48 ಗ್ರಾಮ ಪಂಚಾಯಿತಿಗಳು ಕ್ಷಯ ಮುಕ್ತ

KannadaprabhaNewsNetwork | Published : Mar 21, 2025 12:33 AM

ಸಾರಾಂಶ

ಚಾಮರಾಜನಗರದ ಜಿಲ್ಲಾಢಳಿತ ಭವನದಲ್ಲಿರುವ ಹಳೆ ಕೆಡಿಪಿ ಸಭಾಂಗಣದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ (ಎನ್.ಟಿ.ಇ.ಪಿ) ಹಮ್ಮಿಕೊಳ್ಳಲಾಗಿದ್ದ ಕ್ಷಯಮುಕ್ತ ಗ್ರಾಪಂ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯಲ್ಲಿ ಒಟ್ಟು 48 ಗ್ರಾಮ ಪಂಚಾಯಿತಿಗಳು ಕ್ಷಯಮುಕ್ತವೆಂದು ಘೋಷಣೆಯಾಗಿದ್ದು ಆರೋಗ್ಯ ಇಲಾಖೆ ಹಾಗೂ ಗ್ರಾಪಂಗಳ ಕಾಳಜಿ, ಬದ್ಧತೆಯಿಂದ ಈ ಹೆಮ್ಮೆಯ ಸಾಧನೆ ಸಾದ್ಯವಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿರುವ ಹಳೆ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಡಳಿತ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕೇಂದ್ರದ ವತಿಯಿಂದ, ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮದಡಿ (ಎನ್.ಟಿ.ಇ.ಪಿ) ಹಮ್ಮಿಕೊಳ್ಳಲಾಗಿದ್ದ ಕ್ಷಯಮುಕ್ತ ಗ್ರಾಪಂ ಕಾರ್ಯಾಗಾರ ಉದ್ಘಾಟಿಸಿ ಬಳಿಕ ಕ್ಷಯ ಮುಕ್ತ ಗ್ರಾಪಂಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸತತ ಪರಿಶ್ರಮದಿಂದ ಕ್ಷಯಮುಕ್ತ ಗ್ರಾಪಂಗಳನ್ನಾಗಿಸಲು ಚಟುವಟಿಕೆಗಳನ್ನು ನಡೆಸುತ್ತಿದೆ. ಗ್ರಾಪಂಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಅತ್ಯಂತ ಸಕ್ರಿಯವಾಗಿ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿರುವ ಕಾರಣದಿಂದ 48 ಗ್ರಾಪಂಗಳು ಕ್ಷಯ ಮುಕ್ತವೆಂದು ಘೋಷಣೆಯಾಗಿವೆ. ಉಳಿದ ಗ್ರಾಪಂಗಳು ಸಹ ಶೀಘ್ರವೇ ಕ್ಷಯ ಮುಕ್ತವಾಗಲೆಂದು ಹೇಳಿದರು.ಗ್ರಾಮ ಪಂಚಾಯಿತಿಯು ಗ್ರಾಮ ಸರ್ಕಾರವಾಗಿ ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಹಾಗೂ ಸ್ಥಳೀಯ ಜನರ ಅಭಿವೃದ್ಧಿಗೆ ಮುಂದಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ದತಿ ಮುಕ್ತ ಗ್ರಾಪಂಗಳಾಗಿಯೂ ಘೋಷಣೆಯಾಗುವ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕು. ಶಾಲೆಯಿಂದ ಯಾವ ಮಕ್ಕಳು ಹೊರಗುಳಿಯಬಾರದು. ಶೈಕ್ಷಣಿಕ ಫಲಿತಾಂಶದಲ್ಲಿ ಶೇ.100 ರಷ್ಟು ಸಾಧನೆ ಮಾಡುವಂತಾಗಬೇಕು ಎಂದರು.

ಜಿಲ್ಲೆಯಲ್ಲಿ ಶಿಕ್ಷಣ ಆರೋಗ್ಯ ಇನ್ನಿತರ ಮೂಲ ಸೌಕರ್ಯಗಳಿಗೆ ಪ್ರಥಮಾದ್ಯತೆ ನೀಡಿದ್ದೇವೆ. ವಿಶೇಷವಾಗಿ ಆರೋಗ್ಯ ಸೇವೆಗಳನ್ನು ಸಮರ್ಪಕವಾಗಿ ತಲುಪಿಸುವ ಕೆಲಸವಾಗುತ್ತಿದೆ, ಮಕ್ಕಳ ಲಸಿಕಾ ಅಭಿಯಾನದಲ್ಲಿ ಚಾಮರಾಜನಗರ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ, ಮಧುಮೇಹಿಗಳ ಆರೋಗ್ಯ ತಪಾಸಣೆ ಚಿಕಿತ್ಸೆಗೆ ಪ್ರತಿ ಬುಧವಾರ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆಗಳಲ್ಲಿ ಬೆಳಿಗ್ಗೆಯೇ ವಿಶೇಷ ಸೇವೆ ಒದಗಿಸುವಲ್ಲಿ ಜಿಲ್ಲೆ ಮೊದಲಾಗಿದೆ ಎಂದರು.ಜಿಪಂ ಸಿಇಒ ಮೋನಾರೋತ್ ಮಾತಾನಾಡಿ, ಹನೂರಿನ ತಾಲೂಕಿನಲ್ಲಿ ಕ್ಷಯಮುಕ್ತ ಗ್ರಾಪಂಗಳನ್ನಾಗಿ ಘೋಷಿಸಲು ಸಕ್ರಿಯ ಕಾರ್ಯಚಟುವಟಿಕೆಗಳು ನಡೆಯುವಂತಾಗಬೇಕು. ಗ್ರಾಪಂಗಳು ಆರೋಗ್ಯ ಸುಧಾರಣಾ ಕಾರ್ಯಕ್ರಮಗಳಿಗೆ ಕೈ ಜೋಡಿಸುತ್ತಿದೆ. ಸ್ವಚ್ಛ ಭಾರತ ಅಭಿಯಾನ ಯಶಸ್ವಿಗೂ ಎಲ್ಲ ಸಹಕಾರ ಅಗತ್ಯವಿದೆ. ಪಂಚಾಯತಿಗಳಲ್ಲಿ ತೆರಿಗೆ ವಸೂಲಾತಿಯಲ್ಲಿ ಹೆಚ್ಚಳವಾದರೆ ಸ್ವಂತ ಸಂಪನ್ಮೂಲ ಕ್ರೋಡಿಕರಣಗೊಂಡು ಅಭಿವೃದ್ದಿ ಕೆಲಸಗಳಿಗೆ ವಿನಿಯೋಗಿಸಬಹುದೆಂದು ತಿಳಿಸಿದರು. ಡಿಎಚ್‌ಒ ಡಾ.ಚಿದಂಬರ ಮಾತನಾಡಿ, ಜಿಲ್ಲೆಯಲ್ಲಿ ಕ್ಷಯ ಮುಕ್ತ ಗ್ರಾಪಂಗಳಾಗಲು ಆರೋಗ್ಯ ಇಲಾಖೆಗೆ ಜಿಲ್ಲಾಡಳಿತ, ಜಿಪಂ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಜಿಲ್ಲಾಧಿಕಾರಿ ಕ್ಷಯ ರೋಗ ಪತ್ತೆಗೆ ಅಗತ್ಯ, ಅತ್ಯಾಧುನಿಕ ವೈದ್ಯ ಉಪಕರಣಗಳನ್ನು ಮಂಜೂರು ಮಾಡಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿಯೇ ಎಲ್ಲಾ ಚಿಕಿತ್ಸೆಗಳಿಗೆ ಅನುಕೂಲವಾಗಿದೆ. ಕ್ಷಯರೋಗ ನಿಯಂತ್ರಣದಲ್ಲಿ 26ನೇ ಸ್ಥಾನದಲ್ಲಿದ್ದ ಚಾಮರಾಜನಗರ ಜಿಲ್ಲೆ ಪ್ರಸ್ತುತ 3 ನೇ ಸ್ಥಾನಕ್ಕೆ ಬಂದಿದೆ ಎಂದರು.

ಪ್ರಾಸ್ತವಿಕವಾಗಿ ಮಾತನಾಡಿದ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ರವಿಕುಮಾರ್, ಕ್ಷಯರೋಗ ಮುಕ್ತ ಭಾರತ ಮಾಡಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅತ್ಯಾಧುನಕ ಪ್ರಯೋಗಶಾಲೆಗಳ ಮೂಲಕ ರೋಗವನ್ನು ಪತ್ತೆಹಚ್ಚಲಾಗುತ್ತಿದೆ. ರೋಗದ ಕುರಿತು ಜನರಲ್ಲಿ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಿ ಕಳಂಕ ತಾರತಮ್ಯವನ್ನು ತೊಡೆದು ಹಾಕಲು ಹೆಚ್ಚು ಅರಿವು ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಹಂತ ಹಂತವಾಗಿ ಎಲ್ಲಾ ಗ್ರಾಪಂಗಳನ್ನು ಕ್ಷಯಮುಕ್ತವಾಗಿಸಲು ಯೋಜನಾ ಬದ್ದವಾಗಿ ಕಾರ್ಯೊನ್ಮುಖರಾಗಿದೇವೆ ಎಂದರು. ಕಾರ್ಯಕ್ರಮದಲ್ಲಿ ತಾಲುಕು ಆರೋಗ್ಯಾಧಿಕಾರಿಗಳು, ತಾಪಂ ಅಧಿಕಾರಿಗಳು, ಗ್ರಾಪಂ ಪ್ರತಿನಿಧಿಗಳು ಉಪಸ್ಥಿತರಿದ್ದರು.

Share this article