ಉತ್ತರ ಕನ್ನಡದಲ್ಲಿ ಜಿಲ್ಲೆಯಲ್ಲಿ 455 ಕೆರೆ ಒತ್ತುವರಿ

KannadaprabhaNewsNetwork | Published : Nov 29, 2023 1:15 AM

ಸಾರಾಂಶ

ಕಂದಾಯ ಇಲಾಖೆ ಅಧಿಕಾರಿಗಳ ತಂಡ ರಚಿಸಿ ಪ್ರತಿ ತಿಂಗಳು ಅವರಿಗೆ ಗುರಿ ನೀಡಿ ಕೆರೆ ಒತ್ತುವರಿ ತೆರವು ಮಾಡಲಾಗುತ್ತಿದೆ

ಕಾರವಾರ:

ಜಿಲ್ಲೆಯಲ್ಲಿ 2118 ಸರ್ಕಾರಿ ಕೆರೆಗಳಿದ್ದು, 455 ಕೆರೆ ಒತ್ತುವರಿಯಾಗಿದೆ. ಇದರಲ್ಲಿ 278 ಒತ್ತುವರಿ ತೆರವು ಮಾಡಲಾಗಿದೆ. 177 ಬಾಕಿಯಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವೆಡೆ ಕೆರೆಯ ಜಾಗದಲ್ಲಿ ಜನವಸತಿ ಬಂದಿದೆ. ವಸತಿ ಸಮುಚ್ಚಯ ನಿರ್ಮಿಸಿಕೊಂಡಿದ್ದಾರೆ. ಇನ್ನು ಕೆಲವೆಡೆ ಕೆರೆಯ ಮೂಲ ಸ್ವರೂಪವೇ ಬದಲಾಗಿದೆ. ಇದನ್ನು ತೆರವುಗೊಳಿಸುವುದು ಸವಾಲಿನ ಕೆಲಸವಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳ ತಂಡ ರಚಿಸಿ ಪ್ರತಿ ತಿಂಗಳು ಅವರಿಗೆ ಗುರಿ ನೀಡಿ ಕೆರೆ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದರು.ಕಂದಾಯ ಗ್ರಾಮ:ಜಿಲ್ಲೆಯಲ್ಲಿ ಒಟ್ಟೂ 16 ದಾಖಲೆ ರಹಿತ ಜನವಸತಿ (ಲಂಬಾಣಿ ತಾಂಡಾ) ಪ್ರದೇಶಗಳನ್ನು ಹೊಸ ಕಂದಾಯ ಗ್ರಾಮ ರಚನೆಗಾಗಿ ಗುರುತಿಸಲಾಗಿದೆ. ಹಳಿಯಾಳ ಹಾಗೂ ಮುಂಡಗೋಡ ತಾಲೂಕಿನಲ್ಲಿ ತಲಾ 8 ದಾಖಲೆ ರಹಿತ ಜನವಸತಿ ಪ್ರದೇಶದಲ್ಲಿ 6 ಹೊಸ ಕಂದಾಯ ಗ್ರಾಮ ರಚನೆಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಉಳಿದ 2 ಗ್ರಾಮಗಳ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಸರ್ಕಾರದ ಮಟ್ಟದಲ್ಲಿ ಬಾಕಿಯಿದೆ ಎಂದು ತಿಳಿಸಿದರು.ತಹಸೀಲ್ದಾರ್, ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಇರುವ ಪ್ರಕರಣಗಳನ್ನು ವಿಳಂಬ ಮಾಡದೇ ವಿಚಾರಣೆ ಮಾಡಲು ಸೂಚಿಸಲಾಗಿದೆ. ಗರಿಷ್ಠ ಆರು ತಿಂಗಳ ಒಳಗಾಗಿ ಇತ್ಯರ್ಥ ಮಾಡಲು ಹೇಳಲಾಗಿದೆ. ಕಳೆದ ಆರು ತಿಂಗಳಲ್ಲಿ ಹೊಸ ಜಮೀನು ಖರೀದಿ, ವಾರ್ಸಾ ಬದಲು ಇತ್ಯಾದಿಗೆ ಸಂಬಂಧಿಸಿ 54 ಸಾವಿರ ಅರ್ಜಿ ಸ್ವೀಕರಿಸಲಾಗಿದ್ದು, 53 ಸಾವಿರ ವಿಲೇವಾರಿ ಮಾಡಲಾಗಿದೆ. ಅಟಲಜಿ ಜನಸ್ನೇಹಿ ಕೇಂದ್ರ 35 ಇದ್ದು, 54 ವಿವಿಧ ಪ್ರಮಾಣ ಪತ್ರ ನೀಡಲಾಗುತ್ತಿದೆ. ಇಲ್ಲಿ 96 ಸಾವಿರ ಅರ್ಜಿ ಬಂದಿದ್ದು, 88 ಸಾವಿರ ಅರ್ಜಿಯನ್ನು ಸ್ವೀಕರಿಸಿ ಪ್ರಮಾಣ ಪತ್ರ ನೀಡಲಾಗಿದೆ. 4 ಸಾವಿರ ತಿರಸ್ಕಾರ ಮಾಡಲಾಗಿದೆ. ಎಸ್ಸಿ-ಎಸ್ಟಿ ಸಮುದಾಯಕ್ಕೆ ಸರ್ಕಾರದಿಂದ ಮಂಜೂರಾಗುವ ಜಮೀನನ್ನು (ಪಿಟಿಸಿಎಲ್ ಲ್ಯಾಂಡ್) ಮಾರಾಟ ಮಾಡುವಂತಿಲ್ಲ. ಸರ್ಕಾರದಿಂದ ಪೂರ್ವಾನುಮತಿ ಪಡೆದು ಮಾರಾಟ ಮಾಡಲು ಮಾತ್ರ ಅವಕಾಶವಿದೆ. ಆದರೆ ಸೇಲ್‌ಡಿಡ್ ಮಾಡಿದ್ದರೆ ರದ್ದು ಮಾಡುವ ಅಧಿಕಾರ ಕಂದಾಯ ಇಲಾಖೆಗೆ ಇದೆ. ಸರ್ಕಾರ ಈ ರೀತಿ ಜಮೀನನ್ನು ಪತ್ತೆ ಮಾಡುವ ಬಗ್ಗೆ ಸೂಚನೆ ನೀಡಿದ್ದು, 1,11,065 ಎಕರೆ ಜಮೀನು ಗುರುತಿಸಲಾಗಿದೆ ಎಂದರು.ಇ-ಆಫೀಸ್‌ ಪ್ರಾರಂಭಿಸಲು ಸರ್ಕಾರ ಸೂಚನೆ ನೀಡಿದ್ದು, 12 ತಾಲೂಕಿನಲ್ಲಿ ಪ್ರಾರಂಭಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲೂ ಕೆಲವೇ ಕೆಲವು ಇಲಾಖೆ ಹೊರತಾಗಿ ಉಳಿದೆಡೆ ಇ-ಆಫೀಸ್ ಮಾಡಲಾಗಿದೆ ಎಂದ ಜಿಲ್ಲಾಧಿಕಾರಿ, ಹೊರ ರಾಜ್ಯದಿಂದ ಬಂದವರಿಗೆ ಪ.ಜಾ/ಪ.ಪಂ ಸಿಂಧುತ್ವ ಪ್ರಮಾಣ ಪತ್ರ ನೀಡಲು, ಸೌಲಭ್ಯ ನೀಡಲು ಅವಕಾಶವಿಲ್ಲ. ಆದರೆ ನಮ್ಮ ಜಿಲ್ಲೆಯ ನಗರಸಭೆಗಳಲ್ಲಿ ಆಂಧ್ರಪ್ರದೇಶ, ತಮಿಳುನಾಡಿನಿಂದ ಬಂದ ಪೌರಕಾರ್ಮಿಕರು ಹೆಚ್ಚಿದ್ದಾರೆ. ಹೀಗಾಗಿ ಕೆಲವು ಪ್ರಕರಣದಲ್ಲಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಹಿಂದುಳಿದ ವರ್ಗದ ಇಲಾಖೆಯಲ್ಲಿ ಆದಾಯ ಪ್ರಮಾಣ ಪತ್ರ ನೀಡಲು ₹ 8 ಲಕ್ಷ ನಿಗದಿಯಾಗಿದ್ದು, ಆದರೆ ಕೆಲವರು ಹೇಗಾದರೂ ಮಾಡಿ ₹ 8 ಲಕ್ಷ ಒಳಗೆ ಆದಾಯ ತೋರಿಸುತ್ತಿದ್ದಾರೆ. ₹ 100, ₹ 500, ₹ 1000 ಕಡಿಮೆ ತೋರಿಸಿರುವುದು ಗಮನಕ್ಕೆ ಬಂದಿದೆ. ಇಂತಹ ಅರ್ಜಿಗಳನ್ನು ಪುನಃ ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಇದ್ದರು.ವೈಯಕ್ತಿಕ ಅರ್ಜಿ

ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದಲ್ಲಿ ಕಾರವಾರದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ 155 ಅರ್ಜಿ ಬಂದಿದ್ದು, 122 ಅರ್ಜಿ ವಿಲೇವಾರಿ ಆಗಿದೆ. 17 ಪರಿಶೀಲನೆ ಆಗಿದೆ. 16 ಅರ್ಜಿ ಬಾಕಿಯಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು. ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿ ಬಾಕಿ ಉಳಿದಿಲ್ಲ. ಯುವತಿಯಿಂದ ಮೋಸವಾಗಿದೆ. ನ್ಯಾಯ ಕೊಡಿಸಿ, ಮನೆ ಕಳ್ಳತನವಾಗಿದೆ. ತೊಂದರೆಯಾಗಿದೆ. ಸಹಾಯ ಮಾಡಿ ಎಂದು ಕೋರಿದ್ದರು. ಈ ಬಗ್ಗೆ ಪೊಲೀಸರಿಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಸೂಚಿಸಲಾಗಿದೆ. ಮಾಸಾಶನ ನೀಡುವ ಬಗ್ಗೆ ಚಿಂತಿಸಲಾಗಿತ್ತು. ಆದರೆ ಅವರು ಅದನ್ನು ಪಡೆದುಕೊಳ್ಳುತ್ತಿದ್ದಾರೆ. ಮೂಲಭೂತ ಸೌಕರ್ಯ ನೀಡಬೇಕು ಎಂದು ಅರ್ಜಿ ನೀಡಿದ್ದಾರೆ. ಖಚಿತವಾಗಿ ಯಾವ ರೀತಿ ಮೂಲಭೂತ ಸೌಕರ್ಯ ಎನ್ನುವುದನ್ನು ಬರೆದಿಲ್ಲ. ನಾಲ್ಕು ಜನರು ಉದ್ಯೋಗ ನೀಡಬೇಕು ಎಂದು ಕೋರಿದ್ದರು. ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಸಿ ನೋಡಲಾಗಿದೆ ಎಂದು ಮಾಹಿತಿ ನೀಡಿದರು.

Share this article