ಕನ್ನಡಪ್ರಭ ವಾರ್ತೆ ಬಳ್ಳಾರಿ
ಶ್ರೀ ಪಂಚಾಕ್ಷರಿ ಕರಾಟೆ ಸಂಸ್ಥೆ ನಗರದ ವಾಲ್ಮೀಕಿ ಭವನದಲ್ಲಿ ಎರಡು ದಿನಗಳ 4ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗಳಿಗೆ ಶನಿವಾರ ಚಾಲನೆ ದೊರೆಯಿತು.ನಗರದ ಚೈತನ್ಯ ಕಾಲೇಜಿನ ಮುಖ್ಯಸ್ಥ ಹಾಗೂ ನಿವೃತ್ತ ಪ್ರಾಂಶುಪಾಲ ಡಾ.ರಾಧಾಕೃಷ್ಣ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಬಳ್ಳಾರಿಯಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳ ಕರಾಟೆ ಪಟುಗಳನ್ನು ಬಳ್ಳಾರಿಗೆ ಆಹ್ವಾನಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯ.ಇಂತಹ ಸ್ಪರ್ಧೆಗಳು ನಿರಂತರವಾಗಿ ನಗರದಲ್ಲಿ ನಡೆಯುವಂತಾಗಬೇಕು ಎಂದರು.ಕರಾಟೆ ಆತ್ಮರಕ್ಷಣೆಯ ಕಲೆಯಾಗಿದ್ದು, ಇದು ಪ್ರತಿಯೊಬ್ಬ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಕಲಿಯಬೇಕಾದ ಕಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕರಾಟೆ ಸೇರಿದಂತೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರಲ್ಲದೆ, ಮಕ್ಕಳನ್ನು ಬರೀ ಪಠ್ಯಕ್ಕೆ ಸೀಮಿತಗೊಳಿಸಿದೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪೋಷಕರು ಹಾಗೂ ಶಿಕ್ಷಕರು ಪ್ರೇರೇಪಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉದ್ಯಮಿ ಡಾ. ರಮೇಶ್ ಗೋಪಾಲ್ ಮಾತನಾಡಿದರು.ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎಂ. ಕಿರಣ್ ಕುಮಾರ್, ಹೋಟೆಲ್ ಉದ್ಯಮಿ ಶಬರಿ ರವಿಚಂದ್ರನ್, ಹಿರಿಯ ಕರಾಟೆಪಟು ಕಟ್ಟೇಸ್ವಾಮಿ ಮತ್ತಿತರರಿದ್ದರು.
ಶ್ರೀ ಪಂಚಾಕ್ಷರಿ ಕರಾಟೆ ಸಂಸ್ಥೆಯ ಅಧ್ಯಕ್ಷ ಬಂಡ್ರಾಳು ಮೃತ್ಯುಂಜಯಸ್ವಾಮಿ ಪ್ರಾಸ್ತಾವಿಕ ಮಾತನಾಡಿ, ಸಂಸ್ಥೆಯ ಉದ್ದೇಶ ಹಾಗೂ ನಡೆದು ಬಂದ ದಾರಿ ಕುರಿತು ವಿವರಿಸಿದರು.ಇದೇ ವೇಳೆ ಕರಾಟೆ ಕ್ಷೇತ್ರದಲ್ಲಿ ಸಾಧನೆಗೈದಿರುವ ಹಾಗೂ ಸಾವಿರಾರು ವಿದ್ಯಾರ್ಥಿಗಳಿಗೆ ಕರಾಟೆ ಕಲಿಸಿ ಮಾರ್ಗದರ್ಶನ ಮಾಡಿರುವ ಹುಬ್ಬಳ್ಳಿಯ ಹನ್ಸಿ ಅಣ್ಣಪ್ಪ ಮರ್ಕಲ್ ಅವರಿಗೆ ರಾಜ್ಯಮಟ್ಟದ ಕರಾಟೆ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ₹11 ಸಾವಿರ ನಗದು ಹಾಗೂ ಫಲಕದೊಂದಿಗೆ ಸಮಾರಂಭದಲ್ಲಿ ಹಾಜರಿದ್ದ ಗಣ್ಯರು ಅಣ್ಣಪ್ಪ ಮರ್ಕಲ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಎರಡು ದಿನಗಳ ರಾಷ್ಟ್ರಮಟ್ಟದ ಕರಾಟೆ ಸ್ಫರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ 1500 ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ್ದಾರೆ. ಶ್ರೀ ಪಂಚಾಕ್ಷರಿ ಕರಾಟೆ ಸಂಸ್ಥೆ ಅಸ್ವಿತ್ವಕ್ಕೆ ಬಂದು 11 ವರ್ಷಗಳು ಪೂರೈಸಿದ್ದರಿಂದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಆಯೋಜಿಸಲಾಗಿದೆ.