ಕನ್ನಡಪ್ರಭ ವಾರ್ತೆ ಮಂಡ್ಯ
ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಕೃಷ್ಣರಾಜಸಾಗರ ಜಲಾಶಯ ಸೇರಿದಂತೆ ಈ ಭಾಗದ ಎಲ್ಲ ಜಲಾಶಯಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದರಿಂದ ಯಾವುದೇ ಸಂದರ್ಭದಲ್ಲಾದರೂ ನದಿಗೆ 40 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರನ್ನು ಹರಿಯಬಿಡಲಾಗುವುದು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.ಪ್ರಸ್ತುತ ಕೃಷ್ಣರಾಜಸಾಗರ ಜಲಾಶಯಕ್ಕೆ ೨೦ ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದುಬರುತ್ತಿದ್ದರೆ, ಅಷ್ಟೇ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿಯವರೆಗೆ ನೀರು ಸಂಗ್ರಹವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದರೆ ನದಿಗೆ ಹರಿಯಬಿಡಲಾಗುತ್ತದೆ.
ಈಗಾಗಲೇ ಹೇಮಾವತಿ, ಹಾರಂಗಿ, ಕಬಿನಿ ಜಲಾಶಯಗಳೂ ಭರ್ತಿಯಾಗಿವೆ. ಈ ಭಾಗದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿದುಬರುವ ಸಾಧ್ಯತೆಗಳಿವೆ. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಮುನ್ನಚ್ಚರಿಕಾ ಕ್ರಮವಾಗಿ ಅಣೆಕಟ್ಟೆಯಿಂದ ಇಂದು ಸಂಜೆ ಅಥವಾ ರಾತ್ರಿಯಿಂದ ೨೫ ಸಾವಿರ ಕ್ಯೂಸೆಕ್‌ನಿಂದ ೪೦ ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ನದಿಗೆ ನೀರು ಹರಿಸಲಾಗುವುದು ಎಂದು ಕೃಷ್ಣರಾಜಸಾಗರ ಜಲಾಶಯದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುವುದರಿಂದ ನದಿ ಪಾತ್ರದ ಜನತೆ ಮತ್ತು ತಗ್ಗು ಪ್ರದೇಶದಲ್ಲಿರುವ ಜನರು ಎಚ್ಚರಿಕೆ ವಹಿಸುವುದು ಅಗತ್ಯ. ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಜೊತೆಗೆ ಜಾನುವಾರುಗಳನ್ನೂ ಸಹ ನದಿ ಪಾತ್ರದಲ್ಲಿ ಬಿಡದಂತೆ ಎಚ್ಚರಿಕೆ ನೀಡಲಾಗಿದೆ.
ಸತತವಾಗಿ ಸುರಿದ ಮಳೆಗೆ ಮನೆ ಕುಸಿತಕಿಕ್ಕೇರಿ:
ಸತತವಾಗಿ ಸುರಿದ ಮಳೆಯಿಂದಾಗಿ ಸಮೀಪದ ಕಾರಿಗಾನಹಳ್ಳಿಯಲ್ಲಿ ರೈತನ ಮನೆ ಕುಸಿದಿದೆ.ಗ್ರಾಮದ ರೈತ ಕಾಂತರಾಜು ಅವರ ಮನೆಗೋಡೆ ಭಾರೀ ಮಳೆಗೆ ಕುಸಿದಿದೆ. ಇದರೊಂದಿಗೆ ಮನೆ ಮೇಲ್ಚಾವಣಿ, ಹೆಂಚು, ತೊಲೆಗಳು ನೆಲಸಮವಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. ಮನೆಯಲ್ಲಿದ್ದ ದವಸ, ಧಾನ್ಯ, ಅಡುಗೆ ಪಾತ್ರೆಗಳು ಹಾಳಾಗಿವೆ. ಮನೆ ಹಾನಿಗೊಳಗಾದ ರೈತ ಕಾಂತರಾಜು ಅವರಿಗೆ ಪ್ರಾಕೃತಿಕ ವಿಕೋಪದಡಿಯಲ್ಲಿ ತ್ವರಿತವಾಗಿ ನೆರವು ನೀಡಲು ಮುಂದಾಗಬೇಕು ಗ್ರಾಮ ಮುಖಂಡರಾದ ಜಯರಾಂ, ರಾಜು, ಬೆಟ್ಟೇಗೌಡ ಒತ್ತಾಯಿಸಿದ್ದಾರೆ. ನಿರಂತರ ಮಳೆ ಮನೆ ಗೋಡೆ ಕುಸಿತ
ಮಳವಳ್ಳಿ: ಬುಧವಾರ ರಾತ್ರಿ ಸುರಿದ ನಿರಂತರ ಮಳೆಗೆ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಲಕ್ಷ್ಮಿ ಎಂಬುವವರ ಮನೆ ಗೋಡೆ ಕುಸಿದು ಬಿದ್ದು ಅಪಾರ ನಷ್ಟವಾಗಿದೆ.ಮನೆ ಗೋಡೆ ಬಿದ್ದಾಗ ಮನೆಯಲ್ಲಿದ್ದವರು ಸ್ಪಲ್ಪದರದಲ್ಲಿಯೇ ಅನಾಹುತದಿಂದ ಪಾರಾಗಿದ್ದಾರೆ. ಬುಧವಾರ ಮಧ್ಯಾಹ್ನ ಆರಂಭವಾದ ಮಳೆಯು ರಾತ್ರಿಯೀಡಿ ನಿರಂತರವಾಗಿ ಸುರಿದಿದೆ. ಇದ್ದರಿಂದ ಗುರುವಾರ ಬೆಳಗಿನ ಜಾವ ಗೋಡೆ ಕುಸಿದಿದೆ. ಇದ್ದರಿಂದ ಸುಮಾರು 60 ಸಾವಿರ ರು ನಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಲಕ್ಷ್ಮಿ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ರಾಜಸ್ವ ನಿರೀಕ್ಷಕ ಮಂಜುನಾಥ್, ಗ್ರಾಮ ಲೆಕ್ಕಿಗ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.