು ಕುಸಿದಿದೆ. 2019ರಿಂದೀಚೆಗೆ (ಹೊಸ ಗಣತಿ ಇನ್ನಷ್ಟೇ ಆಗಬೇಕಿದೆ) ಈ ಸಂಖ್ಯೆ ಇನ್ನಷ್ಟು ಕುಸಿದಿರುವ ಸಾಧ್ಯತೆಯನ್ನು ಅಧಿಕಾರಿಗಳು ಅಂದಾಜಿಸಿದ್ದಾರೆ.ಗೋ ಸಂತತಿ ಎಷ್ಟಿತ್ತು, ಎಷ್ಟಿದೆ?:
2007ರ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ ಸ್ಥಳೀಯ ಹಾಗೂ ಮಿಶ್ರತಳಿ ದನಗಳು, ಎಮ್ಮೆ ಸೇರಿ 4,11,728 ಜಾನುವಾರುಗಳಿದ್ದವು. 2012ರ ಗಣತಿಯಂತೆ ಈ ಸಂಖ್ಯೆ 2,57,415ಕ್ಕೆ ಇಳಿದಿದೆ. 2019ರಲ್ಲಿ ನಡೆದ ಕೊನೆಯ ಗಣತಿಯ ಪ್ರಕಾರ 2,52,401 ಮಾತ್ರ ಜಾನುವಾರುಗಳಿವೆ. ಈ ವರ್ಷ ಹೊಸ ಗಣತಿ ಆಗಬೇಕಿದ್ದು, ಪ್ರಸ್ತುತ ಸ್ಥಿತಿಗತಿ ಇನ್ನಷ್ಟೇ ಗೊತ್ತಾಗಬೇಕಿದೆ.ಅಳಿವಿನಂಚಿಗೆ ಸ್ಥಳೀಯ ಗೋತಳಿ!:
ಇನ್ನು, ತಲೆತಲಾಂತರಗಳಿಂದ ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿ, ಆರೋಗ್ಯಯುತ ಜೀವನ ಶೈಲಿಗೆ ಕಾರಣವಾಗಿದ್ದ ಊರಿನ ತಳಿಯ ಗೋವುಗಳು ವಿನಾಶದ ಅಂಚಿಗೆ ತಳ್ಳಲ್ಪಟ್ಟಿರುರುವುದು ಅಂಕಿ ಅಂಶಗಳಿಂದ ದೃಢಪಟ್ಟಿದೆ. 15 ವರ್ಷಗಳ ಹಿಂದಿನ ಅಂಕಿ ಅಂಶಗಳಿಗೆ ಹೋಲಿಸಿದರೆ ಶೇ.70ರಷ್ಟು ಸ್ಥಳೀಯ ಗೋತಳಿ ನಶಿಸಿಹೋಗಿದೆ. ಇವುಗಳ ಜಾಗವನ್ನು ಮಿಶ್ರತಳಿ ಹಸುಗಳು ಆಕ್ರಮಿಸಿವೆ, ಅದೂ ನಿರೀಕ್ಷೆಯ ಸಂಖ್ಯೆಯಲ್ಲಿಲ್ಲ. 2007ರಲ್ಲಿ ಊರಿನ ತಳಿಯ ಗೋವುಗಳು 2,29,838 ಇದ್ದರೆ, 2012ರಲ್ಲಿ 1,13,747ಕ್ಕೆ ಇಳಿದಿತ್ತು. 2019ರಲ್ಲಿ ಈ ಸಂಖ್ಯೆ ಬರೋಬ್ಬರಿ 65,997ಕ್ಕೆ ಕುಸಿದಿದೆ!ಮಿಶ್ರತಳಿಯ ಗೋವುಗಳು 2007ರಲ್ಲಿ 1,66,771 ಇದ್ದರೆ, 2019ರಲ್ಲಿ 1,84,572ಕ್ಕೆ ಏರಿಕೆಯಾಗಿವೆ. ಉಳಿದಂತೆ ಎಮ್ಮೆಗಳು 2007ರಲ್ಲಿ 15,119 ಇದ್ದರೆ, 2012ರಲ್ಲಿ 3700, 2019ರಲ್ಲಿ 1832 ಇದ್ದವು.
ಯುವಕರಲ್ಲಿಲ್ಲ ಗೋ ಸಾಕಣೆ ಆಸಕ್ತಿ:ಗೋ ಸಂತತಿ ತೀವ್ರ ಇಳಿಮುಖವಾಗುತ್ತಿರುವ ಕುರಿತು ‘ಕನ್ನಡಪ್ರಭ’ದೊಂದಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ, ಪ್ರಸ್ತುತ ಹಿಂದಿನ ತಲೆಮಾರಿನವರು ಮಾತ್ರ ಗೋ ಸಾಕಣೆಯಲ್ಲಿ ತೊಡಗಿದ್ದಾರೆ. ಯುವ ಜನಾಂಗ ಹೈನುಗಾರಿಕೆಯಲ್ಲಿ ಆಸಕ್ತಿ ವಹಿಸುತ್ತಿಲ್ಲ. ಜತೆಗೆ ಕಾರ್ಮಿಕರ ಸಮಸ್ಯೆ ದೊಡ್ಡ ಮಟ್ಟದಲ್ಲಿದೆ. ಸಣ್ಣ ಸಣ್ಣ ಹಿಡುವಳಿಗಳ ಕಾರಣದಿಂದ ಜಾನುವಾರು ಸಾಕಣೆಗೆ ಅವಕಾಶ ಕಡಿಮೆಯಾಗಿದೆ. ಮುಖ್ಯವಾಗಿ ಕಳೆದ 10 ವರ್ಷಗಳಲ್ಲಿ ಬತ್ತ ಬೇಸಾಯ 45 ಸಾವಿರ ಹೆಕ್ಟೇರ್‌ನಿಂದ 9 ಸಾವಿರ ಹೆ.ಗೆ ಇಳಿದಿದೆ. ವಾಣಿಜ್ಯ, ತೋಟಗಾರಿಕೆ ಬೆಳೆಗಳು ಜಾಸ್ತಿಯಾಗುತ್ತಿರುವುದೂ ಗೋ ಸಂತತಿ ಇಳಿಮುಖವಾಗಲು ಕಾರಣ ಎಂದು ಹೇಳುತ್ತಾರೆ.
‘ಊರಿನ ತಳಿಯ ದನಗಳು ಲಾಭದಾಯಕ ಅಲ್ಲ ಎನ್ನುವ ಕಾರಣ ಒಂದೆಡೆಯಾದರೆ, ಈ ತಳಿಯ ಹಸುಗಳನ್ನು ಸಾಕಲು ವಿಶಾಲ ಜಾಗದ ಕೊರತೆಯೂ ಸ್ಥಳೀಯ ತಳಿಯ ಹಸುಗಳ ಸಂಖ್ಯೆ ಕ್ಷೀಣಿಸಲು ಕಾರಣವಾಗಿರಬಹುದು’ ಎಂದೂ ಡಾ.ಅರುಣ್ ಅಭಿಪ್ರಾಯಪಡುತ್ತಾರೆ.ಈಗಿನ ಯುವ ಜನಾಂಗ ಗೋ ಸಾಕಣೆಯಲ್ಲಿ ಆಸಕ್ತಿ ವಹಿಸದಿರುವುದು ಗೋವಿನ ಸಂತತಿ ಇಳಿಮುಖವಾಗಲು ಮುಖ್ಯ ಕಾರಣ. ಜತೆಗೆ ಕಾರ್ಮಿಕರ ಕೊರತೆ, ಸಣ್ಣ ಹಿಡುವಳಿಗಳು, ಕೃಷಿಭೂಮಿ ಕಡಿಮೆಯಾಗುತ್ತಿರುವುದು ಕೂಡ ಕಾರಣ ಆಗಿರಬಹುದು.- ಡಾ.ಅರುಣ್ ಕುಮಾರ್ ಶೆಟ್ಟಿ, ದ.ಕ. ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು.